ಸರ್ಕಾರದಿಂದ ಸವಲತ್ತುಗಳನ್ನು ನೀಡುವ ಜವಾಬ್ದಾರಿ ನಮ್ಮದು
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ನಿಮ್ಮೊಂದಿಗೆ ನಮ್ಮ ಸರ್ಕಾರ ಹಾಗೂ ನಾವಿದ್ದೇವೆ. ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ನೀಡುವ ಜವಾಬ್ದಾರಿ ನಮ್ಮದು. ಪ್ರವಾಹ ಬಂದಿರುವುದು ಆಕಸ್ಮಿಕ ಘಟನೆಯಾಗಿದೆ. ಯಾರೂ ಕೂಡ ಇಷ್ಟೊಂದು ಪ್ರಮಾಣದಲ್ಲಿ ಹಾನಿಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಮನೆಗಳನ್ನು ಕಳೆದುಕೊಂಡವರಿಗೆ ಸೂರುಗಳನ್ನು ನಿರ್ಮಿಸಿಕೊಡಲು ನಮ್ಮ ಸರ್ಕಾರ ಬದ್ಧವಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ಥರಿಗೆ ಹೇಳಿದರು.
ಬುಧವಾರ ಪ್ರವಾಹ ಪೀಡಿತ ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ತಾತ್ಕಾಲಿಕವಾಗಿ ಸಂತ್ರಸ್ಥ ಕುಟುಂಬಗಳಿಗೆ ಬಟ್ಟೆ ಹಾಗೂ ಪಾತ್ರೆಗಳಿಗಾಗಿ ೩೮೦೦ ರೂ.ಗಳ ಪರಿಹಾರವನ್ನು ಸರ್ಕಾರ ನೀಡುತ್ತಿದೆ ಎಂದು ಹೇಳಿದರು.
ನದಿ ತೀರದ ಗ್ರಾಮಗಳಲ್ಲಿ ಸರಿಸುಮಾರು ೬ ಸಾವಿರ ಮನೆಗಳು ಪ್ರವಾಹದಿಂದಾಗಿ ನೆಲಕಚ್ಚಿವೆ. ೧೫ ಸಾವಿರಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಕುಟುಂಬಗಳ ಸುರಕ್ಷತೆಗಾಗಿ ನಮ್ಮ ಸರ್ಕಾರ ಹಲವು ಪರಿಹಾರಗಳನ್ನು ಘೋಷಿಸಿದೆ. ಅದರಲ್ಲಿ ಸಂತ್ರಸ್ಥರ ಮನೆಗಳ ನಿರ್ಮಾಣಕ್ಕೆ ೫ ಲಕ್ಷ ರೂ, ಮನೆಗಳ ದುರಸ್ಥಿಗೆ ೧ ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳು ಈಗಾಗಲೇ ಪ್ರಕಟಿಸಿದ್ದಾರೆ.
ಸಂತ್ರಸ್ಥರು ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಬೇಕು. ನಿಮ್ಮ ಸಹಾಯಕ್ಕೆ ಯಾವಾಗಲೂ ನಾವಿದ್ದೇವೆ ಎಂದು ಹೇಳಿದರು.
ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಅಲ್ಲಪ್ಪ ಕಂಕಣವಾಡಿ, ರಂಗಪ್ಪ ಛಪ್ರಿ, ಭೀಮಪ್ಪ ಗೌಡಪ್ಪನವರ, ನಿಂಗಪ್ಪ ದೊಡಮನಿ, ಯಲ್ಲಪ್ಪ ಮುರ್ಕಿಭಾವಿ, ಮಹಾದೇವ ಪತ್ತಾರ, ಮಲಕಾರಿ ವಡೇರ, ಮುತ್ತೇನಗೌಡ ಪಾಟೀಲ, ಮಹಾದೇವ ಕಣವಿ, ಪಾಂಡು ದೊಡಮನಿ, ಮಾರುತಿ ನಾಯ್ಕ, ಅಡಿವೆಪ್ಪ ಕಂಕಾಳಿ, ಮಲ್ಲಿಕಾರ್ಜುನ ಶಿಂತ್ರಿ, ರಾಜೇಸಾಬ ಬಳಿಗಾರ, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ಥ ರೈತ ಕುಟುಂಬಗಳ ಜಾನುವಾರುಗಳಿಗೆ ಮೇವು ವಿತರಣೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ