Belagavi NewsBelgaum NewsKannada NewsKarnataka NewsLatest

ದೇಹದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದ ಡಾ.ಗುರುಲಿಂಗ ಕಾಪಸೆ :ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ಅನುಭಾವಿಗಳು, ಕನ್ನಡದ ಶ್ರೇಷ್ಠ ವಿದ್ವಾಂಸರು, ಧಾರವಾಡ ಕವಿವಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ ಗುರುಗಳಾದ ಧಾರವಾಡದ ಡಾ. ಗುರುಲಿಂಗ ಶಂಕರಪ್ಪ ಕಾಪಸೆ (೯೬) ನಿಧನದಿಂದ ನಾಡಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕಂಬನಿ ಮಿಡಿದಿದ್ದಾರೆ.
ಬೆಳಗಾವಿಯಲ್ಲಿ ಧಾರವಾಡ ವಿಶ್ವವಿದ್ಯಾಲಯದ ಪಿ ಜಿ ಸೆಂಟರ್ ೮೦ರ ದಶಕದಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನ ಆವರಣದಲ್ಲಿ ಪ್ರಾರಂಭಿಸಲು ಕೆಎಲ್‌ಇ ಸಂಸ್ಥೆಯು ಎಲ್ಲ ರೀತಿಯ ಸಹಾಯವನ್ನು ನೀಡಿತು. ಡಾ. ಗುರುಲಿಂಗ ಕಾಪಸೆ ಅವರು ಈ ಕೇಂದ್ರದ ಆಡಳಿತ ಅಧಿಕಾರಿಗಳಾಗಿ ಅನನ್ಯವಾದ ಕೊಡುಗೆಯನ್ನು ನೀಡಿ ಕಟ್ಟಿ ಬೆಳೆಸಿದರು. ಅಂದಿನಿಂದ ಕೆಎಲ್‌ಇ ಹಾಗೂ ಅವರ ನಡುವಿನ ಸ್ನೇಹ ಸೇತುವೆ ಬೆಸೆದುಕೊಂಡಿತು. ಕಾಲಕಾಲಕ್ಕೆ ಸಂಸ್ಥೆಗೆ ಮಾರ್ಗದರ್ಶನ ನೀಡಿದರು. ಎಂದು ಕೋರೆ ಸ್ಮರಿಸಿದ್ದಾರೆ.

ಇಂದು ರಾಣಿ ಚನ್ನಮ್ಮಾ ವಿವಿ ರೂಪುಗೊಂಡಿದ್ದು ಅಂದಿನ ಕಾಪಾಸೆಯವರಂತವರಿಂದ.  ಕೆಎಲ್‌ಇ ಶತಮಾನೋತ್ಸವದಲ್ಲಿಯೂ ಲಿಂಗರಾಜ ಕಾಲೇಜು ಗ್ರಂಥಕ್ಕೆ ಮುನ್ನಡೆಯನ್ನು ಬರೆದು ಕೊಟ್ಟರು. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನ ನೋವು ತಂದಿದೆ ಎಂದು ಡಾ. ಕೋರೆ ಅವರು ಸಮಸ್ತ ಕೆಎಲ್‌ಇ ಪರಿವಾರದಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.


ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜಿಗೆ ದೇಹದಾನ:

ಡಾ. ಗುರುಲಿಂಗ ಕಾಪಸೆ ಅವರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಬೈಲಹೊಂಗಲದ ಮುಖಾಂತರ ಬೆಳಗಾವಿಯ ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ  ಕಾಲೇಜಿನ ಶರೀರ ರಚನಾ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಡಾ. ಮಹಾಂತೇಶ ರಾಮಣ್ಣವರ ಅವರಿಗೆ ಕಾಪಸೆ ಅವರ ದೇಹವನ್ನು ಹಸ್ತಾಂತರ ಮಾಡಿದರು. ದೇಹದಾನ ಮಾಡಿದ ಕುಟುಂಬಕ್ಕೆ ಡಾ.ಕೋರೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button