CrimeKannada NewsKarnataka NewsNationalPolitics

*ಎಂಟು ವರ್ಷದಿಂದ 12 ಕುಟುಂಬಕ್ಕೆ ಭಹಿಷ್ಕಾರ*

ಪ್ರಗತಿವಾಹಿನಿ ಸುದ್ದಿ: ಸ್ವಕುಳಿಸಾಳಿ ಸಮುದಾಯದ 12 ಕುಟುಂಬಗಳಿಗೆ ತಮ್ಮದೇ ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಈ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಸ್ವಕುಳಿಸಾಳಿ ಸಮುದಾಯಕ್ಕೆ ಸೇರಿದ ಸಂಘದ ಆಸ್ತಿ ಹಾಗೂ ಆದಾಯದ ಲೆಕ್ಕ ಕೇಳಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಹಿಷ್ಕೃತ ಕುಟುಂಬಗಳು ಆರೋಪಿಸಿವೆ.

ಶಹಾಪುರದಲ್ಲಿರುವ ಜೀಹ್ವೆಶ್ವರ ಕಲ್ಯಾಣ ಮಂಟಪ ಹಾಗೂ 18 ವಾಣಿಜ್ಯ ಮಳಿಗೆಗಳಿಂದ ವಾರ್ಷಿಕ ಸುಮಾರು 25 ಲಕ್ಷ ರೂ. ಆದಾಯ ಬರುತ್ತಿದೆ ಎನ್ನಲಾಗಿದ್ದು, ಅದರ ಬಗ್ಗೆ ಪ್ರಶ್ನೆ ಮಾಡಿದ 20 ಕುಟುಂಬಗಳ ವಿರುದ್ಧ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಬಹಿಷ್ಕಾರ ಘೋಷಿಸಿದ್ದಾರೆ.

20 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ದಂಡ ಕಟ್ಟಿದ ಬಳಿಕ ಬಹಿಷ್ಕಾರದಿಂದ ಮುಕ್ತಿಗೊಂಡಿದ್ದರೆ, ಉಳಿದ 12 ಕುಟುಂಬಗಳು ದಂಡ ಕಟ್ಟಲು ನಿರಾಕರಿಸಿದ ಕಾರಣ ಇನ್ನೂ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿವೆ. 

ಈ ಕುಟುಂಬಗಳ ಸದಸ್ಯರಿಗೆ ಮದುವೆ ಸಂಬಂಧ ಕೊಡಬಾರದು, ಪಡೆಯಬಾರದು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಜೊತೆಗೆ ಜೀಹ್ವಶ್ವರ, ಹನುಮ ಹಾಗೂ ಕೃಷ್ಣ ಜಯಂತಿ ಸೇರಿದಂತೆ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿಲ್ಲ. ಇತ್ತೀಚೆಗೆ ಜೀಹ್ವಶ್ವರ ಜಯಂತಿ ಹಿನ್ನೆಲೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹಿಷ್ಕೃತ ಕುಟುಂಬದ ಬಾಲಕನನ್ನು ನಿಂದಿಸಿ ಕಳುಹಿಸಿದ ಘಟನೆ ಕೂಡ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. 

ಬಹಿಷ್ಕಾರ ಹಾಕಿದವರ ವಿರುದ್ಧ ಪೊಲೀಸ್ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪ ಕೇಳಿ ಬಂದಿದೆ. ತಕ್ಷಣ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button