Kannada NewsKarnataka News

ಮಣ್ಣಿನ ಗಣಪ ಶ್ರೇಷ್ಠ ಗಣಪ -ಪಿಓಪಿಯಿಂದ ತಯಾರಿಸಿದ ವಿಗ್ರಹ ನಿಷೇಧ

ಮಣ್ಣಿನ ಗಣಪ ಶ್ರೇಷ್ಠ ಗಣಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- 

ಪುರಾಣಗಳಲ್ಲಿ ತಿಳಿಸಿರುವಂತೆ, ಗಣಪತಿಯ ಜನ್ಮವು ಮಣ್ಣಿನಿಂದಲೇ ಆಗಿರುವುದರಿಂದ ಮಣ್ಣಿನ ಗಣಪನೇ ಶ್ರೇಷ್ಠ ಗಣಪ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗೋಪಾಕೃಷ್ಣ ಬಿ. ಸಣತಂಗಿ ಅಭಿಪ್ರಾಯಪಟ್ಟರು.

ಅವರು ನಗರದ ಡಾ. ಸ. ಜ. ನಾ. ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕ. ರಾ. ವಿ. ಪ ಡಾ. ಸ. ಜ. ನಾ. ವಿಜ್ಞಾನ ಕೇಂದ್ರ, ಪರಿಸರ ಮಿತ್ರ ಸಂಘ ಹಾಗೂ ಸಾ. ಶಿ. ಇಲಾಖೆ ಬೆಳಗಾವಿ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಠಿಯಿಂದ ಮಣ್ಣಿನ ವಿಗೃಹಗಳ ವಿತರಣೆ, ವಿಸರ್ಜನೆ ಸಂದರ್ಭದಲ್ಲಿ ವಿಲೇವಾರಿ ಸೇರಿದಂತೆ ಸಕಲ ವ್ಯವಸ್ಥೆ ಮಾಡಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಅತಿಥಿ ಉಪನ್ಯಾಸ ನೀಡಿದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ರಾಹುಲ್ ಬನ್ನೂರ ಮಾತನಾಡಿ ಭಾರತೀಯ ಸಂಸ್ಕ್ರತಿಯಲ್ಲಿ ಹಬ್ಬಗಳು ಪರಿಸರದ ಆರಾಧನೆಗಾಗಿಯೇ ಮೀಸಲಾಗಿವೆ ಅವುಗಳಲ್ಲಿ ಗಣೇಶೋತ್ಸವವೂ ಒಂದು.

ಆಡಂಭರದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಪಿಓಪಿಯಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಪೂಜಿಸಿ ಜಲಮೂಲಗಳನ್ನು ಮತ್ತು ಪರಿಸರವನ್ನು ನಾಶಮಾಡದೇ ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ಗಣೇಶನ ಹಬ್ಬವನ್ನು ಆಚರಿಸಬೇಕು ಎಂದರು.

ಪರಿಸರ ಮಿತ್ರ ಸಂಘದ ಅಧ್ಯಕ್ಷ ಪ್ರೋ. ಜಿ. ಕೆ. ಖಡಬಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಅಧಿಕಾರಿ ಡಾ. ಜಿ. ಎಮ್. ಪಾಟೀಲ ಅವರು ಪಿಓಪಿಯಿಂದ ತಯಾರಿಸಿದ ಗಣೇಶನ ವಿಗೃಹಗಳ ವಿಲೇವಾರಿ ಕುರಿತಾದ ನೂತನ ವೈಜ್ಞಾನಿಕ ಸಂಶೋದನೆ ಕುರಿತು ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.

ವೇದಿಕೆಯ ಮೇಲೆ ನಗರ ಸೇವಕಿ ಸರಳಾ ಹೇರೇಕರ, ಬೇಸ್ ಸಂಸ್ಥೆಯ ಕಾರ್ಯದರ್ಶಿ ರಾಜನಂದಾ ಘಾರ್ಗಿ, ಮೋಹನ ಗುಂಡ್ಲೂರ, ರಾಜಶ್ರೀ ಕುಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಗರದ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಯೋಜನಾ ವರದಿ ತಯಾರಿಕಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಡಾ. ಸ. ಜ. ನಾ. ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ನಿರೂಪಿಸಿ ವಂದಿಸಿದರು.

 

ಗಣೇಶ ಹಬ್ಬ: ಪಿಓಪಿಯಿಂದ ತಯಾರಿಸಿದ ವಿಗ್ರಹ ನಿಷೇಧ

ಸಾರ್ವಜನಿಕರು ಮುಂಬರುವ ಗಣೇಶ ಹಬ್ಬವನ್ನು ಪಿ.ಓ.ಪಿ.ಯಿಂದ ತಯಾರಿಸಿದ ಅಥವಾ ಬಣ್ಣಲೇಪಿತ ವಿಗ್ರಹಗಳನ್ನು ಬಳಸದೇ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ವಿಗ್ರಹಗಳನ್ನು ಮಾತ್ರ ಬಳಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗಂಟಿ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಅವರ ಜುಲೈ ೨೦, ೨೦೧೬ ರ ಅಧಿಸೂಚನೆ ಮೇರೆಗೆ ಪಿ.ಓ.ಪಿ.ಯಿಂದ ತಯಾರಿಸಲಾದ ಅಥವಾ ಬಣ್ಣಲೇಪಿತ ವಿಗ್ರಹಗಳನ್ನು ಇನ್ನು ಮುಂದೆ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿರ್ಬಂಧಿಸಲಾಗಿದೆ.
ಬೆಳಗಾವಿ ನಗರದ ನಾಗರಿಕರಿಗೆ ಅನುಕೂಲವಾಗುವಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೮ ಗಣೇಶ ವಿಸರ್ಜನೆ ಹೊಂಡಗಳನ್ನು ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿದ್ದು, ಗಣೇಶ ಮಹಾಮಂಡಳದ ವತಿಯಿಂದ ಸ್ಥಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಹಾಗೂ ಮನೆಗಳಲ್ಲಿ ಸ್ಥಾಪಿಸಿದ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆ ನಿರ್ಮಿಸಿದ ವಿಸರ್ಜನಾ ಕುಂಡಗಳಲ್ಲಿ ಮಾತ್ರ ಧಾರ್ಮಿಕ ವಿಧಿವಿಧಾನಗಳಿಂದ ವಿಸರ್ಜನೆ ಮಾಡಬೇಕು.

ಇದಲ್ಲದೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ, ದಂಡು ಮಂಡಳಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗೃಹ ಮಂಡಳಿ ಸಹಯೋಗದೊಂದಿಗೆ ಗಣೇಶ ಹಬ್ಬದ ೫ನೇ ದಿನದಂದು ನಗರದ ೨೯ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಚಾರಿ ವಿಸರ್ಜನಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಪಿ.ಓ.ಪಿ.ನಿರ್ಮಿತ ಗಣಪತಿ ವಿಗ್ರಹಗಳನ್ನು ಮಾರಾಟ ಅಥವಾ ಖರೀದಿ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಹಾನಗರ ಪಾಲಿಕೆಯ ದೂರವಾಣಿ ಸಂಖ್ಯೆ ೦೮೩೧-೨೪೦೫೩೩೭, ೨೪೦೫೩೧೬ ಗೆ ದೂರನ್ನು ಸಲ್ಲಿಸಬಹುದು.
ನಗರದ ಶ್ರೀ ಗಣೇಶ ಭಕ್ತರು ಈ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳುವಂತೆ ಬೆಳಗಾವಿ ಮಾಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟಂಬರ ೨ ರಂದು ಕಸಾಯಿಖಾನೆ ಅಂಗಡಿಗಳು ಬಂದ್

ಗಣೇಶ ಚತುರ್ಥಿ ನಿಮಿತ್ತ ಸೆಪ್ಟಂಬರ ೨ ರಂದು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವಂತ ಎಲ್ಲ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಕಡ್ಡಾಯವಾಗಿ ಬಂದ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸದರಿ ದಿನದಂದು ಕಸಾಯಿಖಾನೆ, ಮಾಂಸಾಹಾರಿ ಅಂಗಡಿ ಮಾಲೀಕರು ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button