Kannada NewsKarnataka News

ಸತೀಶ್ ಶುಗರ್ಸ್ ನಿಂದ ಸಕ್ಕರೆ, ಮೇವು ವಿತರಣೆ, ಸ್ವಚ್ಛತೆ ಕಾರ್ಯ

ಸತೀಶ್ ಶುಗರ್ಸ್ ನಿಂದ ಸಕ್ಕರೆ, ಮೇವು ವಿತರಣೆ, ಸ್ವಚ್ಛತೆ ಕಾರ್ಯ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ –

ಇತಿಹಾಸದಲ್ಲಿ ಕಂಡು ಕಾಣರಿಯದಂತಹ ಪರಿಸ್ಥಿತಿ ಗ್ರಾಮಗಳಿಗೆ ಬಂದೊದಗಿದೆ. ಇತಿಹಾಸದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ನದಿ-ಹಳ್ಳಕೊಳ್ಳಗಳ ಮುಖಾಂತರ ಹರಿದು ಅತೀವೃಷ್ಠಿ ನಿರ್ಮಾಣ ಮಾಡಿದೆ. ಜನರ ಬದುಕನ್ನೇ ದುರಂತಕ್ಕೀಡು ಮಾಡಿದೆ.

ಹಾಗೆಯೇ,  ಸತೀಶ್ ಶುಗರ್ಸ್ ಕಾರ್ಖಾನೆಗಳ ಸುತ್ತಮುತ್ತಲಿರುವ  ನದಿ ದಡದಲ್ಲಿರುವ ಹಳ್ಳಿಗಳಲ್ಲಿ ದೊಡ್ಡ ದುರಂತವೇ ಸಂಭವಿಸಿದೆ. ಸಂಸ್ಥೆಯ ಸಂಸ್ಥಾಪಕ, ಮಾಜಿ ಸಚಿವ ಸತೀಶ ಜಾರಕಿಹೊಳಿ  ಸಂತ್ರಸ್ಥರ ನೆರವಿಗೆ ಧಾವಿಸಿದ್ದಾರೆ. ಅವರ ಆಶಯದಂತೆ  ಸಕ್ಕರೆ ಕಾರ್ಖಾನೆಯ ಎಲ್ಲ ಕಾರ್ಮಿಕ ಮತ್ತು ಸಿಬ್ಬಂದಿ ವರ್ಗ ನಿರಂತರವಾಗಿ ಸಂತ್ರಸ್ಥರ ಸೇವೆಯಲ್ಲಿ ತೊಡಗಿದ್ದಾರೆ.  ಸಂಸ್ಥೆಯ ವತಿಯಿಂದ ಆಶ್ರಯ ತಾಣಗಳಿಗೆ ಸಕ್ಕರೆ ವಿತರಣೆಯನ್ನು ಮಾಡಲಾಗುತ್ತಿದ್ದು, ಈಗಾಗಲೇ 60ಕ್ಕೂ ಹೆಚ್ಚು ನಿರಾಶ್ರಿತ ಕೇಂದ್ರಗಳಿಗೆ ಸಕ್ಕರೆ ವಿತರಣೆ ಮಾಡಲಾಗಿದೆ. ಜೊತೆಗೆ  ಎರಡೂ ಸಂಸ್ಥೆಗಳ ಸುಮಾರು 2 ಸಾವಿರ ಸಿಬ್ಬಂದಿ ವರ್ಗದವರಿಂದ ನೆರೆಪೀಡಿತ ನಗರ ಮತ್ತು ಗ್ರಾಮಗಳಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ.

ಸದ್ಯ ನೆರೆ ಹಾವಳಿಯಿಂದ ಜಾನುವಾರುಗಳಿಗೆ ಮೇವಿನ ಕೊರತೆಯುಂಟಾಗಿದ್ದು ಸರ್ಕಾರ ಸಹಾಯ ಮಾಡುತ್ತಿದೆಯಾದರೂ ಮೇವಿನ ಕೊರತೆಯನ್ನು ನೀಗಿಸಲು ಆಗುತ್ತಿಲ್ಲ.  ಸತೀಶ್ ಶುಪಗರ್ಸ್ ಕಾರ್ಖಾನೆಗಳ ಕಾರ್ಯವ್ಯಾಪ್ತಿಯಲ್ಲಿ ಸುಮಾರು 69 ಆಶ್ರಯ ಕೇಂದ್ರಗಳು ಸ್ಥಾಪಿತವಾಗಿದ್ದು, ಸುಮಾರು 10 ಸಾವಿರ ಜಾನುವಾರುಗಳು ಆಶ್ರಯ ಪಡೆದಿವೆ. ಕಾರ್ಖಾನೆಯ ಆಡಳಿತ ಮಂಡಳಿ ಸಭೆ ಸೇರಿ ಅಗತ್ಯವಿರುವ ಮೇವಿನ ಅಂದಾಜು ಮಾಡಲಾಗಿದ್ದು, ಅಂದಾಜು 600 ರಿಂದ 700 ಮೆ.ಟನ್ ಮೇವಿನ ಅಗತ್ಯವಿದೆ. ಸಂಸ್ಥೆಯ ವತಿಯಿಂದ ಅಗತ್ಯವಿರುವ ಇಷ್ಟು ಪ್ರಮಾಣದ ಮೇವನ್ನು ಪೂರೈಸಲು ನಿರ್ಧರಿಸಲಾಗಿದೆ.

ಸಿದ್ದಾರ್ಥ ವಾಡೆನ್ನವರ್

ಕಾರ್ಖಾನೆಗಳವತಿಯಿಂದ ಎಲ್ಲಾ ಆಶ್ರಯ ಕೇಂದ್ರಗಳಲ್ಲಿರುವ ಜಾನುವಾರುಗಳಿಗೆ ಅಗತ್ಯವಿರುವ ಮೇವು ಪೂರೈಸಲಾಗುವುದು. ಜೊತೆಗೆ ಆಶ್ರಯ ಕೇಂದ್ರಗಳಿಗೆ ಸಕ್ಕರೆಯನ್ನೂ ಪೂರೈಕೆ ಮಾಡಲಾಗುತ್ತಿದೆ. ನಿರಾಶ್ರಿತರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ನಮ್ಮ ಸಂಸ್ಥೆಯಿಂದ ವೈದ್ಯಕೀಯ ನೆರವು ಹಾಗೂ ಔಷದೋಪಚಾರವನ್ನು ಪೂರೈಸುವ ಕಾರ್ಯವನ್ನು ಕೈಗೊಳ್ಳಲಾಗುವುದು. ರೈತರು ಮನೆಗಳ ಜೊತೆಗೆ ಬೆಳೆಯನ್ನು ಕಳೆದುಕೊಂಡಿದ್ದಾರೆ. ಇವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಾಜಿ ಸಚಿವರು ಮತ್ತು ಶಾಸಕರಾದ  ಸತೀಶ ಜಾರಕಿಹೊಳಿ  ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಾ ಸಂತ್ರಸ್ಥರ ದುಃಖದಲ್ಲಿ ನಮ್ಮ ಸಂಸ್ಥೆಯೂ ಸದಾ ಭಾಗಿಯಾಗಿರುತ್ತದೆ ಎಂದು ಸತೀಶ ಶುಗರ‍್ಸ್ ಸಮೂಹ ಸಂಸ್ಥೆಗಳ  ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ಧಾರ್ಥ ವಾಡೆನ್ನವರ ತಿಳಿಸಿದ್ದಾರೆ.

ಆಸಕ್ತಿಯಿರುವ ಮೇವು ಮಾರಾಟಗಾರರು ಮತ್ತು ಮೇವಿನ ಅಗತ್ಯವಿರುವ ಸಂತ್ರಸ್ಥರು   ಸಂಸ್ಥೆಯ ಸಿಬ್ಬಂದಿಯ ಮೊಬೈಲ್ ನಂಬರಗಳಿಗೆ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದೂ ಅವರು ತಿಳಿಸಿದ್ದಾರೆ. ಮೊಬೈಲ್ ನಂಬರ್: ೯೭೪೨೮೦೧೯೬೨, ೯೭೩೧೦೯೯೯೪೯, ೯೯೪೫೨೪೦೩೯೦, ೯೯೮೦೨೮೭೧೬೫

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button