ವರುಣನ ರುದ್ರತಾಂಡವದಿಂದಾಗಿ ಕ್ಷೇತ್ರದಲ್ಲಿ ೨೦೦೦ ಕೋಟಿ ರೂ. ನಷ್ಟ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ :
ವರುಣ ದೇವನ ರುದ್ರ ತಾಂಡವದಿಂದಾಗಿ ಅರಭಾವಿ ಕ್ಷೇತ್ರದ ನದಿ ತೀರದ ೨೯ ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಅಂದಾಜು ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಆದ್ದರಿಂದ 2000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ನೀಡಬೇಕೆಂದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಶನಿವಾರ ಸಂಜೆ ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸಂತ್ರಸ್ಥ ಪೀಡಿತ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ಚುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಗೆ ನಿರೀಕ್ಷೆಗೂ ಮೀರಿ ನೀರು ಹರಿದಿದ್ದರಿಂದ ನಮ್ಮ ಕ್ಷೇತ್ರದಲ್ಲಿ ದೊಡ್ಡ ಜಲಪ್ರಳಯ ಉಂಟಾಗಿದೆ ಎಂದು ಹೇಳಿದರು.
ನೂರು ವರ್ಷಗಳಲ್ಲಿ ಇದೇ ಮೊದಲೆನ್ನಬಹುದಾದ ಭಯಂಕರ ಜಲ ಪ್ರವಾಹದಿಂದ ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಮನೆ ಸೇರಿದಂತೆ ಎಲ್ಲವನ್ನು ತೊರೆದು ಉಟ್ಟ ಬಟ್ಟೆ ಮೇಲೆ ಗಂಜಿ ಕೇಂದ್ರದಲ್ಲಿ ವಾಸವಿದ್ದಾರೆ. ಮನೆಗಳನ್ನು ಹಾಗೂ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ಥರಿಗೆ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಲ್ಲಿ 85ಕ್ಕೂ ಅಧಿಕ ಗಂಜಿ ಕೇಂದ್ರಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.
ಸಂತ್ರಸ್ಥರಿಗೆ ಊಟ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿದೆ. ಬರಿಗೈಯಲ್ಲಿರುವ ಸಂತ್ರಸ್ಥರು ಯಾವುದೇ ಕಾರಣಕ್ಕೂ ಆತಂಕ ಮಾಡಿಕೊಳ್ಳಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಜೊತೆಗೆ ಅಧಿಕಾರಿಗಳು ಸಹ ಇದ್ದಾರೆ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಖುದ್ದಾಗಿ ನಾನೇ ಪರಿಹಾರ ಕಲ್ಪಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಸಂತ್ರಸ್ಥರ ಗಂಜಿ ಕೇಂದ್ರಗಳಲ್ಲಿ ವಾಸವಿರುವ ನಿರಾಶ್ರಿತರಿಗೆ ಸಾರ್ವಜನಿಕರು ಉಪಹಾರ ಹಾಗೂ ಊಟವನ್ನು ತಂದು ಕೊಡುತ್ತಿದ್ದಾರೆ. ಬಟ್ಟೆ, ಹೊದಿಕೆ ಸೇರಿದಂತೆ ಜೀವನಾಂಶಕ ವಸ್ತುಗಳನ್ನು ನೀಡುತ್ತಿರುವ ದಾನಿಗಳ ಕಾರ್ಯವನ್ನು ಶ್ಲಾಘಿಸಿದ ಅವರು, ಸಂತ್ರಸ್ಥರ ನೆರವಿಗೆ ನಮ್ಮ ಸರ್ಕಾರವೂ ಸಹ ಬದ್ಧವಿದೆ ಎಂದು ಹೇಳಿದರು.
5000ಕ್ಕೂ ಅಧಿಕ ಮನೆಗಳ ಕುಸಿತ
29 ಗ್ರಾಮಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರಿಂದ ನೂರಾರು ಕೋಟಿ ರೂ.ಗಳ ಬೆಳೆ, ಆಸ್ತಿ-ಪಾಸ್ತಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. 800 ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತ ಬೆಳೆಗಳ ಹಾನಿಯಾಗಿದೆ. ಅಂದಾಜು 5000ಕ್ಕೂ ಅಧಿಕ ಮನೆಗಳು ಕುಸಿತಗೊಂಡಿವೆ. ರಸ್ತೆಗಳು ಹಾಳಾಗಿವೆ. ಅವರಿಗೆ ವಾಸಿಸಲು ಮನೆಗಳಿಲ್ಲ. ಅಡುಗೆ ಮಾಡಿಕೊಳ್ಳಲು ಪಾತ್ರಗಳಿಲ್ಲ. ಹಾಕಿಕೊಳ್ಳಲಿಕ್ಕೆ ಬಟ್ಟೆಗಳಿಲ್ಲ. ಊಟ ಮಾಡೋಕೆ ಆಹಾರ ಪದಾರ್ಥಗಳಿಲ್ಲ ಎಂದ ಅವರು, ಮನೆಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ವಾಸಿಸಲು ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಕಳೆದೆರಡು ದಿನಗಳಿಂದ ಮಳೆ ಬಾರದ್ದರಿಂದ ಘಟಪ್ರಭಾ ನದಿಗೆ ನೀರು ಬರುವುದು ಕಡಿಮೆಯಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ಧಿಗಳನ್ನು ಹರಡಿಸುತ್ತಿದ್ದಾರೆ. ಅವುಗಳನ್ನು ನಂಬಬೇಡಿ. ಆದ್ದರಿಂದ ಸಂತ್ರಸ್ಥರು ನೀರು ಹೆಚ್ಚುತ್ತಿರುವ ಬಗ್ಗೆ ಭಯ ಪಡಬೇಡಿ ಎಂದ ಅವರು, ಸಂತ್ರಸ್ಥರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಾಡಿಕೊಡಲಾಗುವುದು. ಅಲ್ಲದೇ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಂತರ ಪಟಗುಂದಿ, ಕಮಲದಿನ್ನಿ, ಮುನ್ಯಾಳ, ರಂಗಾಪೂರ ಗ್ರಾಮಗಳಲ್ಲಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷ ವೀರಣ್ಣಾ ಹೊಸೂರ, ಮುಖಂಡರಾದ ನಿಂಗಪ್ಪ ಫಿರೋಜಿ, ಸಂತೋಷ ಸೋನವಾಲ್ಕರ, ಹನಮಂತ ತೇರದಾಳ, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ