Kannada NewsKarnataka News

ಶಿಕ್ಷಕರ ವರ್ಗಾವಣೆ: ಬಸವರಾಜ ಹೊರಟ್ಟಿಯ 10 ಸಲಹೆಗಳು

ಹಾಲಿ ಶಿಕ್ಷಣ ಸಚಿವರಿಗೆ ಮಾಜಿ ಶಿಕ್ಷಣ ಸಚಿವರ ಪತ್ರ –

ಸುರೇಶ್ ಕುಮಾರ್ ಗೆ ಬಸವರಾಜ ಹೊರಟ್ಟಿ ಸಲಹೆ

 

 ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –

ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆ ಲೋಪದೋಷಗಳನ್ನು ಸರಿಪಡಿಸಿಕೊಂಡು ಪ್ರಕ್ರಿಯೆಯನ್ನು ಮುಕ್ತಾಗೊಳಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರಿಗೆ ಮಾಜಿ ಶಿಕ್ಷಣ ಸಚಿವ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.

ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಹಾಗೂ ಅನಿರ್ಧಿಷ್ಠಾವಧಿಗೆ ಸ್ಥಗಿತಗೊಳಿಸಿರುವ ಸುದ್ದಿಯನ್ನು ತಿಳಿದಿರುತ್ತೇನೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಶೇಕಡಾ ೭೦ರಷ್ಟು ವರ್ಗಾವಣೆ ಪ್ರಕ್ರಿಯೆಗಳು ಮುಗಿದಿರುತ್ತವೆ. ಈ ಹಂತದಲ್ಲಿ ತಾವು ಏಕಾ-ಏಕಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಒಳ್ಳೆಯದಲ್ಲ. ಇದರಿಂದ ಈಗಾಗಲೇ ವರ್ಗಾವಣೆ ಹೊಂದಿದವರಲ್ಲಿ ಕೆಲವರಿಗೆ ಅನ್ಯಾಯ ಮಾಡಿದಂತಾಗುತ್ತದೆ.

ಇದನ್ನೂ ಓದಿ – ಶಿಕ್ಷಕರ ವರ್ಗಾವಣೆಗೆ ಬ್ರೇಕ್: ಆಡಳಿತಾತ್ಮಕ ಬಿಕ್ಕಟ್ಟು ಸಾಧ್ಯತೆ

ಆದ್ದರಿಂದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದೆ ಅಗತ್ಯ ಮಾರ್ಪಾಡುಗಳನ್ನು ಮಾಡಿ ಮುಕ್ತಾಯಗೊಳಿಸುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ. ಇಲ್ಲವಾದಲ್ಲಿ, ಈಗಾಗಲೇ ವರ್ಗಾವಣೆ ಮಾಡಿ ಆದೇಶ ನೀಡಲಾಗಿರುವ/ನೀಡುವ ಹಂತದಲ್ಲಿರುವ ಪ್ರಕ್ರಿಯೆಗೆ ಕೂಡಲೇ ಸ್ಥಗಿತಗೊಳಿಸುವಂತೆ ಸೂಚನೆ ನೀಡಬೇಕು.

10 ಸಲಹೆ ನೀಡಿದ ಹೊರಟ್ಟಿ

ವರ್ಗಾವಣೆ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಿಚ್ಚಿಸಿದಲ್ಲಿ ನನ್ನ ಗಮನಕ್ಕೆ ಬಂದ ಈ ಕೆಳಗಿನ ಕೆಲವು ಸಲಹಾ ಅಂಶಗಳನ್ನು ಪರಿಗಣಿಸಿ ತಿದ್ದುಪಡಿ ತರಬೇಕೆಂದು ಇಚ್ಚಿಸುತ್ತೇನೆ.

೧. ಕಡ್ಡಾಯ ವರ್ಗಾವಣೆ ಎಂದಾದಲ್ಲಿ ಯಾವುದೇ ರೀತಿಯಿಂದ ವಿನಾಯತಿಯನ್ನು ಯಾರಿಗೂ ನೀಡಬಾರದು. ರಿಯಾಯತಿ ನೀಡಿದಲ್ಲಿ ಇದು ಕಡ್ಡಾಯ ವರ್ಗಾವಣೆ ಅನಿಸುವುದಿಲ್ಲ.

೨. ಯಾವುದೇ ವಿನಾಯತಿಗಳು ಇದ್ದಲ್ಲಿ ಅವುಗಳನ್ನು ಕೋರಿಕೆ, ಸಾಮಾನ್ಯ ವರ್ಗಾವಣೆಗಳಲ್ಲಿ ಅಳವಡಿಸಬಹುದು.( ಉದಾ: ಮಾರಣಾಂತಿಕ ಖಾಯಿಲೆಗಳು, ಪತಿ-ಪತ್ನಿ ಪ್ರಕರಣಗಳು, ಸಂಘ-ಸಂಘಟನೆಗಳ ಪದಾಧಿಕಾರಿಗಳು, ವಿಧವೆ-ವಿಚ್ಛೇದಿತರು ಇತ್ಯಾದಿ).

೩. ಮಾರಣಾಂತಿಕ ಖಾಯಿಲೆಗಳನ್ನು ಹೊಂದಿರುವ ನೌಕರರು ತಮ್ಮ ಆರೋಗ್ಯದತ್ತ ಗಮನ ಹರಿಸಿದಲ್ಲಿ, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಗಂಭೀರ ಖಾಯಿಲೆ ಇರುವ ನೌಕರರನ್ನು ಸ್ವಯಂ/ಕಡ್ಡಾಯ ನಿವೃತ್ತಿಯಂತಹ ಯೋಜನೆಗಳಿಂದ ಅನುಕೂಲತೆ ಮಾಡಿ ಕಳುಹಿಸುವುದು ಒಳ್ಳೆಯದು.

೪. ವರ್ಗಾವಣೆಯನ್ನು ನಡೆಸುವ ಪ್ರಾಧಿಕಾರಗಳ ಮರುವಿನ್ಯಾಸ ಮಾಡಬೇಕಾಗಿರುತ್ತದೆ. ತಾಲ್ಲೂಕು ಮಟ್ಟದ ವರ್ಗಾವಣೆಗಳನ್ನು ಡಿಡಿಪಿಐ , ಜಿಲ್ಲಾ ಮಟ್ಟದ ವರ್ಗಾವಣೆಗಳನ್ನು ಅಪರ ಆಯುಕ್ತರು ಮತ್ತು ವಿಭಾಗ ಮಟ್ಟದ ವರ್ಗಾವಣೆಗಳನ್ನು ರಾಜ್ಯ ಮಟ್ಟದಲ್ಲಿ ನಡೆಸಿದರೆ ಅನುಕೂಲವಾಗುತ್ತದೆ. ಇದರಿಂದ ಪಾರದರ್ಶಕತೆ ಹೆಚ್ಚಾಗುತ್ತದೆ.

೫. ವರ್ಗಾವಣೆಗೆ ಸಂಬಂಧಿಸಿದ ತಂತ್ರಾಂಶದ ನಿಯಂತ್ರಣವು ಕೇವಲ ರಾಜ್ಯ ಮಟ್ಟದಲ್ಲಿದ್ದು, ಅಲ್ಪ-ಸ್ವಲ್ಪ ಬದಲಾವಣೆ ಇದ್ದಲ್ಲಿ ತಿದ್ದುಪಡಿ ಮಾಡುವುದು ತುಂಬಾ ತೊಂದರೆಯಾಗುತ್ತಿದೆ. ಈ ಪ್ರಕ್ರಿಯೆಯು ಕಾಲಮಿತಿಯಲ್ಲಿರುವುದಿರಂದ ಬದಲಾವಣೆಗೆ/ತಿದ್ದುಪಡಿಗೆ ಅಪರ ಆಯುಕ್ತರಿಗೆ ಅವಕಾಶ ಕಲ್ಪಿಸಿಕೊಡುವುದು ಉತ್ತುಮ. ಇದರಿಂದ ವಿಳಂಬ ನೀತಿ ತಪ್ಪಿಸಬಹುದು.

೬. ತಂತ್ರಾಂಶದಲ್ಲಿ ಮಾಹಿತಿಯನ್ನು ಸೇರ್ಪಡೆ ಮಾಡುವ ಅವಧಿಯಲ್ಲಿ ಆಗಿರಬಹುದಾದ ತೊಂದರೆಗಳಿಗೆ ಅನೇಕ ಆಕ್ಷೇಪಣೆಗಳು ಬರುತ್ತಿವೆ. ಕೆಲವು ಕಡೆಗಳಲ್ಲಿ ಅನುಭವವಿಲ್ಲದ ಮುಖ್ಯೋಪಾಧ್ಯಾಯರು ಇಲ್ಲವೇ ಶಿಕ್ಷಕರೇ ಮಾಹಿತಿಯನ್ನು ಅಳವಡಿಸಿರುವುದರಿಂದ ತಪ್ಪು ಮಾಹಿತಿ ಸಂಗ್ರಹವಾಗಿದೆ. ಎಸ್‌ಎಟಿಎಸ್ ಮತ್ತು ಹೆಚ್‌ಆರ್‌ಎಂಎಸ್ ಎರಡೂ ತಂತ್ರಾಂಶಗಳಿಂದ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಿ ಪಡೆದುಕೊಳ್ಳಬಹುದಾಗಿದೆ.

ಸುಳ್ಳು ಮಾಹಿತಿ

೭. ಅನೇಕ ಪ್ರಕರಣಗಳಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ವರ್ಗಾವಣೆ ಪಡೆಯುವ ನೌಕರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಬೇಕು.

೮. ಕಡ್ಡಾಯ ವರ್ಗಾವಣೆಯಲ್ಲಿ ವಲಯವಾರು ವರ್ಗಾವಣೆಗಳು ನಿಯಮಾನುಸಾರ ನಡೆಯುತ್ತಿಲ್ಲ. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡ ಕ್ರಮಗಳನ್ನು ಅಳವಡಿಸಿದಲ್ಲಿ ಯಾವುದೇ ಆಕ್ಷೇಪಣೆಗಳು ಬರುವುದಿಲ್ಲ. ವಲಯವಾರು ಹಂಚಿಕೆಯಲ್ಲಿ ಕೆಲವೊಬ್ಬರಿಗೆ ಅನ್ಯಾಯವಾಗುತ್ತಿವೆ. ಸುಮಾರು ೨೫-೩೦ ವರ್ಷಗಳಿಂದ ಎ ವಲಯದಲ್ಲಿಯೇ ಇದ್ದು, ಅಲ್ಲಿಯೇ ನಿವೃತ್ತಿ ಹೊಂದಿರುವವರೂ ಇದ್ದಾರೆ.

೯. ಕೆಲವು ಶಿಕ್ಷಕರು ಸಿ ವಲಯದಲ್ಲಿ ಸೇವೆ ಪ್ರಾರಂಭಿಸಿ ಅಲ್ಲಿಯೇ ನಿವೃತ್ತಿ ಹೊಂದಿದವರೂ ಇದ್ದಾರೆ. ಅಲ್ಲಿಯೇ ಹೊಲ-ಮನೆಗಳನ್ನು ಮಾಡಿಕೊಂಡು ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಯತ್ತ ಗಮನಕೊಡದೇ ಇರುವ ಬಗ್ಗೆ ದೂರುಗಳಿವೆ. ಇಂತಹ ಶಿಕ್ಷಕರಿಗೂ ಕೂಡ ಆಯಾ ವಲಯಗಳಲ್ಲಿ ಗರಿಷ್ಟ ಸೇವಾವಧಿಯನ್ನು ನಿಗದಿಪಡಿಸಬೇಕು.

೧೦. ವರ್ಗಾವಣೆ ಪ್ರಕ್ರಿಯೆಗೆ ನಿಗದಿತ ಕಾಲಾವಕಾಶವನ್ನು ಗೊತ್ತುಪಡಿಸಬೇಕು. ಇದು ಯಾವುದೇ ಸಂದರ್ಭದಲ್ಲಿ ಬದಲಾಗದಂತೆ ವೇಳಾ ಪಟ್ಟಿಯನ್ನು ನಿಗದಿಪಡಿಸುವುದು.

ನನ್ನ ಅನಿಸಿಕೆ ಪ್ರಕಾರ ವರ್ಗಾವಣೆ ಪ್ರಕ್ರಿಯೆಯನ್ನು ಏಪ್ರಿಲ್ ೧ರಿಂದ ಪ್ರಾರಂಭಿಸಿ ಮೇ-೨೦ನೇ ತಾರೀಖಿನೊಳಗಾಗಿ ಮುಗಿಸಲು ವೇಳಾಪಟ್ಟಿ ರಚಿಸಬೇಕು. ಇದರಿಂದ ಜೂನ್‌ತಿಂಗಳಿಂದ ಶಾಲಾ-ಕಾಲೇಜುಗಳು ಕಾರ್ಯಾರಂಭಗೊಂಡು ಶಿಕ್ಷಕರು ನೆಮ್ಮದಿಯ ಕಾರ್ಯನಿರ್ವಹಿಸಲು ಅನಕೂಲವಾಗುವುದು.

ಮೇಲಿನ ಎಲ್ಲಾ ಅಂಶಗಳು ನಾನು ಕಂಡಂತೆ ಬದಲಾವಣೆ ಆಗಬೇಕಿವೆ. ಈ ಕುರಿತು ತಾವು ಶೀಘ್ರವಾಗಿ ನಿಯಮಗಳನ್ನು ಪರಿಷ್ಕರಿಸಿ, ಕೂಡಲೇ ಅರ್ಧಕ್ಕೆ ನಿಂತಿರುವ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕೋರುತ್ತೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಅಕ್ಟೋಬರ್ ನಲ್ಲಿ ಮತ್ತೆ ನಡೆಯುತ್ತಾ ಶಿಕ್ಷಕರ ವರ್ಗಾವಣೆ?

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಹಠಾತ್ ಸ್ಥಗಿತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button