Kannada NewsKarnataka NewsPolitics

ಬಿಜೆಪಿ ಹೊಸ ಗ್ಯಾರೆಂಟಿ ಘೋಷಿಸಿದ ಬಸವರಾಜ ಬೊಮ್ಮಾಯಿ

 *ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೮ ಸ್ಥಾನ ಗೆದ್ದರೆ* *ಒಂದು ತಿಂಗಳಲ್ಲಿ ರಾಜ್ಯ ಸರ್ಕಾರ ಮನೆಗೆ ಕಳುಹಿಸುವುದೇ ಬಿಜೆಪಿ ಗ್ಯಾರೆಂಟಿ : ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಕೋಲಾರ : ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಈ ಸರ್ಕಾರವನ್ನು ಒಂದು ತಿಂಗಳಲ್ಲಿ ಮನೆಗೆ ಕಳುಹಿಸುವ ಗ್ಯಾರೆಂಟಿ ನಾವು ಕೊಡುತ್ತೇವೆ. ಕಾಂಗ್ರೆಸ್‌ನ ಐದು ಗ್ಯಾರೆಂಟಿಗೆ ನಮ್ಮದು ಒಂದೇ ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ವತಿಯಿಂದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಅನ್ನಭಾಗ್ಯದ ಬಗ್ಗೆ ಮಾತನಾಡುತ್ತದೆ. ಆದರೆ, ಅನ್ನ ಕೊಡುವಂತ ರೈತನ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ. ಗ್ಯಾರೆಂಟಿಗಳ ಬಗ್ಗೆ ಹೇಳಿದ್ದೇ ಹೇಳಿದ್ದು, ಚುನಾವಣೆಗೂ ಮುನ್ನ ೧೦ ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಕೊಡುತ್ತಿರುವ ಐದು ಕೆಜಿ ಕೂಡ ಕೇಂದ್ರದಿಂದ ಬರುತ್ತಿದೆ. ಇದು ಜನರಿಗೆ ಮಾಡುತ್ತಿರುವ ಮೋಸ. ಹೊಸ ರೇಷನ್ ಕಾರ್ಡ್ ಕೊಡುತ್ತಿಲ್ಲ. ರೇಷನ್ ಕಾರ್ಡ್ ಇಲ್ಲದಿದ್ದರೆ ಗೃಹ ಲಕ್ಷ್ಮೀ ಇಲ್ಲ ಎಂದು ಹೇಳಿದರು.

೨೦೦ ಯುನಿಟ್ ಫ್ರಿ ವಿದ್ಯುತ್ ಅಂತ ಹೇಳಿದ್ದರು. ಆದರೆ, ರಾಜ್ಯದಲ್ಲಿ ಒಬ್ಬರಿಗೆ ೨೦೦ ಯುನಿಟ್ ವಿದ್ಯುತ್ ನೀಡಿರುವ ದಾಖಲೆ ಇದ್ದರೆ ಕೊಡಿ, ಎಲ್ಲ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾರಾಯಿ ಬೆಲೆ ಹೆಚ್ಚಳ ಮಾಡಿ, ಅವರ ದುಡ್ಡಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಗ್ಯಾರೆಂಟಿ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕೂಡಲು ಸೀಟ್ ಇಲ್ಲ. ಸರ್ಕಾರ ದಿವಾಳಿಯಾಗಿದೆ. ನಾವು ಇದ್ದಾಗ ಸರಪ್ಲಸ್ ಬಜೆಟ್ ನೀಡಿದ್ದೇವು. ಇವರು ಬಂದ ಮೇಲೆ ೮ ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡಿದ್ದಾರೆ. ಈಗ ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ರೂ. ಸಾಲ ಇದೆ. ಅಧಿಕಾರಿಗಳ ವರ್ಗಾವಣೆ ಹರಾಜು ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪೊಲಿಸರು ಹಣ ಕೊಟ್ಟು ಬಂದಿರುವುದರಿAದ ಅವರು ಹಣ ವಸೂಲಿಗೆ ನಿಂತಿದ್ದಾರೆ. ದಲಿತ ಮಹಿಳೆಯನ್ನು ಬೆತ್ತಲೆ ಮಾಡಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿಲ್ಲ. ಅಲ್ಪ ಸಂಖ್ಯಾತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೂ ಅದೇ ಜಿಲ್ಲೆಗೆ ಭೇಟಿ ನೀಡಿದರೂ, ಅವಳಿಗೆ ಸಿಎಂ ಸಾಂತ್ವನ ಕೂಡ ಹೇಳಲಿಲ್ಲ. ಇದೇನಾ ಇವರ ಅಲ್ಪ ಸಂಖ್ಯಾತ, ದಲಿತರಿಗೆ ಕೊಡುವ ಗೌರವ ಎಂದು ಪ್ರಶ್ನಿಸಿದರು. 

ಹಿಂದುಳಿದವರ ಸಮಾವೇಶ ಮಾಡುತ್ತಾರೆ. ಅವರಿಗೆ ಏನು ಕೊಟ್ಟಿದ್ದೇವೆ ಎಂದು ಹೇಳುವುದಿಲ್ಲ. ನಾವು ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ. ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಇವರು ಗ್ಯಾರೆಂಟಿಗಳಿಗೆ ನೀಡಿದ್ದಾರೆ. ಇವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ. ದಲಿತ ನಾಯಕರಾದ ಬಸಲಿಂಗಪ್ಪ, ಖರ್ಗೆಯವರನ್ನು ಸಿಎಂ ಮಾಡಲಿಲ್ಲ. ದಲಿತರ ವಿರೋಧಿ ಇರುವ, ಜನಸಾಮಾನ್ಯರ ವಿರೋಧಿಯಾಗಿರುವ ಈ ಸರ್ಕಾರ ಕಿತ್ತು ಹಾಕಬೇಕೆಂದರೆ ಬರುವಂಥ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸಬೇಕು. 

ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿ ಶಾಸ್ವತವಾದ ಮನೆ, ಶೌಚಾಲಯ, ಉಜ್ವಲಾ, ಮುದ್ರಾ ಯೋಜನೆ, ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು, ಕುಡಿಯುವ ನೀರು ಒದಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರಕ್ಕೆ ಕೆಸಿ ವ್ಯಾಲಿ ಯೋಜನೆ ಮಾಡಿ, ಕೊಳಚೆ ನೀರನ್ನು ಕೆರೆಗೆ ತುಂಬಿಸಿ, ಅಂತರ್ಜಲ ಸಂಪೂರ್ಣ ವಿಷವಾಗಿದ್ದು, ಜನರಿಗೆ ಕುಡಿಯಲು ಜಮೀನಿಗೂ ಬಳಕೆ ಮಾಡಲು ಬರುತ್ತಿಲ್ಲ. ಕೆಸಿ ವ್ಯಾಲಿ ಮಾಡಿ ಕೋಲಾರ ಜಿಲ್ಲೆಗೆ ಶಾಸ್ವತವಾಗಿ ತೊಂದರೆ ಮಾಡಿರುವ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ನಾನು ಸಿಎಂ ಆಗಿದ್ದಾಗ ಕೇವಲ ಮೂರು ವರ್ಷದಲ್ಲಿ ೩೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ನರೇಂದ್ರ ಮೋದಿಯವರ ಗ್ಯಾರೆಂಟಿ, ಭಾರತವನ್ನು ಸುಭದ್ರವಾಗಿಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಈ ಸರ್ಕಾರ ದಪ್ಪ ಚರ್ಮದ ಸರ್ಕಾರ. ಈ ಸರ್ಕಾರವನ್ನು ತೊಲಗಿಸಲು ರೈತರು ಬಾರಕೋಲ ತೆಗೆದುಕೊಂಡು ಓಡಿಸಬೇಕು ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು.

*ಕಾಂತರಾಜ ವರದಿ ಸ್ವೀಕಾರ ರಾಜಕೀಯ ಸ್ಟಂಟ್: ಬಸವರಾಜ ಬೊಮ್ಮಾಯಿ*

*ಬಲಾಢ್ಯ ಹಿಂದುಳಿದವರು ಮಾತ್ರ ಮೀಸಲಾತಿ ಲಾಭ ಪಡೆದುಕೊಳ್ಳುತ್ತಿದ್ದಾರೆ: ಬಸವರಾಜ ಬೊಮ್ಮಾಯಿ*

ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸ್ವೀಕಾರ ಮಾಡುವುದು ಕೇವಲ ಲೋಕಸಭೆ ಚುನಾವಣೆಯ ಸ್ಟಂಟ್ ಆಗಿದ್ದು, ಹಿಂದುಳಿದವರಲ್ಲಿ ಬಲಾಢ್ಯರು ಮಾತ್ರ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಅತಿ ಹಿಂದುಳಿದವರಿಗೆ ನ್ಯಾಯಕೊಡಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೋಲಾರದಲ್ಲಿ ಇಂದು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ಎ.ಬಿ.ಸಿ ಎಂದು ವರ್ಗೀಕರಣ ಮಾಡಲಾಗಿದೆ. ಪ್ರವರ್ಗ ೧ರಲ್ಲಿ ಇರುವವರು ಅತ್ಯಂತ ಹಿಂದುಳಿದಿದ್ದಾರೆ. ಅವರಿಗೆ ನಿರಂತರ ಅನ್ಯಾಯವಾಗಿದೆ. ಅವರಿಗೆ ಏನೂ ಸಿಕ್ಕಿಲ್ಲ. ಬಲಿಷ್ಠ ಸಮುದಾಯದವರೇ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. 

ಕಾಂತರಾಜ ವರದಿ ಸ್ವೀಕಾರ ಮಾಡುವುದು ಲೋಕಸಭೆ ಚುನಾವಣೆಯ ಸ್ಟಂಟ್ ಆಗಿದ್ದು, ಇವರು ವರದಿ ಪಡೆಯುವಷ್ಟರಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಬರುತ್ತದೆ. ಅದರ ನೆಪ ಹೇಳಿಕೊಂಡು ಮತ್ತೆ ವರದಿಯನ್ನು ಹಾಗೇ ಇಟ್ಟುಕೊಳ್ಳುತ್ತಾರೆ ಎಂದು ಆರೋಪಿಸಿದರು.

ಇನ್ನು ರಾಷ್ಟçಪತಿ ದ್ರೌಪದಿ ಮುರ್ಮು ಅವರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡಿದುರುವುದನ್ನು ಖಂಡಿಸಿದ ಅವರು, ರಾಷ್ಟçಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಶೋಷಿತರಲ್ಲಿ ಅತ್ಯಂತ ಶೋಷಿತರಾಗಿದ್ದಾರೆ. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವುದು ಖಂಡನೀಯ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button