Kannada News

ಮೊನ್ನೆ ಮೊನ್ನೆ ದೋಸ್ತಿ ಸರಕಾರ ನಡೆಸಿದವರು ಇವರೇನಾ?

ಮೊನ್ನೆ ಮೊನ್ನೆ ದೋಸ್ತಿ ಸರಕಾರ ನಡೆಸಿದವರು ಇವರೇನಾ?

ಕೆಲವೇ ತಿಂಗಳ ಹಿಂದಿನ ದೋಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- 

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮಧ್ಯೆ ತೀವ್ರ ವಾಗ್ಯುದ್ದ ನಡೆದಿದೆ.

ಭಾನುವಾರ ಇಬ್ಬರೂ ಎಷ್ಟರಮಟ್ಟಿಗೆ ಆರೋಪ-ಪ್ರತ್ಯಾರೋಪ ಮಾಡಿಕೊಂಡರೆಂದರೆ ಮೊನ್ನೆ ಮೊನ್ನೆ ದೋಸ್ತಿ ಸರಕಾರ ನಡೆಸಿದವರು ಇವರೇನಾ ಎನ್ನುವ ಅನುಮಾನ ಬರುವಂತಿದೆ.

2 ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚ್ಚಾಡಿದ್ದರು. ಸಮ್ಮಿಶ್ರ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದರು. ದೇವೇಗೌಡ ಸ್ವಜಾತಿಯವರನ್ನು ಬೆಳೆಸಲೇ ಇಲ್ಲ, ಸರಕಾರ ಕೆಡಗುವುದರಲ್ಲಿ ಅವರು ನಿಸ್ಸೀಮರು ಎಂದಿದ್ದರು.

ಒಡಕಿನ ಧ್ವನಿ ಬೇಡ ಎಂದಿದ್ದರು

ಆ ವೇಳೆ, ಕುಮಾರಸ್ವಾಮೀ ಟ್ವೀಟ್ ಮಾಡಿ, ಇದು ಜಗಳ ಮಾಡುವ ಸಮಯವಲ್ಲ. ಜಾತ್ಯತೀತ ಶಕ್ತಿಗಳು ಒಂದಾಗಬೇಕಾದ ಕಾಲದಲ್ಲಿ ಒಡಕಿನ ಮಾತು ಬೇಡ ಎಂದಿದ್ದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ತಮ್ಮ ಅಪ್ಪನಿಗೆ ಹೇಳಲಿ ಎಂದಿದ್ದರು. ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡು ಮಾತನಾಡಿ ದಿನೇಶ್, ಕುಮಾರಸ್ವಾಮಿ ಅಧಿಕಾರ ನಡೆಸಿದ್ದಕ್ಕಿಂತ ಅತ್ತಿದ್ದೇ ಹೆಚ್ಚು ಎಂದಿದ್ದರು.

ಭಾನುವಾರ ಕುಮಾರಸ್ವಾಮಿ ಮಾತನಾಡಿ, ನನಗೆ ಬಿಜೆಪಿಗಿಂತ ಸಿದ್ದರಾಮಯ್ಯನೇ ಮೊದಲ ಶತ್ರುವಾಗಿದ್ದರು. ಸದಾ ಅವರು ಸರಕಾರ ಕೆಡಗುವುದಕ್ಕೇ ಪ್ರಯತ್ನಿಸುತ್ತಿದ್ದರು. ತಮ್ಮ ಆಪ್ತರನ್ನೇ ಮುಂಬೈಗೆ ಕಳುಹಿಸಿ ಸರಕಾರ ಬೀಳಲು ಕಾರಣರಾದರು. ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಮನ್ವಯ ಮಾಡುವುದರ ಬದಲು ಒಡೆಯಲು ಯತ್ನಿಸಿದ್ದೇ ಹೆಚ್ಚು ಎಂದು ನೇರವಾಗಿ ಆರೋಪಿಸಿದ್ದಾರೆ.

ನಾನು ಮುಖ್ಯಮಂತರಿಯಾಗುವುದು ಸಿದ್ದರಾಮಯ್ಯಗೆ ಇಷ್ಟವಿರಲಿಲ್ಲ. ಸದಾ ಸರಕಾರ ಕೆಡಗುವುದಕ್ಕೆ ಪ್ರಯತ್ನಿಸುತ್ತಲೇ ಇದ್ದರು. ಸರಿಯಾಗಿ ಆಡಳಿತ ನಡೆಸುವುದಕ್ಕೂ ಅವಕಾಶ ನೀಡಲಿಲ್ಲ ಎಂದಿದ್ದಾರೆ.

ಇದಕ್ಕೆಲ್ಲ ಪ್ರತಿಕ್ರಿಯೆ ಎನ್ನುವಂತೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ವಿರುದ್ಧ ಮೋದಲ ಶತ್ರು ಎಂದು ಹೇಳಲಿಲ್ಲ. ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಬಿಜೆಪಿಗಿಂತ ಹೆಚ್ಚು ನನ್ನನ್ನು ಟೀಕಿಸಿದ್ದರು ಎಂದಿದ್ದ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ನನ್ನನ್ನು ಮಿತ್ರನಂತೆ ನೋಡಲೇ ಇಲ್ಲ. ಸದಾ ಶತ್ರುವಿನಂತೆ ಕಂಡರು. ಅವರಿಗೆ ಆಡಳಿತ ನಡೆಸುವುದೇ ಗೊತ್ತಿಲ್ಲ. ಬದಲಾಗಿ ಅಳುವುದರಲ್ಲೇ ನಿರತರಾಗಿದ್ದರು ಎಂದಿದ್ದಾರೆ. ಆಡಳಿತ ನಡೆಸಲು ಬಾರದವರು ಕುಮಾರಸ್ವಾಮಿ ರೀತಿಯಲ್ಲಿ ಅಳುತ್ತಾರೆ, ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನನ್ನನ್ನು ಬಿಟ್ಟುಬಿಡಿ

ಈ ಎಲ್ಲ ಬೆಳವಣಿಗೆ ಕುರಿತು ಡಿ.ಕೆ.ಶಿವಕುಮಾರ ಅವರನ್ನು ಮಾತನಾಡಿಸಿದರೆ ಅವರ ಆಕ್ರೋಶ ಸಿದ್ದರಾಮಯ್ಯ ಅವರ ಕಡೆ ಇದ್ದಂತೆ ಮಾತನಾಡಿದರು.

ನನಗೆ ಯಾವ ವಿರೋಧ ಪಕ್ಷದ ನಾಯಕ ಸ್ಥಾನವೂ ಬೇಡ. ಯಾರಿಗೆ ಅರ್ಜೆಂಟ್ ಇದೆಯೋ ಅವರು ಆಗಲಿ. ಯಾರಿಗೆ ಮನೆ, ಕಾರು ಬೇಕಾಗಿದೆಯೋ ಅವರು ಆಗಲಿ. ನನಗೆ ಸ್ವಂತ ಮನೆ ಇದೆ ಎಂದರು. ಸಿದ್ದರಾಮಯ್ಯ, ಕುಮಾರಸ್ವಾಮಿ ಆರೋಪ-ಪ್ರತ್ಯಾರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿ.ಕೆ.ಶಿವಕುಮಾರ, ನನ್ನನ್ನು ಪ್ರೀಯಾಗಿರಲು ಅವಕಾಶ ಕೊಡಿ. ನನಗೆ ಯಾವುದೂ ಗೊತ್ತಿಲ್ಲ. ನಾನು ಪೇಪರನ್ನೂ ಓದುವುದನ್ನು ಬಿಟ್ಟಿದ್ದೇನೆ ಎಂದುಬಿಟ್ಟರು.

ಒಟ್ಟಾರೆ, ರಾಜ್ಯ ರಾಜಕೀಯ ವಿಚಿತ್ರ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಧೃವೀಕರಣ ನಡೆಯುತ್ತದೆಯೋ ಕಾದು ನೋಡಬೇಕಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button