Kannada NewsKarnataka News

ಕೆಲವು ಕಡೆ ಗೋಲಮಾಲ್‌ ನಡೆಯುತ್ತಿದೆ -ಬಾಲಚಂದ್ರ ಜಾರಕಿಹೊಳಿ

೮೫೯೩ ಸಂತ್ರಸ್ಥರಿಗೆ ೮.೫೯ ಕೋಟಿ ರೂ. ಪರಿಹಾರ ಧನ ವಿತರಣೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಪ್ರವಾಹದಿಂದ ಹಾನಿಗೀಡಾದ ಸಂತ್ರಸ್ಥರಿಗೆ ಮಾತ್ರ ಸರ್ಕಾರದ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಿ. ಕೆಲವು ಕಡೆಗಳಲ್ಲಿ ಗೋಲಮಾಲ್‌ಗಳು ನಡೆಯುತ್ತಿವೆ. ಒಂದು ವೇಳೆ ನಿಜವಾದ ಸಂತ್ರಸ್ಥರಿಗೆ ಸರ್ಕಾರದ ಪರಿಹಾರ ಧನ ತಲುಪದಿದ್ದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಖಡಕ್ ಎಚ್ಚರಿಕೆ ನೀಡಿದರು.
ಗುರುವಾರ ಇಲ್ಲಿಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ ಅವರು, ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೀಡಾದ ಸಂತ್ರಸ್ಥರನ್ನು ಗುರುತಿಸಿ ಜಂಟೀ ಸಮೀಕ್ಷೆ ನಡೆಸಿ ೧೫ ದಿನಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರವಾಹದಿಂದಾಗಿ ಕ್ಷೇತ್ರದ ೨೯ ಗ್ರಾಮಗಳು ಜಲಾವೃತಗೊಂಡಿದ್ದು, ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಈಗಾಗಲೇ ಸರ್ಕಾರದ ತಾತ್ಕಾಲಿಕ ಪರಿಹಾರ ರೂ. ೧೦ ಸಾವಿರಗಳನ್ನು ನೀಡುತ್ತಿದ್ದು, ಇದರಲ್ಲಿಯೂ ಅಕ್ರಮವಾಗುತ್ತಿದೆ. ಸಂತ್ರಸ್ಥರಲ್ಲದವರೂ ಬೋಗಸ್ ಪರಿಹಾರ ಧನ ಪಡೆಯುತ್ತಿದ್ದಾರೆ. ಪ್ರಸಂಗ ಬಿದ್ದರೆ ಸಂತ್ರಸ್ಥರಲ್ಲದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಹಿಂಜರಿಯುವುದಿಲ್ಲವೆಂದು ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.

ಪೊಲೀಸ್ ಕಾವಲಿನಲ್ಲಿ ಪರಿಹಾರ


ನಿರಾಶ್ರಿತರಿಗೆ ಪರಿಹಾರ ಧನದ ಚೆಕ್‌ನ್ನು ಪ್ರತಿ ಗ್ರಾಮಗಳಿಗೆ ತಲುಪಿಸಿ ವಿತರಿಸಬೇಕು. ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಅರಭಾವಿ ಕ್ಷೇತ್ರದ ಸಂತ್ರಸ್ಥರಿಗೆ ಅಂದಾಜು ೩೫೦ ಶೆಡ್‌ಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಮೀಕ್ಷೆ ಕಾರ್ಯ ನಡೆಯುವ ಸಂದರ್ಭದಲ್ಲಿ ಅನಧೀಕೃತ ಫಲಾನುಭವಿಗಳು ಆಯ್ಕೆಯಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಸಂತ್ರಸ್ಥರಿಗೆ ಪಡಿತರ ಧಾನ್ಯಗಳನ್ನು ವಿತರಿಸುವ ಸಂದರ್ಭದಲ್ಲಿ ಕೆಲವರು ಗಲಾಟೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ಅಂತಹ ಗ್ರಾಮಗಳಲ್ಲಿ ಕಡ್ಡಾಯವಾಗಿ ಪೊಲೀಸ್‌ರನ್ನು ನಿಯೋಜಿಸಿ ಸಂತ್ರಸ್ಥರಿಗೆ ಸರ್ಕಾರಿ ಸೌಲಭ್ಯ ಸಿಗಲು ಅನುಕೂಲ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

೮.೫೯ ಕೋಟಿ ರೂ.ಗಳ ಪರಿಹಾರ ಧನ :

ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಅಡಿಬಟ್ಟಿ, ಚಿಗಡೊಳ್ಳಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಲೋಳಸೂರ, ಬಸಳಿಗುಂದಿ, ಬಳೋಬಾಳ, ಬೀರನಗಡ್ಡಿ, ವಡೇರಹಟ್ಟಿ, ಗುಜನಟ್ಟಿ, ಭೈರನಟ್ಟಿ, ಢವಳೇಶ್ವರ, ಕಮಲದಿನ್ನಿ, ಅರಳಿಮಟ್ಟಿ, ಫುಲಗಡ್ಡಿ, ಸುಣಧೋಳಿ, ಮುನ್ಯಾಳ, ಧರ್ಮಟ್ಟಿ, ರಂಗಾಪೂರ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಹುಣಶ್ಯಾಳ ಪಿಜಿ, ಅವರಾದಿ, ತಿಗಡಿ ಮಸಗುಪ್ಪಿ ಮತ್ತು ಪಟಗುಂದಿ ಗ್ರಾಮಗಳಲ್ಲಿ ತಲಾ ೧೦ ಸಾವಿರ ರೂ.ಗಳಂತೆ ತಾತ್ಕಾಲಿಕ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಲಾಗುತ್ತಿದೆ.

ಮೆಳವಂಕಿ, ತಳಕಟ್ನಾಳ ಹಾಗೂ ನಲ್ಲಾನಟ್ಟಿ ಗ್ರಾಮಗಳಲ್ಲಿ ಸಮೀಕ್ಷೆ ಕಾರ್ಯ ಮುಕ್ತಾಯದ ಹಂತ ತಲುಪಿದೆ. ಅರಭಾವಿ ಮತಕ್ಷೇತ್ರದ ೮೫೯೩ ಸಂತ್ರಸ್ಥರಿಗೆ ೮.೫೯ ಕೋಟಿ ರೂ.ಗಳ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದರು.

ಅಧಿಕಾರಿಗಳ ಅಳಲು :

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮುಂದೆ ಅಧಿಕಾರಿಗಳೇ ತಮ್ಮ ಅಳಲು ತೋಡಿಕೊಂಡರು. ಸಂತ್ರಸ್ಥರಿಗೆ ಪರಿಹಾರ ಧನದ ಚೆಕ್ ನೀಡುವ ಸಂದರ್ಭದಲ್ಲಿ ಉದ್ಧಟತನ ವರ್ತನೆ ತೋರುತ್ತಿದ್ದಾರೆ. ಸಮೀಕ್ಷೆಯಲ್ಲಿ ತಮ್ಮ ಕುಟುಂಬದ ಹೆಸರನ್ನು ನಾಲ್ಕು ನಾಲ್ಕು ಸಾರಿ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ.

ಸಾಲದ್ದಕ್ಕೆ ಪಡಿತರ ಚೀಟಿಯನ್ನು ತೋರಿಸಿ ಒಂದೇ ಕುಟುಂಬದ ನಾಲ್ವರು ಹೆಸರಿನ ಮೇಲೆ ಚೆಕ್ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಪಡಿತರಗಳನ್ನು ಹಂಚುವ ಸಂದರ್ಭದಲ್ಲಿ ಲಾರಿಗಳನ್ನು ತಡೆಯುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ಪರಿಹರಿಸುವಂತೆ ಶಾಸಕರಿಗೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಮ್ಮ ನೋವುಗಳನ್ನು ತೋಡಿಕೊಂಡರು.

ಶಾಲೆಗಳ ಮರು ನಿರ್ಮಾಣ

ಅರಭಾವಿ ಮತಕ್ಷೇತ್ರದಲ್ಲಿ ೧೯೩ ಶಾಲೆಗಳು ಮಳೆ ಮತ್ತು ಪ್ರವಾಹದಿಂದಾಗಿ ಶಾಲಾ ಕಟ್ಟಡಗಳು ಕುಸಿತ ಕಂಡಿವೆ. ೪೨೪ ಶಾಲೆಗಳು ದುರಸ್ತಿಯಲ್ಲಿದ್ದು, ಇದಕ್ಕಾಗಿ ೪.೨೪ ಕೋಟಿ ರೂ.ಗಳು ಹಾಗೂ ಶಿಥಿಲಗೊಂಡ ಶಾಲೆಗಳ ಮರು ನಿರ್ಮಾಣಕ್ಕೆ ೨೯.೨೮ ಕೋಟಿ ರೂ.ಗಳ ಅವಶ್ಯಕತೆ ಇದೆ. ಇದಕ್ಕಾಗಿ ಅಂದಾಜು ೩೪ ಕೋಟಿ ರೂ.ಗಳ ಅನುದಾನ ಅಗತ್ಯವಿದೆ.

ಎನ್‌ಡಿಆರ್‌ಎಫ್ ಯೋಜನೆಯಡಿ ಒಂದು ಶಾಲೆಯ ದುರಸ್ತಿಗೆ ಕೇವಲ ೨ ಲಕ್ಷ ರೂ.ಗಳನ್ನು ನೀಡುತ್ತಿದ್ದು, ಈ ಹಣವು ಶಾಲಾ ದುರಸ್ತಿಗೂ ಸಹ ಸಾಕಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ ಅಗತ್ಯ ಹಣವನ್ನು ಕೂಡಲೇ ಬಿಡುಗಡೆ ಮಾಡಿಸುವಂತೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಕೋರಿದರು.

ಶಾಲೆಗಳಲ್ಲಿ ಗಂಜಿ ಕೇಂದ್ರಗಳು ಪ್ರಾರಂಭವಾಗಿದ್ದರಿಂದ ಶಾಲಾ ದಾಸ್ತಾನುಗಳನ್ನು ಸಂತ್ರಸ್ಥರಿಗೆ ನೀಡಲಾಗಿದೆ. ಇದನ್ನು ಮರು ಭರಣಾ ಮಾಡುವಂತೆ ಮನವಿ ಮಾಡಿಕೊಂಡರು.
ಗೋಕಾಕ ಶೈಕ್ಷಣಿಕ ವಲಯದಲ್ಲಿ ೨೫೬ ಶಾಲಾ ಕೊಠಡಿಗಳು ದುರಸ್ತಿಯಲ್ಲಿವೆ. ೭೬ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇದಕ್ಕಾಗಿ ೧೫.೨೬ ಕೋಟಿ ರೂ.ಗಳ ಅಂದಾಜು ಹಾನಿಯನ್ನು ವರದಿ ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಅವರು ಹೇಳಿದರು.

ಸರ್ಕಾರಿ ಕಟ್ಟಡಗಳಿಗೆ ಹಾನಿ

ಲೋಕೋಪಯೋಗಿ ಇಲಾಖೆಯ ವರದಿ ಪ್ರಕಾರ ೧೨೫ ಕಿ.ಮೀ ರಸ್ತೆಗಳು ಹಾಳಾಗಿದ್ದು, ಇದರಲ್ಲಿ ೪ ಸೇತುವೆಗಳು ಸೇರಿವೆ. ಅರಭಾವಿ ಮಠದಿಂದ ಯಾದವಾಡವರೆಗಿನ ಶಾಶ್ವತ ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರ್‌ಡಿಪಿಆರ್ ಇಲಾಖೆಯ ೩೬೯ ಕಿ.ಮೀ ರಸ್ತೆ ಹಾಳಾಗಿದ್ದು, ಇದಕ್ಕಾಗಿ ೩೫ ಕೋಟಿ ರೂ.ಗಳ ಅಂದಾಜು ವರದಿಯನ್ನು ನೀಡಲಾಗಿದೆ. ಇದರಲ್ಲಿ ೭ ಸೇತುವೆಗಳು ೧ ಕೆರೆಗಳು ಸೇರಿವೆ. ೪೯೨ ಶಾಲೆ, ಅಂಗನವಾಡಿ ಹಾಗೂ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ೪೦.೯೯ ಕೋಟಿ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ಇತ್ತೀಚೆಗೆ ಸುರಿದ ಭಾರಿ ಪ್ರಮಾಣದ ಮಳೆ ಹಾಗೂ ಅಬ್ಬರದ ಪ್ರವಾಹದಿಂದಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ. ಕೂಡಲೇ ನಷ್ಟಗೀಡಾದ ರೈತರ ಬೆಳೆಗಳ ಹಾನಿಯನ್ನು ಸಮೀಕ್ಷೆ ನಡೆಸಿ ಎ.ಸಿ ಮೂಲಕ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಡಿವಾಯ್‌ಎಸ್‌ಪಿ ಎಸ್. ಪ್ರಭು, ಮೂಡಲಗಿ ತಾಲೂಕಾ ನೋಡಲ್ ಅಧಿಕಾರಿ ಎಸಿಎಫ್ ಶ್ರೀಕಾಂತ ಕಣದಾಳೆ ಉಪಸ್ಥಿತರಿದ್ದರು.

ಅನುದಾನ ಬಿಡುಗಡೆ

ನಿರಾಶ್ರಿತರಿಗೆ ಪರಿಹಾರ ಧನವನ್ನು ಸರ್ಕಾರವೇ ನೀಡುತ್ತಿದೆ. ಅಗತ್ಯವಿರುವ ಅನುದಾನ ಕೂಡ ಬಿಡುಗಡೆಯಾಗಿದೆ. ಸರ್ಕಾರದಿಂದ ಒಂದು ರೂ. ಸಹ ಅನುದಾನ ಬಂದಿಲ್ಲವೆನ್ನುವ  ಆರೋಪವನ್ನು ಬಾಲಚಂದ್ರ ಜಾರಕಿಹೊಳಿ ನಿರಾಕರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸರ್ಕಾರದಿಂದ ಈಗಾಗಲೇ ಸಂತ್ರಸ್ಥರಿಗೆ ತಲಾ ೧೦ ಸಾವಿರ ರೂ.ಗಳ ಚೆಕ್‌ಗಳನ್ನು ನೀಡಲಾಗುತ್ತಿದೆ. ವಸತಿಗಾಗಿ ತಾತ್ಕಾಲಿಕ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ.  ಸಂತ್ರಸ್ಥರ ವಿಷಯದಲ್ಲಿ ರಾಜಕಾರಣ ಬೆರೆಸಬಾರದು. ಇದು ಶೋಭೆ ತರುವಂತದ್ದಲ್ಲ ಎಂದು  ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕತ್ತಿಯನ್ನು ಮಂತ್ರಿ ಮಾಡ್ತೇವೆ :

ರಾಜ್ಯದ ಹಿರಿಯ ಬಿಜೆಪಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಈಗಾಗಲೇ ಹೈಕಮಾಂಡ್ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಶಾಸಕರಿದ್ದವರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು. ಉಮೇಶ ಕತ್ತಿ ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ಸಚಿವ ಸ್ಥಾನ ನೀಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಕತ್ತಿಯವರ ಬೆಂಬಲಕ್ಕೆ ನಾವೆಲ್ಲ ನಿಂತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಕ್ಷಿ :

ಇದೆ ೩೧ ರಂದು ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾವು ಆಕಾಂಕ್ಷಿಯಾಗಿದ್ದು, ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ. ಅವಿರೋಧವಾಗಿ ಆಯ್ಕೆ ಮಾಡುವಂತೆ ಈಗಾಗಲೇ ಎಲ್ಲ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಮಧ್ಯಂತರ ಚುನಾವಣೆ ನಡೆಯಲ್ಲ :

ನಾಯಕರುಗಳಿಗೆ ಮಾತ್ರ ಚುನಾವಣೆ ಬೇಕಾಗಿದ್ದು, ಶಾಸಕರುಗಳಿಗೆ ಮಧ್ಯಂತರ ಚುನಾವಣೆ ಬೇಡವಾಗಿದೆ. ಬಿಜೆಪಿ ಸರ್ಕಾರ ೨೦೨೩ ರವರೆಗೆ ಸುಭದ್ರ ಆಡಳಿತ ನಡೆಸಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button