ಗಣೇಶ ಹಬ್ಬ: ಪಿಓಪಿಯಿಂದ ತಯಾರಿಸಿದ ವಿಗ್ರಹ ನಿಷೇಧ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಸಾರ್ವಜನಿಕರು ಮುಂಬರುವ ಗಣೇಶ ಹಬ್ಬವನ್ನು ಪಿ.ಓ.ಪಿ.ಯಿಂದ ತಯಾರಿಸಿದ ಅಥವಾ ಬಣ್ಣಲೇಪಿತ ವಿಗ್ರಹಗಳನ್ನು ಬಳಸದೇ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ವಿಗ್ರಹಗಳನ್ನು ಮಾತ್ರ ಬಳಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗಂಟಿ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಅವರ ಜುಲೈ ೨೦, ೨೦೧೬ ರ ಅಧಿಸೂಚನೆ ಮೇರೆಗೆ ಪಿ.ಓ.ಪಿ.ಯಿಂದ ತಯಾರಿಸಲಾದ ಅಥವಾ ಬಣ್ಣಲೇಪಿತ ವಿಗ್ರಹಗಳನ್ನು ಇನ್ನು ಮುಂದೆ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿರ್ಬಂಧಿಸಲಾಗಿದೆ.
ಬೆಳಗಾವಿ ನಗರದ ನಾಗರಿಕರಿಗೆ ಅನುಕೂಲವಾಗುವಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೮ ಗಣೇಶ ವಿಸರ್ಜನೆ ಹೊಂಡಗಳನ್ನು ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿದ್ದು, ಗಣೇಶ ಮಹಾಮಂಡಳದ ವತಿಯಿಂದ ಸ್ಥಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಹಾಗೂ ಮನೆಗಳಲ್ಲಿ ಸ್ಥಾಪಿಸಿದ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆ ನಿರ್ಮಿಸಿದ ವಿಸರ್ಜನಾ ಕುಂಡಗಳಲ್ಲಿ ಮಾತ್ರ ಧಾರ್ಮಿಕ ವಿಧಿವಿಧಾನಗಳಿಂದ ವಿಸರ್ಜನೆ ಮಾಡಬೇಕು.
ಇದಲ್ಲದೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ, ದಂಡು ಮಂಡಳಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗೃಹ ಮಂಡಳಿ ಸಹಯೋಗದೊಂದಿಗೆ ಗಣೇಶ ಹಬ್ಬದ ೫ನೇ ದಿನದಂದು ನಗರದ ೨೯ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಚಾರಿ ವಿಸರ್ಜನಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ನಗರದ ಗಣೇಶ ಭಕ್ತರು ಈ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳುವಂತೆ ಬೆಳಗಾವಿ ಮಾಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗಸ್ಟ್ ೨೯ ರಂದು ವಿದ್ಯುತ್ ನಿಲುಗಡೆ
ಯು ಜಿ ಕೇಬಲ್ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ೧೧೦ ಕೆ.ವ್ಹಿ. ವಡಗಾವಿ ಮತ್ತು ೩೩/೧೧ ಕೆವಿ ಫೋರ್ಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೫ ವಡಗಾವಿ ಹಾಗೂ ಎಫ್-೬ ಖಡೇಬಜಾರ ಪೂರಕದ ಮೇಲೆ ಬರುವ ಧಾಮನೆರೋಡ, ನಿಜಾಮಿಯಾ ಕಾಲನಿ, ವಿಷ್ಟಗಲ್ಲಿ, ಬಜಾರಗಲ್ಲಿ, ಶಾಹಾಪುರ ಪೋಲಿಸ್ ಸ್ಟೇಶನ್‌ರೋಡ, ದತ್ತಗಲ್ಲಿ, ವಜೆಗಲ್ಲಿ, ವಡಗಾಂವ, ನಾರ್ವೇಕರಗಲ್ಲಿ, ಚಾವಡಿಗಲ್ಲಿ, ನಾಥ ಪೈ ಸರ್ಕಲ್, ಬಸವೇಶ್ವರ ಸರ್ಕಲ್, ರೈತಗಲ್ಲಿ, ಸಫಾರ್‌ಗಲ್ಲಿ, ಭಾರತನಗರ, ಪವಾರಗಲ್ಲಿ, ಗಣೇಶಪುರಗಲ್ಲಿ, ಬಿಚ್ಚುಗಲ್ಲಿ, ಆಚಾರ್ಯಗಲ್ಲಿ, ಬಸವನಗಲ್ಲಿ, ಹಾಗೂ ಖಡೇಬಜಾರ, ಬೆಂಡಿ ಬಜಾರ, ಪಾಮಗೂಳಗಲ್ಲಿ, ಮೇಣಸೇಗಲ್ಲಿ, ಭೂವಿಗಲ್ಲಿ, ಮಾಳಿಗಲ್ಲಿ, ಕಲಾಯಿಗಾರಗಲ್ಲಿ, ಖಂಜರಗಲ್ಲಿ, ಕಚೇರಿರೋಡ, ಕಾಕತಿವೇಸ, ರಿಸಾಲ್ದಾರಗಲ್ಲಿ, ನಾರ್ವೇಕರಗಲ್ಲಿ, ತರುಣ ಭಾರತ ಪ್ರೇಸ್, ಗವಳಿಗಲ್ಲಿ, ಖಢಕಗಲ್ಲಿ, ಬಡಕಲಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗಸ್ಟ್ ೨೯ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಕಿಂಗ್ ಲ್ಯಾಪಟಾಪ್: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
೨೦೧೯-೨೦ನೇ ಸಾಲಿಗೆ ಇಲಾಖೆಯ ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಓದುತ್ತಿರುವ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪಟಾಪ್ ಒದಗಿಸಲು ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೨೬ ಕೊನೆಯ ದಿನವಾಗಿದೆ. ಜಿಲ್ಲೆಯ ಅಂಧ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಆನ್‌ಲೈನ ವಿಳಾಸ ತಿತಿತಿ.ಜತಿಜsಛಿ.ಞಚಿಡಿ.ಟಿiಛಿ.iಟಿ ಮುಖಾಂತರ ಅರ್ಜಿ ಸಲ್ಲಿಸಿ, ತಾಲೂಕು ಪಂಚಾಯತಿಯಲ್ಲಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ) ರಿಗೆ ದ್ವಿ-ಪ್ರತಿಯಲ್ಲಿ ಮುದ್ರಿತ ಅರ್ಜಿ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ ೦೮೩೧-೨೪೭೬೦೯೬, ೦೮೩೧-೨೪೭೬೦೯೭ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇವಾ ಸಿಂಧು ಪೋರ್ಟಲ್ ಪ್ರಾರಂಭ
೨೦೧೮-೧೯ ನೇ ಸಾಲಿನಿಂದ ರಾಜ್ಯದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿಗಳನ್ನು ಆನ್‌ಲೈನ್ ಮುಖಾಂತರ ವಿತರಿಸಲು ಸೇವಾ ಸಿಂಧು ಪೋರ್ಟಲ್‌ನ್ನು ಪ್ರಾರಂಭಿಸಲಾಗಿದೆ.
ಈ ಮೊದಲು ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವ ಎಲ್ಲಾ ಸ್ವಯಂ-ಸೇವಾ ಸಂಸ್ಥೆಯವರಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾಗಿದೆ.
ಆದರೆ ಓಂ ಸೇವಾ ಸಂಸ್ಥೆಯವರು ಮ್ಯಾನುವಲ್ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಆದ್ದರಿಂದ ಜಿಲ್ಲೆಯ ಹಿರಿಯ ನಾಗರಿಕರು ಈ ಸ್ವಯಂ-ಸೇವಾ ಸಂಸ್ಥೆಯವರು ನೀಡುವ (ಮ್ಯಾನುವಲ್) ಗುರುತಿನ ಚೀಟಿಗಳನ್ನು ಪಡೆಯದೇ, ಸೇವಾ ಸಿಂಧು ಸರ್ವಿಸ್ ಪ್ಲಸ್ ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಇಲಾಖೆಯ ಅಧಿಕಾರಿಗಳ ಡಿಜಿಟಲ್ ಸಹಿಯೊಂದಿಗೆ ಆನ್‌ಲೈನ್ ಮೂಲಕ ಮಾತ್ರ ಗುರುತಿನ ಚೀಟಿಗಳನ್ನು ಪಡೆಯುವಂತೆ ಹಿರಿಯ ನಾಗರಿಕರಲ್ಲಿ ಮನವಿ ಮಾಡಿದೆ.
ಓಂ ಸೇವಾ ಸಂಸ್ಥೆ ಅಥವಾ ಇನ್ನಾವುದೇ ಸ್ವಯಂ-ಸೇವಾ ಸಂಸ್ಥೆಯವರು ಮ್ಯಾನುವಲ್ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವುದು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಬೆಳಗಾವಿ ಇವರಿಗೆ ಲಿಖಿತ ದೂರು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ ೦೮೩೧-೨೪೭೬೦೯೬, ೦೮೩೧-೨೪೭೬೦೯೭ ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀಜ ಪರವಾನಗಿ ಪ್ರಮಾಣ ಪತ್ರ ಕಡ್ಡಾಯ
ತೋಟಗಾರಿಕೆ ಬೆಳೆಗಳ (ಹೂವು, ಹಣ್ಣು ಮತ್ತು ತರಕಾರಿ) ಉತ್ಪಾದನೆಯಲ್ಲಿ ಉಪಯೋಗಿಸುವ ಬೀಜದ ಗುಣಮಟ್ಟ ಬಹಳ ಮುಖ್ಯವಾಗಿದ್ದು, ಖಾಸಗಿ ಮಾರಾಟಗಾರರಿಂದ ಸರಬರಾಜು ಆಗುವ ಬೀಜದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಾಗೂ ಬೆಳೆಗಾರರಿಗೆ ಕಳಪೆ ಬಿತ್ತನೆ ಬೀಜ ಸರಬರಾಜು ಆಗುವುದನ್ನು ನಿಯಂತ್ರಿಸಲು ತೋಟಗಾರಿಕೆ ಬೆಳೆಗಳ ಬೀಜ ಮಾರಾಟಗಾರರು, ವರ್ತಕರು ಕಡ್ಡಾಯವಾಗಿ ತೋಟಗಾರಿಕೆ ಇಲಾಖೆಯಿಂದ ಬೀಜ ಪರವಾನಗಿ ಪ್ರಮಾಣ ಪತ್ರಕ್ಕಾಗಿ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕು.
ಜಿಲ್ಲೆಯ ರೈತರಿಗೆ ಉತ್ತಮ ಗುಣಮಟ್ಟದ ತೋಟಗಾರಿಕೆ ಬಿತ್ತನೆ ಬೀಜಗಳನ್ನು ಲಭ್ಯವಾಗಿಸುವ ಉದ್ದೇಶಕ್ಕಾಗಿ ಬೀಜ ಅಧಿನಿಯಮ (೧೯೬೬), ಬೀಜ ನಿಯಮಾವಳಿ (೧೯೬೮) ಮತ್ತು ಬೀಜ (ನಿಯಂತ್ರಣ) ಆದೇಶ (೧೯೮೩) ವನ್ನು ಅನುಷ್ಠಾನಗೊಳಿಸುವುದು ಅವಶ್ಯಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ