ಯುವಕರಿಗೆ ಉದ್ಯೋಗಾವಕಾಶ, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹಲವು ಯೋಜನೆ ನನ್ನ ಕನಸು – ಮೃಣಾಲ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸುವುದು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತರುವ ಕನಸು ಹೊತ್ತು ಚುನಾವಣೆ ಕಣಕ್ಕಿಳಿದಿದ್ದೇನೆ.
ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಅತ್ಯಧಿಕ ಬಹುಮತದಿಂದ ನಿಮ್ಮ ಮನೆ ಮಗನಾದ ನನ್ನನ್ನು ಆಯ್ಕೆ ಮಾಡಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಯಳ್ಳೂರು ಹಾಗೂ ಧಾಮನೆಯಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಯಾವುದೇ ಬದ್ಧತೆ ಇಲ್ಲದ, ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಎಲ್ಲ ದೊಡ್ಡ ಹುದ್ದೆಗಳನ್ನು ಅನುಭವಿಸಿದರೂ ಒಂದೇ ಒಂದು ಕೆಲಸ ಮಾಡದೆ ಈಗ ನರೇಂದ್ರ ಮೋದಿ ನೋಡಿ ಮತ ನೀಡಿ ಎನ್ನುತ್ತಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ತಿರಸ್ಕರಿಸಿ ಎಂದು ವಿನಂತಿಸಿದರು.
ನಿಮ್ಮ ಎಲ್ಲ ಕಷ್ಟ ಸುಖಗಳಲ್ಲಿ ನಾನು ಇರುತ್ತೇನೆ. ಹುಬ್ಬಳ್ಳಿಯ ವ್ಯಕ್ತಿ ನಿಮ್ಮ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವೇ ಇಲ್ಲ. ಚುನಾವಣೆಯ ನಂತರ ಅವರು ನಿಮ್ಮ ಕೈಗೂ ಸಿಗುವುದಿಲ್ಲ. ಅವರ ಮೊಬೈಲೂ ಆನ್ ಇರುವುದಿಲ್ಲ. ಅಂತವರನ್ನು ಆಯ್ಕೆ ಮಾಡಿ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಪಕ್ಷ ಭೇದ ಮರೆತು ನನ್ನನ್ನು ಬೆಂಬಲಿಸಿ ಎಂದು ವಿನಂತಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಮೃಣಾಲ ಹೆಬ್ಬಾಳಕರ್ ತಾಯಿಯಂತೆ ಮಗ, ಕಳೆದ 10 ವರ್ಷದಿಂದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾನೆ. ನೀವೆಲ್ಲ ಅವನನ್ನು ಮನೆ ಮಗ ಎಂದು ಈಗಾಗಲೆ ಪರಿಗಣಿಸಿದ್ದೀರಿ. ಅವನಿಗೆ ಮತ ನೀಡುವ ಮೂಲಕ ದೆಹಲಿಗೆೆ ಕಳಿಸಿ. ಇನ್ನಷ್ಟು ಅಭಿವೃದ್ಧಿಗೆ ಎಲ್ಲರೂ ಸೇರೆ ಕೆಲಸ ಮಾಡೋಣ ಎಂದು ವಿನಂತಿಸಿದರು.
ಕಳೆದ 20 ವರ್ಷದಿಂದ ಬಿಜೆಪಿ ಸಂಸದರು ಏನು ಮಾಡಿದ್ದಾರೆ ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ. 2014ರಲ್ಲಿ ಅತ್ಯಲ್ಪ ಮತದಿಂದ ನಾನು ಪರಾಭವಗೊಂಡಿದ್ದೆ. ನನ್ನ ಮಗನಿಗೆ ಒಂದು ಬಾರಿ ಅವಕಾಶ ಕೊಟ್ಟು ನೋಡಿ.
ಅಭಿವೃದ್ದಿ ಎಂದರೆ ಲಕ್ಷ್ಮೀ ಹೆಬ್ಬಾಳಕರ್, ಹೆಬ್ಬಾಳಕರ್ ಎಂದರೆ ಅಭಿವೃದ್ದಿ ಎಂದು ನಿಮ್ಮಿಂದಲೇ ಅನಿಸಿಕೊಂಡಿದ್ದೇನೆ. ನನಗೆ ನೀಡಿದ ಸಹಕಾರವನ್ನೇ ಮೃಣಾಲನಿಗೂ ನೀಡಿ. ಗ್ರಾಮೀಣ ಕ್ಷೇತ್ರದ ಸಂಪೂರ್ಣ ಮತವನ್ನು ಅವನಿಗೆ ನೀಡುವಂತೆ ಮಾಡಿ ಎಂದು ಕೋರಿದರು.
ಸಭೆಯಲ್ಲಿ ಮುಖಂಡರಾದ ಯುವರಾಜ ಕದಂ, ಎಂ.ಜೆ.ಪ್ರದೀಪ, ಪರಶುರಾಮ ಡಗೆ, ಯಲ್ಲಪ್ಪ ಗೊರಲ್, ಕಿರಣ ಪಾಟೀಲ, ಉಲ್ಲಾಸ ಬೇಟ್ರೆ, ರುಕ್ಮಿಣಿ ನಾಯ್ಕ, ಚಾಂಗದೇವ್ ಮಾಜುಮದಾರ್, ರಮೇಶ ಕುಂಡೆಕರ್, ಸುಧೀರ ಲೋಹಾರ್, ರಾಘವೇಂದ್ರ ಸುತಾರ, ಪ್ರಶಾಂತ ನಂದ್ಯಾಳ್ಕರ್, ಶಿವಾಜಿ ಕುಂಡೆಕರ್, ಮಧು ಕುಗ್ಜಿ, ಬಸವಂತ ರೆಮನಾಚೆ, ಯಲ್ಲಪ್ಪ ಸೈಬಣ್ಣವರ, ಕೃಷ್ಣ ಬಾಳೇಕುಂದ್ರಿ, ರಾಜು ಬಾಳೇಕುಂದ್ರಿ, ಅನ್ವರ್ ಕೊಡ್ಲಿವಾಡ, ಸುನೀಲ ಬಸ್ತವಾಡ್ಕರ್, ಅಬ್ದುಲ್ ಕಿಲ್ಲೇದಾರ, ಎಂ.ಕೆ.ಪಾಟೀಲ್, ಇಮ್ತಿಯಾಜ ಇನಾಮದಾರ್, ಪ್ರಕಾಶ ಬಾಳೇಕುಂದ್ರಿ ಮುಂತಾದವರು ಉಪಸ್ಥಿತರಿದ್ದರು.
ಧಾಮಣೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಚಾರಕ್ಕೂ ಮುನ್ನ ಗ್ರಾಮದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ