Latest

ಮತ್ತೆ ಕಲ್ಯಾಣ ಶರಣರ ತತ್ವಗಳನ್ನು ಜಾಗೃತಗೊಳಿಸುವ ಅಭಿಯಾನ

ಮತ್ತೆ ಕಲ್ಯಾಣ ಶರಣರ ತತ್ವಗಳನ್ನು ಜಾಗೃತಗೊಳಿಸುವ ಅಭಿಯಾನ ನಮ್ಮದಾಗಲಿ- ಪ್ರಭುಚನ್ನಬಸವ ಸ್ವಾಮೀಜಿ.

ಪ್ರಗತಿವಾಹಿನಿ ಸುದ್ದಿ, ಅಥಣಿ-

ಹನ್ನೆರಡನೆ ಶತಮಾನದ ಶರಣರ ವಿಚಾರಗಳು ತತ್ವಗಳು ಸರ್ವಕಾಲಕ್ಕೂ ವಿಧಿತವಾಗಿರುವುದರಿಂದ ಅವುಗಳು ಅಲ್ಲಿಯೇ ನಿಂತುಹೋಗದೆ ಆಚರಣೆಯಲ್ಲಿರಲು ಆಗಾಗ ಜಾಗೃತಗೊಳಿಸುವುದೇ ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶ. ಇದರಲ್ಲಿ ಎಲ್ಲ ಸಮುದಾಯದವರು ಪಾಲ್ಗೊಳ್ಳಬೇಕೆಂದು ಅಥಣಿ ಮೋಟಗಿಮಠದ  ಪ್ರಭುಚನ್ನಬಸವ ಸ್ವಾಮಿಗಳು ಕರೆನೀಡಿದರು.

ಅವರು ಸ್ಥಳೀಯ ಮೋಟಗಿಮಠದಲ್ಲಿ ಸಹಮತ ವೇದಿಕೆ ಶ್ರೀಮಠ ಸಾಣೇಹಳ್ಳಿಯ ಸಹಯೋಗದಲ್ಲಿ ಮತ್ತೆ ಕಲ್ಯಾಣ ಸಮಾಲೋಚನೆ ಸಭೆ ಹಾಗೂ ಚಿಂತನಗೋಷ್ಠಿಯ ನೇತೃತ್ವ ವಹಿಸಿ ಮಾತನಾಡುತ್ತ ರಾಜ್ಯಾದ್ಯಂತ ಈ ಅಭಿಯಾನ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿದ್ದು ಬೆಳಗಾವಿಯಲ್ಲಿ ಇದೇ ೨೬ ರಂದು ಜಿಲ್ಲಾ ಸಮಾವೇಶವಿದೆ. ಅದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು.

ಕಲ್ಯಾಣದಲ್ಲಿ ಅಂದು ರಾರಾಜಿಸಿದ ಶರಣರ ತತ್ವಗಳಾದ ಕಾಯಕ, ದಾಸೋಹ ಮೊದಲಾದವುಗಳು ಆಚರಣೆಯಲ್ಲಿ ಸದಾ ಇದ್ದದ್ದೇ ಆದರೆ ನೆಮ್ಮದಿಯ ಬೀಡಾಗುತ್ತದೆ. ನಾವು ಸನಾತನವಾದಿಗಳಲ್ಲ, ಸಂಪ್ರದಾಯವಾದಿಗಳಲ್ಲ, ಶರಣಜೀವಿಗಳಾದ ಕಾರಣ ಶರಣತತ್ವ ಅನುಸರಿಸುತ್ತ ಆತ್ಮಚೈತನ್ಯ ಉನ್ನತಿಕರಿಸಿಕೊಂಡು ಸಮಸಮಾಜ ನಿರ್ಮಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ಶೆಟ್ಟರಮಠದ ಪೂಜ್ಯ ಮರುಳಸಿದ್ಧ ಸ್ವಾಮೀಜಿಯವರು ಮಾತನಾಡುತ್ತಾ ಇತ್ತೀಚಿನ ದಿನಮಾನಗಳಲ್ಲಿ ಬಸವತತ್ವ ಕೇವಲ ಭಾಷಣಕ್ಕೆ, ಒಣ ಡಂಭಾಚಾರಕ್ಕೆ, ಪ್ರಚಾರಕ್ಕೆ ಮಾತ್ರ ಸಿಮೀತವಾಗಿರುವುದು ವಿಪರ್ಯಾಸ. ಅದು ನೈಜವಾದಂತಹ ಆಚರಣೆಯಲ್ಲಿ ನಡೆದುಕೊಂಡು ಬಂದಲ್ಲಿ ಮಾತ್ರವೇ ಎಲ್ಲಡೆ ಕಲ್ಯಾಣ ರಾಜ್ಯ ನಿರ್ಮಾಣವಾಗುವುದು ಎಂದರು.
ಪ್ರಾರಂಭದಲ್ಲಿ ಮುಕ್ತಾಯಿ ಮಹಿಳಾ ಬಳಗದಿಂದ ವಚನ ಪ್ರಾರ್ಥನೆಯಾಯಿತು. ನ್ಯಾಯವಾದಿ ಸಂಗಣ್ಣ ಗೂಗವಾಡ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರೋಹಿಣಿ ಯಾದವಾಡ ನಿರೂಪಿಸಿ ಶರಣು ಸಮರ್ಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button