*ಗ್ಯಾರಂಟಿ ಯೋಜನೆಗಳೇ ಕೈ ಪಕ್ಷದ ಗೆಲುವಿಗೆ ಶ್ರೀರಕ್ಷೆ: ಸಚಿವ ಸತೀಶ್ ಜಾರಕಿಹೊಳಿ*
ಯಕ್ಸಂಬಾ ಪಟ್ಟಣದಲ್ಲಿ ಚಿಕ್ಕೋಡಿ ಸದಲಗಾ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಪ್ರಗತಿವಾಹಿನಿ ಸುದ್ದಿ: ಹಿಂದಿನ ಯುಪಿಎ ಸರಕಾರ ಮತ್ತು ರಾಜ್ಯಕಾಂಗ್ರೆಸ್ ಸರಕಾರದ ಸಾಧನೆ ಮುಂದಿಟ್ಟುಕೊಂಡು ಪ್ರಿಯಂಕಾ ಜಾರಕಿಹೊಳಿ ಗೆಲುವಿಗೆ ಪ್ರಯತ್ನ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಚುನಾವಣಾ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಚಿಕ್ಕೋಡಿ-ಸದಲಗಾ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ರಸ್ತೆ. ಕೃಷಿ ಹೊಂಡ. ಅನ್ನಬಾಗ್ಯ ಯೋಜನೆ ಜಾರಿ ಮಾಡಿದ್ದರು. ಈಗ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿ ಸಮರ್ಪಕ ಅನುಷ್ಠಾನ ಮಾಡಿದ್ದಾರೆ. ಈ ಗ್ಯಾರಂಟಿ ಯೋಜನೆಗಳೇ ಕೈ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಬಿಜೆಪಿಯ ತೆಕ್ಕೆಯಲ್ಲಿರುವ ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಪಡೆಯಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು ಅಳೆದು ತೂಗಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಹಿರಿಯ ಶಾಸಕರಾದ ಪ್ರಕಾಶ ಹುಕ್ಕೇರಿಯವರ ನೇತೃತ್ವದಲ್ಲಿ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಅಂತರವನ್ನು ಪಡೆಯಲು ನಾವೆಲ್ಲರೂ ಒಟ್ಟಾಗಿ ಶ್ರಮಸೋಣ ಎಂದು ತಿಳಿಸಿದರು.
ಇದುವರೆಗೆ ಚಿಕ್ಕೋಡಿ- ಸದಲಗಾ ಕ್ಷೇತ್ರದಲ್ಲಿ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕ ಮತಗಳನ್ನು ಇಲ್ಲಿನ ಜನತೆ ನೀಡಿದ್ದಾರೆ. ಕಾರಣ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೂ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದ ಅವರು, ರೈತರ, ಹಿಂದುಳಿದವರ, ಮಹಿಳೆಯರು ಸೇರಿದಂತೆ ಸರ್ವರ ಏಳಿಗೆ ಬಯಸುವುದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅಧಿಕ ಸಂಖ್ಯೆಯಲ್ಲಿ ಡ್ಯಾಮ್ ಗಳನ್ನು ನಿರ್ಮಿಸಿದ್ದು, ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಿದೆ. ಬಿಜೆಪಿ ಯಾವುದೇ ಯೋಜನೆ ಜಾರಿ ಮಾಡಿಲ್ಲ. ಹತ್ತು ವರ್ಷ ಮೋದಿ ಸರಕಾರ ಯಾವುದೇ ಜನಪರವಾದ ಯೋಜನೆ ಜಾರಿ ಮಾಡಿಲ್ಲ. ಪ್ರಕಾಶ ಹುಕ್ಕೇರಿ ಮುಂದೆ ಮೋದಿ ಗಾಳಿ ಶೂನ್ಯವಾಗಿದೆ ಎಂದ ಅವರು ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹ ತೋರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ .ಕಳೆದ 2009 ರಿಂದ ಇಲ್ಲಿಯವರಿಗೆ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆಯಾಗಿದೆ. ಬರುವ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಹೆಚ್ಚಿನ ಮತ ಕಾಂಗ್ರೆಸ್ ಪರವಾಗಿ ಹೋಗಲಿದೆ. ಒಳಗೊಂದು ಹೊರಗೊಂದು ಪ್ರಕಾಶ ಹುಕ್ಕೇರಿ ಮಾಡಿಲ್ಲ ಏನೇ ಮಾಡಿದರೂ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲಾಗಿದೆ. ಆದ್ದರಿಂದ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸೋಣ. ಅದೇ ಕಾರಣಕ್ಕಾಗಿಯೇ ಇಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು, ಜಿಪಂ, ತಾಪಂ, ಪಟ್ಟಣ ಪಂಚಾಯತ್, ಪುರಸಭೆ, ಗ್ರಾಪಂ ಸದಸ್ಯರ ಸಭೆ ಕರೆದಿದ್ದು, ನಿವೆಲ್ಲ ಚುನಾವಣೆಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ, ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕಾಂಗ್ರೆಸ್ ಯುವಕರಿಗೆ ಆಧ್ಯತೆ ಕೊಡಬೇಕು ಎನ್ನುವ ದೃಷ್ಟಿಯಿಂದ ಪ್ರಿಯಾಂಕ ಜಾರಕಿಹೊಳಿ ಅವರನ್ನು ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಮಾಡಲಾಗಿದೆ. ಸರಕಾರದ ಗ್ಯಾರಂಟಿ ಯೋಜನೆ ಈಗಾಗಲೆ ಜನರಿಗೆ ಮುಟ್ಟಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಗೆಲುವಿಗೆ ಪಣ ತೊಡಬೇಕು ಎಂದ ಅವರು, ಡಬಲ್ ಇಂಜನ ಸರಕಾರ ರಚನೆ ಆಗಲು ಪ್ರಿಯಾಂಕ ಗೆಲುವು ಅವಶ್ಯಕವಾಗಿದೆ. ಹೆಚ್ಚಿನ ಮತಗಳಿಂದ ಆಯ್ಕೆ ಮಾಡುವುದು ಮುಖ್ಯವಾಗಿದೆ ಎಂದರು.
ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ರೈತ ಮತ್ತು ಮಹಿಳೆಯರ ಪರವಾಗಿ ಅನೇಕ ಯೋಜನೆ ಜಾರಿ ಮಾಡಿದೆ. ರಾಜ್ಯದಲ್ಲಿಯೂ ಸಿಎಂ ಅವರು ಗ್ಯಾರಂಟಿ ಯೋಜನೆ ಮೂಲಕ ಜನರ ಸಮಸ್ಯೆ ದೂರು ಮಾಡಿದ್ದಾರೆ. ಕೇಂದ್ರದಲ್ಲಿ ಅನೇಕ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಬರುವ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಬೇಕು ಎಂದರು.
ವೇದಿಕೆ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಸಚಿವ ವೀರಕುಮಾರ ಪಾಟೀಲ. ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ. ಪುರಸಭೆ ಸದಸ್ಯರಾದ ರಾಮಾ ಮಾನೆ. ಅನಿಲ ಮಾನೆ, ಗುಲಾಬ ಬಾಗವಾನ, ಮುದ್ದಸರ ಜಮಾದಾರ, ವರ್ಧಮಾನ ಸದಲಗೆ, ಸತೀಶ ಪಾಟೀಲ, ರಾಕೇಶ ಚಿಂಚಣಿ.ಸತೀಶ ಕುಲಕರ್ಣಿ, ಎಚ್.ಎಸ್.ನಸಲಾಪೂರೆ, ಮಹಾದೇವ ಕವಲಾಪೂರೆ, ಅನೀಲ ಪಾಟೀಲ ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ