Kannada NewsKarnataka NewsLatest
ನೆರೆ ಸಂತ್ರಸ್ತರಿಗೆ ನೆರವಾಗುವುದು ಸರ್ವರ ಕರ್ತವ್ಯ – ಶ್ರೀ ಶ್ರೀಶೈಲ ಜಗದ್ಗುರು
ನೆರೆ ಸಂತ್ರಸ್ತರಿಗೆ ನೆರವಾಗುವುದು ಸರ್ವರ ಕರ್ತವ್ಯ
– ಶ್ರೀ ಶ್ರೀಶೈಲ ಜಗದ್ಗುರು
ಶ್ರೀಶೈಲಂ (ಆಂಧ್ರಪ್ರದೇಶ)-
ಭಯಾನಕ ನೆರೆ ಹಾವಳಿಯಿಂದ ಬೀದಿಪಾಲಾದ ಸಂತ್ರಸ್ತರಿಗೆ ಎಲ್ಲ ರೀತಿಯಿಂದಲೂ ನೆರವು ನೀಡುವುದು ಸರ್ವರ ಆಧ್ಯ ಕರ್ತವ್ಯವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದ್ದಾರೆ.
ಶ್ರಾವಣ ಮಾಸದಲ್ಲಿ ಜರುಗುತ್ತಿರುವ ಮಹಾಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಸಾರ್ವಜನಿಕರಿಗೆ ಕರೆನೀಡಿದ್ದಾರೆ.
ಶ್ರಾವಣ ಮಾಸದ ಪ್ರಾರಂಭದಲ್ಲಿ ಭೀಕರವಾದ ಪ್ರವಾಹದಿಂದ ಕರ್ನಾಟಕದ ಹಲವಾರು ಪ್ರದೇಶಗಳು ನೆರೆಹಾವಳಿಗೆ ತುತ್ತಾಗಿ ಅನೇಕ ಕುಟುಂಬಗಳು ಮನೆ-ಮಠ ಆಸ್ತಿ-ಪಾಸ್ತಿ ಜನ-ಜಾನುವಾರುಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವುದು ದುರ್ದೈವದ ಸಂಗತಿ. ಈ ಸಂದರ್ಭದಲ್ಲಿ ದೇವರ ದಯೆಯಿಂದ ಸುಸ್ಥಿತಿಯಲ್ಲಿರುವ ನಾಡಿನ ಅನೇಕ ಜನರು, ಸಂಘ-ಸಂಸ್ಥೆಗಳು ಮತ್ತು ಸರಕಾರ ಈಗಾಗಲೇ ಸಾಕಷ್ಟು ತಾತ್ಕಾಲಿಕ ನೆರವು ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ.
ಸೊಲ್ಲಾಪುರದ ಹೊಟಗಿ ಮಠ ಮೊದಲಾದ ಅನೇಕರು ನೀಡಿದ ಸಾಮಗ್ರಿಗಳ ಜೊತೆಗೆ ಯಡೂರಿನ ಶ್ರೀ ಕಾಡಸಿದ್ದೇಶ್ವರ ಮಠದಿಂದಲೂ ಹಲವಾರು ಸಾಮಾಗ್ರಿಗಳನ್ನು ಖರೀದಿಸಿ ತುರ್ತಾಗಿ ಅವಶ್ಯಕತೆಯಿರುವ ಗೃಹೋಪಯೋಗಿ ಸಾಮಗ್ರಿಗಳ ಒಂದೊಂದು ಕಿಟ್ಟನ್ನು ಯಡೂರು ಭಾಗದಲ್ಲಿ ಮನೆಮನೆಗೆ ವಿತರಿಸುವ ವ್ಯವಸ್ಥೆ ಕಲ್ಪಿಸಿದ್ದೇವೆ.
ಇದಲ್ಲದೇ ಪ್ರವಾಹ ಇಳಿಮುಖವಾದ ನಂತರ ಮರಳಿ ಗ್ರಾಮಕ್ಕೆ ಬಂದವರಿಗೆ ಊಟಕ್ಕೂ ಪರದಾಡುವ ಪರಿಸ್ಥಿತಿ ಇರುವgದರಿಂದ ಚಿಕ್ಕೋಡಿ ತಾಲೂಕಿನ ಯಡೂರು, ಮಾಂಜರಿ, ಚಂದೂರು, ಚಂದೂರಟೇಕ್, ಯಡೂರವಾಡಿ, ಮುಂತಾದ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಶ್ರಾವಣ ಮಾಸದ ಅನುಷ್ಠಾನವನ್ನು ಪೂರ್ಣಗೊಳಿಸಿ ಕರ್ನಾಟಕಕ್ಕೆ ಮರಳಿ ಬಂದ ನಂತರ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಲು ಏನು ಮಾಡಬೇಕು ಎಂಬುದನ್ನು ಆ ಭಾಗದ ಸಮೀಕ್ಷೆಯ ನಂತರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವಂತೆ ಮತ್ತು ಅವರ ಜೀವನ ಮರಳಿ ಸಹಜ ಸ್ಥಿತಿಗೆ ಬರುವಂತೆ ಸಂತ್ರಸ್ತರೆಲ್ಲರಿಗೂ ಶಕ್ತಿ ನೀಡಲೆಂದು ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿಯಲ್ಲಿ ಪ್ರಾರ್ಥಿಸಿ ಸಂಕಲ್ಪ ಮಾಡಿ ಲಿಂಗಪೂಜೆಯನ್ನು ನೆರವೇರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ