Kannada NewsPragativahini Special

ನೆಮ್ಮದಿಯ ಬದುಕಿಗೆ ತೃಪ್ತಿಯೇ ಸೋಪಾನ

ಜಯಶ್ರೀ ಅಬ್ಬಿಗೇರಿ

ಹಫೀಸ್ ಆಫ್ರಿಕಾದ ಒಬ್ಬ ಸಂತೃಪ್ತ ರೈತನಾಗಿದ್ದ. ಆತ ಸಂತೋಷವಾಗಿದ್ದುದು ಏಕೆಂದರೆ ಆತ ಸಂತುಷ್ಟನಾಗಿದ್ದ, ಆತ ಸಂತುಷ್ಟನಾಗಿದ್ದ ಏಕೆಂದರೆ ಆತ ಸಂತೋಷದಿಂದಿದ್ದ. ಒಂದು ದಿನ ವಿವೇಕಿಯೊಬ್ಬ ರೈತನಲ್ಲಿಗೆ ಬಂದು ವಜ್ರದ ದಿವ್ಯ ಪ್ರಭೆ ಜ್ಚಾಜಲ್ಯ ಹಾಗೂ ಮಹತ್ವವನ್ನು ಹೇಳಿ ಅದನ್ನು ಹೊಂದಿದ್ದರೆ ಸಿಗುವ ಅಧಿಕಾರ ಮತ್ತು ಘನತೆಯ ಬಗ್ಗೆ ವಿವರಿಸಿದ. ಅಷ್ಟಕ್ಕೆ ಸುಮ್ಮನಾಗದ ಆತ ಹೇಳಿದ. ನಿನ್ನ ಬಳಿ ಹೆಬ್ಬಟ್ಟಿನ ಗಾತ್ರದ ವಜ್ರವಿದ್ದಿದ್ದರೆ ನೀನು ನಿನ್ನದೇ ಆದ ಒಂದು ನಗರವನ್ನು ಹೊಂದಬಹುದು. ನಿನ್ನ ಬಳಿ ಮುಷ್ಟಿಯ ಗಾತ್ರದ ವಜ್ರವಿದ್ದರೆ ನೀನು ನಿನ್ನದೇ ಆದ ದೇಶವನ್ನು ಹೊಂದಬಹುದು. ಅಷ್ಟು ಹೇಳಿ ಅಲ್ಲಿಂದ ನಿರ್ಗಮಿಸಿದ. ಆ ರಾತ್ರಿ ಆ ರೈತ ನಿದ್ರಿಸಲಿಲ್ಲ. ಆತ ಅಸಮಾಧಾನಿಯೂ ಅಸಂತುಷ್ಟನೂ ಆಗಿದ್ದ.
ಮರು ದಿನ ಹಫೀಸ್ ತನ್ನ ಹೊಲವನ್ನು ಮಾರಿ ವಜ್ರವನ್ನು ಅರಸುತ್ತ ಅಲೆಯತೊಡಗಿದ. ಆತ ಆಫ್ರಿಕದಲ್ಲೆಡೆ ಸಂಚರಿಸಿದರೂ ವಜ್ರ ದೊರೆಯಲಿಲ್ಲ. ವಜ್ರಕ್ಕಾಗಿ ಅರಸುತ್ತಾ ಸ್ಫೇನಿಗೆ ಅಲೆಯುತ್ತಾ ಬಂದಾಗ ಆತ ಮಾನಸಿಕವಾಗಿ ದೈಹಿಕವಾಗಿ ಆರ್ಥಿಕವಾಗಿ ಕುಸಿದುಹೋಗಿದ್ದ. ಆತ ಎಷ್ಟೊಂದು ಹತಾಶನಾಗಿದ್ದನೆಂದರೆ ಬಾರ್ಸಿಲೋನಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಬಿಟ್ಟ. ಆತನ ಜಮೀನನ್ನು ಖರೀದಿಸಿದವನು ಅದರಲ್ಲಿ ಹರಿಯುತ್ತಿದ್ದ ನದಿಯಲ್ಲಿ ತನ್ನ ಒಂಟಿಗಳ ಮೈ ತೊಳೆಯುವಾಗ ದಡದಲ್ಲಿದ್ದ ಕಲ್ಲಿನ ಮೇಲೆ ಬಿದ್ದ ಸೂರ್ಯ ಕಿರಣ ಪ್ರತಿಫಲಿಸಿ ಕಣ್ಣು ಕುಕ್ಕಿದಂತಾಯಿತು. ಕುತೂಹಲದಿಂದ ಆ ಕಲ್ಲನ್ನು ಆಯ್ದುಕೊಂಡು ವಿವೇಕಿಗೆ ಕೊಟ್ಟು ಪರೀಕ್ಷಿಸಿದಾಗ ಅದು ವಜ್ರವೆಂದು ತಿಳಿದಿತ್ತು. ಆಶ್ಚರ್ಯ ಆ ಜಮೀನಿನಲ್ಲಿ ಎಕರೆಗಳಷ್ಟು ವಿಸ್ತಾರದ ವಜ್ರದ ಖನಿ ಇದ್ದಿತು.
ಈ ಕತೆಯ ತಾತ್ಪರ್ಯವಿಷ್ಟೇ. ನಮ್ಮಲ್ಲಿ ತೃಪ್ತಿಯ ಮನೋಭಾವವಿದ್ದರೆ ನಾವು ವಜ್ರಗಳ ಖನಿಯ ಮೇಲೆ ನಡೆಯುವದನ್ನು ಮನಗಾಣುತ್ತೇವೆ. ತೃಪ್ತಿ ಎನ್ನುವುದು ನಮ್ಮ ಕಾಲ ಕೆಳಗೇ ಇರುತ್ತದೆ. ಅದನ್ನು ಹುಡುಕುತ್ತ ಬೇರೆಲ್ಲೂ ಹೋಗಬೇಕಿಲ್ಲ. ನಾವು ಮಾಡಬೇಕಿರುವದೆಂದರೆ ಅದನ್ನು ಗುರುತಿಸಬೇಕಷ್ಟೆ.
ತೃಪ್ತಿ ಶಬ್ದದ ಅರ್ಥ ಪರಿಹಾರ, ಸಮಾಧಾನ, ಮೆಚ್ಚುಗೆ, ತಣಿವು, ಸಂತುಷ್ಟಿ ಎಂದಾಗುತ್ತದೆ. ಮಾನವನ ಬದುಕು ತುಂಬಾ ಸರಳವಾಗಿದೆ. ಆದರೆ ಅದನ್ನು ನಾವೇ ವಿವಿಧ ಸಮಸ್ಯೆಗಳಿಂದ ಸಂಕೀರ್ಣವಾಗಿಸಿಕೊಂಡಿದ್ದೇವೆ. ಕ್ಲಿಷ್ಟವಾಗಿಸಿದ್ದೇವೆ ಎನ್ನುವದು ಮೇದಾವಿಗಳ ನುಡಿ. ಬದುಕನ್ನು ಅನೇಕ ದಾರ್ಶನಿಕರು ಜ್ಞಾನಿಗಳು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದಾರೆ. ಜೀವನವೆನ್ನುವದು ಹೋರಾಟ ಎನ್ನುವದೂ ಜೀವನದ ಬಗೆಗಿರುವ ವ್ಯಾಖ್ಯೆಯೇ. ಜೀವನವನ್ನು ಹೋರಾಟಮಯ ಮಾಡಿಕೊಳ್ಳಲು ಕಾರಣವೇನೆಂದು ಹುಡುಕಿದರೆ ನಿರಂತರ ಹೋರಾಟದ ಕೊನೆಯಲ್ಲಿ ನಿರೀಕ್ಷಿಸುತ್ತಿರುವದು ತೃಪ್ತಿಯಲ್ಲದೇ ಮತ್ತೇನೂ ಅಲ್ಲ ಎನ್ನುವದು ತಿಳಿದು ಬರುತ್ತದೆ. ನಿಮ್ಮೊಡನೆ ನೀವು ಜೀವಿಸುವ ಸಮರ್ಥತೆ ಹೊಂದಲು ಒಂದು ಸ್ವತಂತ್ರ ಆತ್ಮ ಸಾಕ್ಷಿ ಬಹು ಮುಖ್ಯ. ಮಹಾನ್ ಕಾರ್ಯಗಳು ಪ್ರಚೋದನೆಯಿಂದ ಮಾಡಲಾಗಿಲ್ಲ. ಅವು ತೃಪ್ತಿಯ ಫಲಗಳು. ಅವು ಸಂತೃಪ್ತಿಯ ಭಾವದಲ್ಲಿ ಸಣ್ಣ ವಿಷಯಗಳ ಒಂದು ಸರಣಿಯಿಂದ ಆಗಿವೆ.


ಔನತ್ಯಕ್ಕೇರಿಸುವ ಮಹಾನ ಶಕ್ತಿ
ತೃಪ್ತಿಯು ನಮ್ಮನ್ನು ಹೊಸ ಹೊಸ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಮ್ಮನ್ನು ಉತ್ಸಾಹದ ಚಿಲುಮೆಯನ್ನಾಗಿಸುವ ಶಕ್ತಿ ತೃಪ್ತಿಗಿದೆ. ನವೀನ ಚಿಂತನೆಗಳನ್ನು ಮಾಡಲೂ ತೃಪ್ತಿ ಸಹಕರಿಸುತ್ತದೆ. ಮಾನವನ ಜೀವನದ ಮೂಲ ಆಶಯವೇ ಸಂತೃಪ್ತಿ. ನಾವೆಲ್ಲ ಬದುಕುವದು ಕೇವಲ ತೃಪ್ತಿಗಾಗಿ ಎಂದರೆ ತಪ್ಪಿಲ್ಲ. ತೃಪ್ತಿಯ ಭಾವವನ್ನು ಹೊಂದಲು ಬದುಕನ್ನು ಒಂದು ಸಂಘರ್ಷವೆಂದು ಸ್ವೀಕರಿಸಿದ್ದೇವೆ. ಸಂತೋಷ ಮತ್ತು ದುಃಖಗಳು ವಿಧಿಲಿಖಿತಗಳಲ್ಲ. ಅವು ನಾವಾಗಿ ಪಡೆದುಕೊಂಡವು ಎನ್ನುವದನ್ನು ತಿಳಿಸಿ ಅತ್ಯುತ್ತಮ ಜೀವನ ನಡೆಸಲು ಕಾರಣವಾಗುತ್ತದೆ. ಜೀವನ ಕ್ರಮವನ್ನು ಔನತ್ಯಕ್ಕೇರಿಸುವ ಮಹಾನ ಶಕ್ತಿಯೇ ತೃಪ್ತಿ.


ಅನುಭವಿಸುವ ಶ್ರೇಷ್ಠ ಭಾವ.
ಭಾವನೆಗಳ ಮೊತ್ತದಂತಿರುವ ತೃಪ್ತಿ ನಾವು ಧ್ಯೇಯಗಳನ್ನು ಹೊಂದಿ ಧ್ಯೇಯಗಳಿಂದಲೇ ಮುಂದುವರೆಯುವಂತೆ ಸಾಮಾಜಿಕ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ದೇವರಿಗೆ ಕೃತಜ್ಞರಾಗಲು ಸಹಾಯ ಮಾಡುವ ಉತೃಷ್ಟ ಗುಣ ಸಂತೃಪ್ತಿಗಿದೆ. ಇದಲ್ಲದೆ ಕರ್ತವ್ಯದ ಕರೆಗಿಂತ ಬಹುದೂರ ಮುಂದುವರೆದು ಇತರರ ನಿರೀಕ್ಷೆಗಿಂತ ಹೆಚ್ಚಿಗೆ ಕಾರ್ಯ ಮಾಡಿಸುವದರ ಜೊತೆಗೆ ಒಳ್ಳೆಯ ಕೆಲಸಗಳನ್ನು ನಮ್ಮಿಂದ ಕೊಂಚ ಕೊಂಚವಾಗಿ ಮಾಡಿಸಿ ಅದನ್ನು ಮಹಾನ ಕಾರ್ಯವಾಗಿಸುವ ಹಂತದವರೆಗೂ ತಂದು ನಿಲ್ಲಿಸುವದೇ ತೃಪ್ತಿ. ಎಲ್ಲೆಲ್ಲೂ ಗದ್ದಲ ಮನದ ತುಂಬೆಲ್ಲ ಭಾವಗಳ ಸಂತೆ ಇಂಥ ಭಾವಗಳ ಸಂತೆಯಲ್ಲೂ ನಾವೆಲ್ಲಾ ಏಕಾಂತವಾಗಿ ಇಷ್ಟ ಪಟ್ಟು ಅನುಭವಿಸುವ ಶ್ರೇಷ್ಠ ಭಾವವೇ ತೃಪ್ತಿ.
ಪಡೆಯುವವರು ಸಂತೃಪ್ತಿಯನ್ನು ಪಡೆಯಲಾರರು
ದೇವರು ಕಳಂಕವುಳ್ಳ ಉತ್ಪನ್ನಗಳನ್ನು ತಯಾರಿಸುವದಿಲ್ಲ ಹಾಗೆಯೇ ತೃಪ್ತಿ ಭಾವ ದುಷ್ಕೃತ್ಯಗಳನ್ನು ಮಾಡಲು ಬಿಡುವುದಿಲ್ಲ. ತೃಪ್ತಿ ಭಾವ ಎನ್ನುವದು ನಾವು ಮನಸ್ಸಿಗೆ ಅಂದುಕೊಂಡ ತಕ್ಷಣ ಸುಮ್ಮನೆ ಅನುಭವಿಸಬಹುದಾದ ಭಾವವಲ್ಲ. ಹತ್ತು ಹಲವು ಕಷ್ಟಗಳನ್ನು ಅನುಭವಿಸಿದ ನಂತರ ಸುಖದ ತೃಪ್ತಿಯ ಅನುಭವವುಂಟಾಗುವುದು. ಸಾಮಾನ್ಯವಾಗಿ ಪಡೆಯುವವರು ಸಂತೃಪ್ತಿಯನ್ನು ಪಡೆಯಲಾರರು. ನೀಡುವವರು ಅದನ್ನು ಪಡೆಯುತ್ತಾರೆ. ನೀವು ತೆಗೆದುಕೊಳ್ಳುವದಕ್ಕಿಂತ ಹೆಚ್ಚು ಕೊಡುವದರಲ್ಲಿ ತೃಪ್ತಿಯಿದೆ. ವಿಷಯಗಳನ್ನು ಉತ್ತಮ ಪಡಿಸುವಿಕೆಯ ಕುರಿತು ಗಮನ ನೀಡುವಂತೆ ಮಾಡುತ್ತದೆ. ದೊಡ್ಡದು ಮಾಡುವದರ ಬಗ್ಗೆ ಅಲ್ಲ. ಅದೃಷ್ಟವಂತನಾದವನಿಗೆ ಹುಂಜವೂ ಸಹ ಮೊಟ್ಟೆಯಿಡುತ್ತದೆ. ಎಂದರೆ ಸಂತೃಪ್ತಿ ಭಾವ ಇರುವ ಕಡೆ ಉಳಿದೆಲ್ಲ ಬಲಹೀನತೆಗಳಿಗೆ ಸ್ಥಾನವಿಲ್ಲ.ತೃಪ್ತಿಯೆನ್ನುವದು ಒಂದು ಮಾನಸಿಕ ಸಂಪತ್ತು. ಅದನ್ನು ನಾವು ಹನಿ ಹನಿಯಾಗಿ ಸ್ವೀಕರಿಸಿದರೆ ಜೀವನ ಎಂಬ ಯುದ್ಧವನ್ನು ಅರ್ಧ ಗೆದ್ದಂತೆ ಆಗುವದು. ಒಂದು ಸಣ್ಣ ಕಿಡಿಯಿಂದ ಒಂದು ದೊಡ್ಡ ಜ್ವಾಲೆ ಏಳಬಹುದು. ಅದರ ತದ್ವಿರುದ್ಧದಂತೆ ಒಂದು ಸಂತೃಪ್ತಿಯ ಭಾವ ತನ್ನ ಸುಗಂಧವನ್ನು ಚೆಲ್ಲಿ ಚೈತನ್ಯದಾಯಕವಾಗಿ ಮಹಾತ್ಕಾರ್ಯವನ್ನು ಮಾಡಿಸಬಹುದು.


ತೃಪ್ತಿ ಪ್ರಯತ್ನದಲ್ಲಿದೆ ಫಲದಲ್ಲಿ ಅಲ್ಲ
ಸಂತೃಪ್ತಿಯೆನ್ನುವದು ನಿರಂತರವಾಗಿ ಶಕ್ತಿಯನ್ನು ಹೊರಹೊಮ್ಮುತ್ತಿರುವ ಒಂದು ವಿದ್ಯತ್ ಕೋಶವಿದ್ದಂತೆ. ಆ ಕೋಶದ ಸದ್ಬಳಕೆಯಾಗದಿದ್ದರೆ ಜೀವನ ಎಂಬ ಬಳ್ಳಿ ಒಣಗಿ ಹೋಗುತ್ತದೆ. ಒಬ್ಬ ಸಿರಿವಂತ ಜಿಪುಣನು ಬಡವನಿಗಿಂತ ಬಡವನು. ಪಶ್ಚಾತ್ತಾಪ ಪಡುವ ಒಬ್ಬ ಪಾಪಿಯು ಯಾವುದೇ ಪ್ರಚೊದನೆಗಳಿಗೆ ಒಳಗಾಗುವ ಸನ್ಯಾಸಿಗಿಂತ ಹೆಚ್ಚು ಅರ್ಹನು. ತೃಪ್ತಿ ಭಾವದಲ್ಲಿ ಉತ್ತಮಿಕೆಗೆ ಜಿಪುಣತನ ಕಾಡುವದಿಲ್ಲ. ಸಣ್ಣ ಪುಟ್ಟ ಸಂಗತಿಗಳನ್ನು ಪೂರೈಸಿವದರಲ್ಲಿಯೂ ತೃಪ್ತಿ ಅಡಗಿದೆ. ತೃಪ್ತಿ ಪ್ರಯತ್ನದಲ್ಲಿದೆ. ಫಲದಲ್ಲಿ ಅಲ್ಲ. ಹೆಚ್ಚು ಪ್ರಯತ್ನ ಅತ್ಯುತ್ತಮ ಫಲಿತಾಂಶ. ಸೋಮಾರಿತನ ಚೆನ್ನಾಗಿದೆ ಅನಿಸುತ್ತದೆ ನಮ್ಮನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಆದರೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆ ಮಾತ್ರ ತೃಪ್ತಿಯನ್ನು ನೀಡುತ್ತದೆ.


ಶ್ರಮದ ದುಡಿಮೆಗೆ ಒಳಪಡಿಸಿಕೊಳ್ಳಿ
ತೃಪ್ತಿಯ ಭಾವ ಆವರಿಸಿಕೊಂಡಾಗ ನಮ್ಮಲ್ಲಿ ಚೈತನ್ಯ ಉಕ್ಕಿ ಹರಿಯುವದು. ತೃಪ್ತಿ ಎನ್ನುವದು ನೆಮ್ಮದಿ ಜೀವನದ ಅಡಿಪಾಯದ ಕಲ್ಲು. ಈ ಅಡಿಪಾಯದ ಕಲ್ಲಿನ ಮೇಲೆ ಗೌರವದ ಕಟ್ಟಡವನ್ನು ಕಟ್ಟಲು ನಿರಂತರವಾದ ಶ್ರಮದ ದುಡಿಮೆಗೆ ಒಳಪಡಿಸಿಕೊಳ್ಳಿ. ಆಗಲೇ ತೃಪ್ತಿ ಎಂಬ ಭಾವ ನಿಮ್ಮದಾಗುವುದು. ತೃಪ್ತಿ ಅತ್ಯಂತ ದಿವ್ಯವಾದ ಭಾವ. ಸಾಮಾನ್ಯ ಜ್ಞಾನವು ಅಸಾಮಾನ್ಯ ಮಟ್ಟದಲ್ಲಿದ್ದಾಗ ಅದನ್ನು ವಿವೇಕ ಎನ್ನುವರು. ತ್ರಪ್ತಿಯ ಭಾವ ಮನಸ್ಸನ್ನು ಆವರಿಸಿದಾಗ ವಿವೇಕಯುತವಾದ ಕಾರ್ಯಗಳಲ್ಲಿ ತೊಡಗಿಸಿ ಯಶಸ್ಸಿಗಿಂತ ಹೆಚ್ಚು ವಿಫಲತೆಯು ಕಲಿಸುತ್ತದೆ. ಎನ್ನುವದನ್ನು ತಿಳಿಸುತ್ತದೆ. ಗೆಲುವು ಎನ್ನುವುದು ಹಲವಾರು ಭಾವಗಳ ಸಂಗಮ. ವೈಫಲ್ಯತೆಯು ಆಗಾಗ್ಗೆ ಗೆಲುವಿನ ಕಡೆಗೆ ಮೊದಲ ಅವಶ್ಯಕ ಹೆಜ್ಜೆ. ಗೆಲುವು ತೃಪ್ತಿಯನ್ನು ಹರಡುವುದು. ತೃಪ್ತಿಯನ್ನು ಪಡೆಯಲೆಂದೇ ನಿತ್ಯದ ಬದುಕನ್ನು ಮನುಷ್ಯ ಬದುಕನ್ನು ಹೋರಾಟಮಯವಾಗಿಸಿಕೊಂಡಿದ್ದಾನೆ ಎನ್ನುವದು ಸತ್ಯ.


ದಿವ್ಯವಾದ ಎತ್ತರವಾದ ಸ್ಥಾನ
ತೃಪ್ತಿ ಎಲ್ಲರ ಬದುಕಿಗೂ ಅವಶ್ಯಕ. ತೃಪ್ತಿಯಿಂದ ಮಾತ್ರ ನಾವು ಮಾನಸಿಕವಾಗಿ ಸದೃಢವಾಗಿ ನಿಲ್ಲಲು ಸಾಧ್ಯ. ತೃಪ್ತಿ ಮನುಷ್ಯನಲ್ಲಿ ನೆಮ್ಮದಿ ಸೌಖ್ಯ ಶಾಂತಿಯನ್ನು ಹುಟ್ಟು ಹಾಕುವದು. ಮನುಷ್ಯ ತಾನು ನೆಮ್ಮದಿಯಿಂದಿದ್ದರೆ ಸಮಾಜವನ್ನು ನೆಮ್ಮದಿಯಿಂದ ಇಡಲು ಬಯಸುತ್ತಾನೆ. ಬದುಕಿನಲ್ಲಿ ಹಲವಾರು ಜನರಿಗೆ ಮಾರ್ಗದರ್ಶಿಯಾಗಿಯೂ ನಿಲ್ಲುತ್ತಾನೆ. ದಿವ್ಯವಾದ ಎತ್ತರವಾದ ಸ್ಥಾನವನ್ನು ಗಳಿಸಿಕೊಳ್ಳಲು ತೃಪ್ತಿ ಸಹಕಾರಿಯಾಗಿದೆ. ತಾನು ಬೆಳೆಯುವದರೊಂದಿಗೆ ಇತರರನ್ನು ಬೆಳೆಸುವ ಶಕ್ತಿಯನ್ನು ನೀಡುವುದೇ ತೃಪ್ತಿ. ತೃಪ್ತಿ ಎನ್ನುವ ಭಾವ ಕೇವಲ ಒಂದು ದಿನದಲ್ಲಿ ಗಳಿಸುವಂತಹ ಭಾವವಲ್ಲ. ಗೆಲುವು ಎನ್ನುವುದು ಹೋರಾಟದ ಕೊನೆಯಲ್ಲಿ ಸಿಗುವಂತೆ ಬದುಕಿನ ಹೋರಾಟದ ಹಲವು ವರ್ಷಗಳ ಕಠಿಣ ಶ್ರಮಕ್ಕೆ ದೊರೆಯುವ ಭಾವವೇ ತೃಪ್ತಿ. ಹೀಗಾಗಿ ನಾವು ತೃಪ್ತಿಗಾಗಿ ಹಲವು ವರ್ಷಗಳವರೆಗೂ ಶ್ರಮಿಸಬೇಕು.


ಸದ್ಗುಣಗಳ ರಾಜ
ಪ್ರತಿಯೊಬ್ಬ ಮನುಷ್ಯನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಂತ ಶ್ರೇಷ್ಠ ಗುಣವೆಂದರೆ ತೃಪ್ತಿ. ತೃಪ್ತಿ ಮನುಷ್ಯ ಅನುಭವಿಸುವ ಸುಖ. ನಮ್ಮಲ್ಲಿ ನಾವೇ ಬೆಳಸಿಕೊಳ್ಳಬೇಕಾದ ಸದ್ಗುಣಗಳ ರಾಜ. ನೊಂದ ಜೀವಿಗೆ ತಂಪನ್ನು ಈಯುವುದು ನಿಜವಾದ ಮಾನವೀಯ ಧರ್ಮ. ಮಾಡುವ ಕೆಲಸವನ್ನು ಪ್ರೀತಿಯಿಂದ ಮತ್ತು ಶ್ರದ್ಧೆಯಿಂದ ಮಾಡಿದರೆ ಸಾಕು. ತೃಪ್ತಿ ಮನದಲ್ಲಿ ಮನೆ ಮಾಡುತ್ತದೆ. ಸದಾ ಸಣ್ಣ ಪುಟ್ಟ ಸಂಗತಿಗಳ ಕುರಿತು ಕ್ಷುಲ್ಲಕವಾಗಿ ವಿಚಾರ ಮಾಡುತ್ತ ಸ್ವಾರ್ಥಿ ಬದುಕು ಸಾಗಿಸುತ್ತ ಅತೃಪ್ತಿಯಲ್ಲಿ ಮುಳುಗುವವರು ಇಂಥ ಉದಾತ್ತ ಗುಣವನ್ನು ಮೈಗೂಡಿಸಿಕೊಂಡರೆ ಬದುಕಿನ ನಿಜವಾದ ಅರ್ಥ ಗೋಚರಿಸಲಾರಂಭಿಸುವದು.
ನೀವು ಜೀವನದಲ್ಲಿ ಯಾವುದನ್ನು ಸಂಕೀರ್ಣ, ಸಮಸ್ಯೆಗಳೆಂದು ಭಾವಿಸುತ್ತಿರೋ ಅದನ್ನೊಮ್ಮೆ ಶಾಂತ ಚಿತ್ತರಾಗಿ ಪ್ರೀತಿ ತುಂಬಿದ ವಿಶಾಲ ಹೃದಯದಲ್ಲಿ ಸರಳ ದೃಷ್ಟಿ ಕೋನದಿಂದ ನೋಡಿದರೆ ಪವಾಡ ಸದೃಶದಂತೆ ತೃಪ್ತಿ ನಿಮ್ಮ ಬಳಿ ಹರಿಯುತ್ತದೆ. ಅಸಾಧಾರಣ ಆನಂದ ಉಲ್ಲಾಸವನ್ನೂ ನೀಡುತ್ತದೆ. ಜೀವನದ ನಿಜವಾದ ಸಂಪತ್ತು ತೃಪ್ತಿ. ಅದಲ್ಲದೇ ಶಾಂತಿಯ ತಾಯಿ ಕೂಡ. ತೃಪ್ತಿ ಗೆಲುವಿಗೆ ಸಂತೋಷಕ್ಕೆ ನೆಮ್ಮದಿಯ ಬದುಕಿಗೆ ಸೋಪಾನವಾಗಿದೆ. ತೃಪ್ತಿ ಎಂಬ ಸೋಪಾನವನ್ನು ಬಳಸಿ ನೆಮ್ಮದಿಯ ಜೀವನ ನಮ್ಮದಾಗಿಸಿಕೊಳ್ಳೋಣ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button