Kannada NewsKarnataka NewsLatest

*ನಾಸಿರ್ ಹುಸೇನ್ ಮತ್ತು ಬೆಂಬಲಿಗರು ಭಾರತದಲ್ಲಿರುವ ಋಣಕ್ಕಾದರೂ ಬೇಷರತ್ ಕ್ಷಮೆ ಕೇಳಬೇಕು; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಕಾರ ಬೆಂಬಲಿಗರು ಭಾರತದಲ್ಲಿರುವ ಋಣಕ್ಕಾದರೂ ಬೇಷರತ್ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ‌ ಹಾಗೂ ಪತ್ರಕರ್ತರಿಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲೇಬೇಕು ಎಂದು ಅಗ್ರಹಿಸಿದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆಕಾರ ಕಾಂಗ್ರೆಸ್ ಪಾರ್ಟಿಗೆ ಅತ್ಯಂತ ಹತ್ತಿರದವನು. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಮತ್ತು ನಾಸಿರ್ ಹುಸೇನ್ ಅಕ್ಕ-ಪಕ್ಕದಲ್ಲೇ ಇರುತ್ತಿದ್ದವನು ಎಂಬುದು ಸ್ಪಷ್ಟವಾಗಿದೆ ಎಂದು ಸಚಿವ ಜೋಶಿ ಹೇಳಿದರು.

ಹೊರಗಿನವನೆಂಬ ಸುಳ್ಳು ಸಬೂಬು ಬೇಡ: ಪಾಕಿಸ್ತಾನ ಜಿಂದಾಬಾದ್ ಘೋಷಣೆಕಾರ ಹೊರಗಿನವನು ಎಂಬ ಸುಳ್ಳು ಸಾಬೂಬು ಹೇಳಿ ಜಾರಿಕೊಳ್ಳುವುದು ಬೇಡ. ಕನಿಷ್ಠ ಪಕ್ಷ ಭಾರತದಲ್ಲಿರುವ ಋಣ ಮತ್ತು ಸೌಜನ್ಯಕ್ಕಾದರೂ ಸಾರ್ವಜನಿಕ ಕ್ಷಮೆ ಕೇಳಲೇಬೇಕು. ಕಾಂಗ್ರೆಸ್ ಪಕ್ಷ ಕೂಡ ಕ್ಷಮೆ ಕೇಳಬೇಕು ಎಂದು ಸಚಿವ ಜೋಶಿ ಹೇಳಿದರು.

ಕ್ಷಮೆ ಕೇಳದೆ ಪ್ರಮಾಣ ವಚನ ಬೇಡ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪಿಗೆ ನಾಸಿರ್ ಹುಸೇನ್ ಆಶೀರ್ವಾದ ಇದೆ. ಒಳಗೊಳಗೇ ಆತನನ್ನು ಅಪ್ಪಿ ಮುದ್ದಾಡಿದ್ದಾರೆ. ದೇಶದ ಘನತೆ, ಗೌರವ ಮತ್ತು ಅಖಂಡತೆ ವಿಚಾರದಲ್ಲಿ ನಾಸಿರ್‌ ಹುಸೇನ್ ಬೇಷರತ್ ಕ್ಷಮೆ ಕೇಳಬೇಕು,‌ ಅಲ್ಲಿವರೆಗೆ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಪ್ರಹ್ಲಾದ ಜೋಶಿ ಅಗ್ರಹಿಸಿದರು.

ಸರ್ಕಾರದ ಬೇಜವಾಬ್ದಾರಿ: ಬೆಂಗಳೂರಿನ ರಾಮೇಶ್ವರಮ್ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಇದೆ. ಸರಿಯಾದ ತನಿಖೆ ಮಾಡುತ್ತಿಲ್ಲ ಎಂದು ಸಚಿವ ಜೋಶಿ ಆರೋಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button