Kannada NewsKarnataka News

ಆರೋಗ್ಯ-ನೈರ್ಮಲ್ಯ ಜನಜಾಗೃತಿ ವಸ್ತುಪ್ರದರ್ಶನ ಆರಂಭ

 ಆರೋಗ್ಯ-ನೈರ್ಮಲ್ಯ ಜನಜಾಗೃತಿ ವಸ್ತುಪ್ರದರ್ಶನ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು, ಇವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಬುಧವಾರ (ಆ.೨೮) ಆಯೋಜಿಸಿದ್ದ ಆರೋಗ್ಯ-ನೈರ್ಮಲ್ಯ ಕುರಿತ ಎರಡು ದಿನಗಳ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿವಿಧ ಆರೋಗ್ಯ ಸೇವೆಗಳು ಮತ್ತು ಆರೋಗ್ಯ ಇಲಾಖೆಯ ಹಾಗೂ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಜಾಗೃತಿ ವಸ್ತುಪ್ರದರ್ಶನವು ಉಪಯುಕ್ತವಾಗಿದೆ. ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರದರ್ಶನವನ್ನು ಏರ್ಪಡಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯವನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಶ್ಲಾಘಿಸಿದರು.

ಮಾಹಿತಿಯನ್ನು ಅತ್ಯಗತ್ಯ

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಯಾವುದೇ ವ್ಯಕ್ತಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ವಿವಿಧ ಬಗೆಯ ಕಾಯಿಲೆಗಳ ಲಕ್ಷಣ ಮತ್ತು ಅದಕ್ಕೆ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಮಾಹಿತಿಯನ್ನು ಹೊಂದುವುದು ಅತ್ಯಗತ್ಯವಾಗಿರುತ್ತದೆ. ಅಂತಹ ಮಾಹಿತಿಯನ್ನು ಒದಗಿಸಲು ವಾರ್ತಾ ಇಲಾಖೆಯ ವಸ್ತು ಪ್ರದರ್ಶನವು ಸಹಕಾರಿಯಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ವಸ್ತುಪ್ರದರ್ಶನ ಕುರಿತು ಮಾಹಿತಿಯನ್ನು ನೀಡಿದರು.
ಎರಡು ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶೈಲಜಾ ತಮ್ಮಣ್ಣವರ, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ, ಜಿಲ್ಲಾ ಮಕ್ಕಳ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಯಲಿಗಾರ, ಬೆಳಗಾವಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ಸೇವೆಗಳ ಸಮಗ್ರ ಮಾಹಿತಿ:

ಈ ಜನಜಾಗೃತಿ ವಸ್ತು ಪ್ರದರ್ಶನದಲ್ಲಿ ನವಜಾತ ಶಿಶುಗಳ ಆರೈಕೆ, ಮಕ್ಕಳ ಪೌಷ್ಠಿಕ ಆಹಾರ ಪುನಶ್ಚೇತನಾ ಕೇಂದ್ರಗಳನ್ನು ಸ್ಥಾಪಿಸಿರುವುದು, ಸಂಪೂರ್ಣ ಲಸಿಕೆ ಪರಿಪೂರ್ಣ ಆರೋಗ್ಯ ಧ್ಯೇಯವಾಕ್ಯದಡಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಕುರಿತ ಅಂಶಗಳ ವಿವರಣೆ, ರಕ್ತಹೀನತೆ ತಡೆಗಟ್ಟುವ ಬಗೆ, ಕ್ಷಯರೋಗದ ಲಕ್ಷಣಗಳು ಮತ್ತು ನಿಯಂತ್ರಣದ ಕ್ರಮಗಳು, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಲಕ್ಷಣಗಳು ಮತ್ತು ಮುನ್ನೆಚ್ಚೆರಿಕಾ ಕ್ರಮಗಳು, ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾದರಿಯಲ್ಲಿ ಸೌಲಭ್ಯಗಳ ಒದಗಿಸುವಿಕೆ, ಮಾನಸಿಕ ಆರೋಗ್ಯ, ಜನನಿ-ಶಿಶು ಸುರಕ್ಷಾ, ತಾಯಿ ಕಾರ್ಡ್, ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ಸೇವನೆಯ ಕ್ರಮಗಳ ಕುರಿತ ಸಂಪೂರ್ಣ ಮಾಹಿತಿ ಒಳಗೊಂಡ ಬೃಹತ್ ಫಲಕಗಳ ಪ್ರದರ್ಶನಕ್ಕಿಡಲಾಗಿದೆ.

ವಿದ್ಯುತ್ ಬಗ್ಗೆ ಜಾಗೃತಿ ಇದ್ದು, ವಿದ್ಯುತ್ ಲೈನ್‌ಮ್ಯಾನ್‌ಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿಮ್ಮ ಸುರಕ್ಷಿತ ನಮ್ಮ ಆದ್ಯತೆಯ ಕಡೆ ಗಮನವಹಿಸುವುದು, ರಾಷ್ಟ್ರೀಯ ಫ್ಲೋರೋಸಿಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ, ಪ್ರತಿ ಜಿಲ್ಲೆಯಲ್ಲೂ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡದಿಂದ ೨೪x೭ ಆರೋಗ್ಯ ಮತ್ತು ಕ್ಷೇಮ ತಂಡಗಳ ಕಾರ್ಯಚರಣೆ, ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮ, ಮನೆಯ ಹೊರಗಡೆ ಶೌಚಾಲಯ ನಿರ್ಮಾಣ ಸೇರಿದಂತೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿ ಒಳಗೊಂಡ ಫಲಕಗಳನ್ನು ಈ ವಸ್ತುಪ್ರದರ್ಶನಕ್ಕಿಡಲಾಗಿದೆ.
ಸಾರ್ವಜನಿಕರು ಆರೋಗ್ಯ ಸೇವೆಗಳ ಕುರಿತ ಮಾಹಿತಿಯನ್ನು ಕುತೂಹಲದಿಂದ ವೀಕ್ಷಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button