Kannada NewsKarnataka News

ಕನ್ನಡಿಗರ ಬೇಡಿಕೆಗಳನ್ನು ಪೂರೈಸುವಂತಹ ತಂತ್ರಾಂಶ ಅಭಿವೃದ್ಧಿಪಡಿಸಿ

ಕನ್ನಡಿಗರ ಬೇಡಿಕೆಗಳನ್ನು ಪೂರೈಸುವಂತಹ ತಂತ್ರಾಂಶ ಅಭಿವೃದ್ಧಿಪಡಿಸಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ  ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ ಕಾರ್ಯಕ್ರಮದಡಿಯಲ್ಲಿ ಪ್ರಕಟಿಸಲಾದ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆಳಗಾವಿ ಜಿಲ್ಲೆಯಿಂದ ೨೦೧೭-೧೮ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳ ಲಾಭಗಳನ್ನು ಸಾಮಾನ್ಯ ಗ್ರಾಮೀಣ ಜನರಿಗೆ ತಲುಪಿಸುವ ಉದ್ಧೇಶದಿಂದ ವಿಶ್ವವಿದ್ಯಾಲಯದ ವತಿಯಿಂದ ಕನ್ನಡ ಭಾಷೆಯಲ್ಲಿ ಕಿರುಹೊತ್ತಿಗೆಗಳನ್ನು ಪ್ರಕಟಿಸಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಒಂಬತ್ತು ಕಿರುಹೊತ್ತಿಗೆಗಳನ್ನು ಲೋಕಾರ್ಪಣೆಗೊಳಿಸಿದರು. ವಿತಾವಿ ಕುಲಪತಿ ಡಾ. ಕರಿಸಿದ್ದಪ್ಪ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ೨೦೧೭-೧೮ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ  ಸಿ. ಕೆ. ಜೋರಾಪುರ ಅವರನ್ನು ಸನ್ಮಾನಿಸಲಾಯಿತು

ಸಮಾರಂಭದಲ್ಲಿ ಡಾ. ಸಂಪತ್ತಕುಮಾರ ರಚಿಸಿದ ಆರೋಗ್ಯ ಮತ್ತು ತಂತ್ರಜ್ಞಾನ, ಡಾ. ಕೆ. ಎನ್. ಪಾಟೀಲ್ ರಚಿಸಿದ ಇಂಧನ ಕೋಶಗಳು ಭವಿಷ್ಯದ ಶಕ್ತಿಮೂಲ, ಡಾ. ರಶ್ಮಿ ಅಂಗಡಿ ರಚಿಸಿದ ಮುದ್ರಣ ತಂತ್ರಜ್ಞಾನ, ಪ್ರೊ. ಎಸ್. ಚಿದಾನಂದಪ್ಪ ರಚಿಸಿದ ವಿದ್ಯುತ್ ಅಪಘಾತಗಳು, ಪ್ರೊ. ಎ. ಬಿ. ಕೃಷ್ಣಮೂರ್ತಿ ಆಚಾರ್ ರಚಿಸಿದ ಖಗೋಳ ವಿಜ್ಞಾನ, ಪ್ರೊ. ರಾಜೇಶ ಹೊಂಗಲ್ ರಚಿಸಿದ ಐಟಿ ಬಿಟಿ ಕ್ಷೇತ್ರ ಮತ್ತು ಸಾಪ್ಟವೇರ್ ಉದ್ಯಮದ ಸವಾಲುಗಳು, ಪ್ರೊ. ಸುಕೇಶ ಮೂಲಿಗಾರ ರಚಿಸಿದ ಎಸ್.ಎಮ್.ಪಿ.ಎಸ್., ಪ್ರೊ. ನಮ್ರತಾ ಮ. ಕಳಸಣ್ಣವರ ರಚಿಸಿದ ಗಣಕ ಜ್ಞಾನ ಒಟ್ಟು ಒಂಬತ್ತು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು ಹಾಗೂ ಈ ಎಲ್ಲ ಲೇಖಕರನ್ನು ಸನ್ಮಾನಿಸಲಾಯಿತು.

ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಮನು ಬಳಿಗಾರ, ಕನ್ನಡ ಭಾಷೆಗೆ ಅವಶ್ಯವಿರುವ ಹಾಗೂ ಕನ್ನಡಿಗರ ಎಲ್ಲ ಬೇಡಿಕೆಗಳನ್ನು ಪೂರೈಸುವಂತಹ ತಂತ್ರಾಂಶ ಅಭಿವೃದ್ಧಿಪಡಿಸುವ ಜವಾಬ್ದಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮೇಲಿದೆ. ಇದಕ್ಕೆ ಬೇಕಾಗುವ ಎಲ್ಲ ಸಹಾಯ ಮತ್ತು ಸಹಕಾರವನ್ನು ಕನ್ನಡ ಸಾಹಿತ್ಯ ಪತಿಷತ್ ವತಿಯಿಂದ ನೀಡಲಾವುದು. ಎರಡನೇ ಶತಮಾನದಿಂದ ಕನ್ನಡ ಭಾಷೆ ಸಾಗರೋತ್ತರದಲ್ಲಿ ವೈಭವವನ್ನು ಹೊಂದಿದೆ. ಆಂಗ್ಲ ಭಾಷೆಯ ಪ್ರಭಾವದಿಂದ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಕಠಿಣ ಪರಿಶ್ರಮ ಪಡಬೇಕು. ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರತಿಭಾ ಪುರಸ್ಕಾರ

ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಮಾತನಾಡಿ ಕೃಷಿ ಆಧಾರಿತ ಅಭೀವೃದ್ಧಿಶೀಲ ರಾಷ್ಟ್ರಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಮತ್ತು ವಿಪರೀತ ನೈಸರ್ಗಿಕ ವಿಕೋಪಗಳಿಂದಾಗಿ ಉತ್ಪಾದನೆ ಕುಂಠಿತಗೊಂಡಿದೆ. ನಮ್ಮ ಗ್ರಾಮೀಣ ರೈತರಿಗೆ ಸುಲಭ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ತಮ್ಮಲ್ಲಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಹಾಗೂ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ.

ಈ ನಿಟ್ಟಿನಲ್ಲಿ ವಿತಾವಿ ಗ್ರಾಮೀಣ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕಿರುಹೊತ್ತಿಗೆಗಳನ್ನು ಪ್ರಕಟಿಸಿ ರೈತರಿಗೆ ವಿತರಿಸುವಲ್ಲಿ ಕಾರ್ಯನಿರತವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಮಟ್ಟದ ಸಾಧನೆಗಳನ್ನು ಮಾಡಲು ಪ್ರೇರೆಪಿಸುವುದಕ್ಕಾಗಿ ಪ್ರತಿವರ್ಷ ವಿಶ್ವವಿದ್ಯಾಲಯದ ವತಿಯಿಂದ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ವಿತಾವಿ ಎಲ್ಲ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ೨೦೧೮-೧೯ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೦ ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ೨೬ ವಿದ್ಯಾರ್ಥಿಗಳನ್ನು ರೂ ೫೦೦೦/- ನಗದು ಪುರಸ್ಕಾರ ಹಾಗೂ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.

ವಿತಾವಿ ಕುಲಸಚಿರಾದ ಡಾ. ಎ. ಎಸ್. ದೇಶಪಾಂಡೆ, ಹಣಕಾಸು ಅಧಿಕಾರಿಗಳಾದ ಎಂ. ಎ. ಸಪ್ನಾ ಉಪಸ್ಥಿತರಿದ್ದರು. ವಿತಾವಿ ಕನ್ನಡ ಪುಸ್ತಕ ಪ್ರಕಟನಾ ಸಮಿತಿ ಅಧ್ಯಕ್ಷರಾದ ಡಾ. ಸಿ. ಕೆ. ಸುಬ್ಬರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿತಾವಿ ಪ್ರಸಾರಾಂಗ ನಿರ್ದೇಶಕರಾದ ಡಾ. ಎಮ್. ಎನ್. ಬಿರ್ಜೆ ಸ್ವಾಗತಿಸಿದರು, ಪ್ರಸಾರಾಂಗ ಸಂಯೋಜಕರಾದ ಡಾ. ಶಾಂತಾ ಪೋರಾಪುರ ವಂದಿಸಿದರು. ವಿತಾವಿ ಅನುಚಿತ ಜಾತಿ/ಪಂಗಡ ಮತ್ತು ಒಬಿಸಿ ಘಟಕದ ಸಂಯೋಜಕರಾದ ಡಾ. ಪ್ರಹ್ಲಾದ ರಾಥೋಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ವಿತಾವಿ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪಾಲಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button