ಮಂಗಳವಾರ ಅಧಿಕಾರಿಗಳ ಸಭೆ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಜಲ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ಶೀಘ್ರದಲ್ಲಿಯೇ ಪುನರ್ವಸತಿ ಕಲ್ಪಿಸಿಕೊಡಲಾಗುವುದು. ಪುನರ್ವಸತಿ ಸಂಬಂಧ ಸಮೀಕ್ಷೆ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರ ಬೆಟಗೇರಿ, ತಪಸಿ, ತಪಸಿ ಕ್ರಾಸ್, ಕಪರಟ್ಟಿ, ಖಂಡ್ರಟ್ಟಿ, ತಳಕಟ್ನಾಳ, ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಲ್ಲಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂತ್ರಸ್ಥರಿಗೆ ಆದಷ್ಟು ಬೇಗನೇ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
ಈಗ ಉಂಟಾಗಿರುವ ಪ್ರವಾಹಕ್ಕೆ ಹೆದರಬೇಡಿ. ನಿಮ್ಮೊಂದಿಗೆ ನಮ್ಮ ಸರ್ಕಾರ ಹಾಗೂ ನಾವಿದ್ದೇವೆ. ನಿಮ್ಮ ಜೊತೆ ಕೊನೆಯತನಕ ನಾನಿರುತ್ತೇನೆ. ಭಯಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ಥರಿಗೆ ಧೈರ್ಯದ ಮಾತುಗಳನ್ನು ಹೇಳಿದರು.
ಗೋಕಾಕ-ಶಿಂಗಳಾಪೂರ ಸೇರಿ ಒಟ್ಟು ೩೧ ಗ್ರಾಮಗಳು ಭಾರೀ ಮಳೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಜಲಾವೃತಗೊಂಡಿವೆ. ಇದರಿಂದ ಸಂತ್ರಸ್ಥರು ತಮ್ಮೆಲ್ಲ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತಹವರಿಗೆ ಶಾಶ್ವತ ಮನೆಗಳನ್ನು ಕಟ್ಟಿಸಿಕೊಟ್ಟು ಸರ್ಕಾರದಿಂದ ಸಿಗುವ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು.
ನಿರಾಶ್ರಿತರಿಗೆ ವಸತಿ ಹಾಗೂ ಊಟದ ವ್ಯವಸ್ಥೆಗಾಗಿ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸಂತ್ರಸ್ಥರಿಗೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ. ಅಲ್ಲದೇ ಸಂತ್ರಸ್ಥರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಗಂಜಿ ಕೇಂದ್ರಗಳಲ್ಲಿರುವ ಸಂತ್ರಸ್ಥರು ಹೊರಬಂದ ನಂತರ ಅವರಿಗೆ ಎಲ್ಲ ರೀತಿಯ ನೆರವನ್ನು ಸಹ ನೀಡಲಾಗುವುದು ಎಂದು ಹೇಳಿದರು.
ನಾಳೆ ಅಧಿಕಾರಿಗಳ ಸಭೆ :
ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಾಳೆ ದಿ.೧೩ ರಂದು ಮ. ೩ ಗಂಟೆಗೆ ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಕರೆಯಲಾಗಿದೆ. ಪ್ರವಾಹ ಭೀತಿಯಿಂದ ಎದುರಾಗಿರುವ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಸದಸ್ಯರಾದ ಲಕ್ಷ್ಮಣ ನೀಲನ್ನವರ, ಲಕ್ಷ್ಮಣ ಮಸಗುಪ್ಪಿ, ನ್ಯಾಯವಾದಿ ಎಂ.ಐ. ನೀಲನ್ನವರ, ಶಿವು ಪಾಟೀಲ, ಶ್ರೀಧರ ದಯನ್ನವರ, ಬಸವರಾಜ ಪಾಟೀಲ, ನಾಗಪ್ಪ ಪಾಟೀಲ, ಹನಮಂತ ಅಂಬಿ, ಈರಯ್ಯಾ ಹಿರೇಮಠ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ