Kannada NewsKarnataka NewsLatest

ವಾಟರ್ ಟ್ಯಾಂಕ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ ; ಅದೇ ನೀರು ಕುಡಿಯುತ್ತಿದ್ದ ಗ್ರಾಮಸ್ಥರಲ್ಲಿ ಆತಂಕ

ಪ್ರಗತಿವಾಹಿನಿ ಸುದ್ದಿ: ಕುಡಿಯೋ ನೀರಿನ ವಾಟರ್ ಟ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ. ಅದೇ ನೀರನ್ನ ಎರಡ್ಮೂರು ದಿನಗಳ ಕಾಲ ಇಡೀ ಗ್ರಾಮಸ್ಥರು ಕುಡಿದಿದ್ದಾರೆ. ಇದೀಗ ಗ್ರಾಮದಲ್ಲಿ ಆರೋಗ್ಯ ಇಲಾಖೆ ಬೀಡು ಬಿಟ್ಟಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ ಕೂಡಾ ಮಾಡುತ್ತಿದ್ದಾರೆ.

ಬೀದರ್ ತಾಲೂಕಿನ ಅಣದೂರ್ ಗ್ರಾಮದಲ್ಲಿ ಇರುವ ಕುಡಿಯುವ ನೀರಿನ ಓವರ್ ಹೆಡ್ ವಾಟರ್ ಟ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರ್ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಸರಬರಾಜಾಗುವ ನೀರು ಕಲುಷಿತ ನೀರು ಹಾಗೂ ದುರ್ವಾಸನೆಯಿಂದ ಕೂಡಿದ್ದರಿಂದ ಗ್ರಾಮಸ್ಥರು ವಾಟರ್ ಟ್ಯಾಂಕ್ ಪರಿಶೀಲನೆ ನಡೆಸಿದ್ದಾರೆ. ಆಗ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಅದೇ ಗ್ರಾಮದ ನಿವಾಸಿ 27 ವರ್ಷದ ರಾಜು ಶೈಲಪ್ಪಾ ದಾಸರ್ ಕುಡಿಯೋ ನೀರಿನ ಟ್ಯಾಂಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಪರಪುರುಷನ ಜೊತೆ ಓಡಿ ಹೋಗಿದ್ದಕ್ಕೆ ಮನನೊಂದಿದ್ದ ರಾಜು, ಮಾನಸಿಕ ಖಿನ್ನತೆಗೆ ಒಳಗಾಗಿದ್ದ.  ಅಷ್ಟೇ ಅಲ್ಲದೇ ಆರು ತಿಂಗಳಿಂದ ಮದ್ಯವ್ಯಸನಿಯಾಗಿದ್ದ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿಯೇ ವಾಟರ್ ಟ್ಯಾಂಕ್ ನಲ್ಲಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.  

ಅಣದೂರು ಗ್ರಾಮದ ವಾಟರ್ ಟ್ಯಾಂಕ್‌ನಲ್ಲಿ ವ್ಯಕ್ತಿ ಶವ ಪತ್ತೆಯಾದ ಬೆನ್ನಲ್ಲೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಬೀಡು ಬಿಟ್ಟಿದ್ದು, ಆರೋಗ್ಯ ಸಮಸ್ಯೆ ಇರುವ ಜನರ ಆರೋಗ್ಯ ತಪಾಸಣೆ ಮಾಡುವ ಕೆಲಸ ನಡೆಯುತ್ತಿದೆ. ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಂದ ಅದೇ ನೀರನ್ನು ಜನರು ಸೇವಿಸಿದ್ದು, ಇನ್ನು ಎರಡ್ಮೂರು ದಿನಗಳ ಕಾಲ ಗ್ರಾಮದಲ್ಲೆ ವಾಸ್ತವ್ಯ ಹೂಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವ ಕೆಲಸವನ್ನು ಆರೋಗ್ಯಾಧಿಕಾರಿಗಳು ಮಾಡಲಿದ್ದಾರೆ. 

ಒಟ್ಟಿನಲ್ಲಿ ಮೂರ್ನಾಲ್ಕು ದಿನಗಳ ಕಾಲ ಶವ ಬಿದ್ದಿದ್ದ ನೀರನ್ನೆ ಗ್ರಾಮಸ್ಥರು ಕುಡಿದಿದ್ದು, ಇದೀಗ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಶವವಿದ್ದ ನೀರನ್ನೆ ಸೇವಿಸಿದ್ದರಿಂದ ಗ್ರಾಮದಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಆಗಬಾರದೆಂದು ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಕ್ರಮಕ್ಕೆ ಮುಂದಾಗಿದ್ರೆ, ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದಾ ಎಂದು ಆತಂಕದಲ್ಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button