Kannada NewsKarnataka News

ವಚನ ಸಾಹಿತ್ಯ – ಪ್ರಕೃತಿ ಪ್ರಕೋಪ ಹಾಗೂ ಪರಿಹಾರ

 

ವಚನ ಸಾಹಿತ್ಯ – ಪ್ರಕೃತಿ ಪ್ರಕೋಪ ಹಾಗೂ ಪರಿಹಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಪ್ರಕೃತಿ ಹಾಗೂ ಮನುಷ್ಯನ ನುಡುವೆ ಅವಿನಾಭಾವ ಸಂಬಂಧವಿದೆ. ಪ್ರಕೃತಿ ಮನುಷ್ಯನಿಗೆ ವರವಾಗಿ ಕೆಲವೊಮ್ಮೆ ಶಾಪವಾಗಿದ್ದು ಅಷ್ಟೇ ಸತ್ಯ. ಮನುಷ್ಯನ ಅತೀಯಾದ ದುರಾಸೆ ಇಂದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ ಎಂದು ಖ್ಯಾತ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.
ಅವರು ಬೆಳಗಾವಿ ಶಿವಬಸವನಗರದಲ್ಲಿ ಅಮವಾಸೆ ಕಾರ್ಯಕ್ರಮ ನಿಮಿತ್ತವಾಗಿ ಆಯೋಜಿಸಿದ್ದ ವಚನ ಸಾಹಿತ್ಯದಲ್ಲಿ ಪ್ರಕೃತಿ ಪ್ರಕೋಪ ಹಾಗೂ ಪರಿಹಾರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಕೃತಿಯ ಒಂದು ಭಾಗವಾಗಿರುವ ನಾವು ಪ್ರಕೃತಿಯ ನಡೆನುಡಿಯಲ್ಲಿ ಜೀವನವನ್ನು ನಡೆಸಬೇಕಾಗಿದೆ. ಪ್ರಕೃತಿಗೆ ನಾವು ಎಸಗುತ್ತಿರುವ ಕ್ರೌರ್ಯದ ಪ್ರತಿಫಲವಾಗಿಯೇ ಇಂದು ಹಲವಾರು ಪ್ರಾಕೃತಿಕ ಅವಘಡಗಳು ಜರುಗುತ್ತಿವೆ. ಹನ್ನೆರಡನೆಯ ಶತಮಾನದ ವಚನಕಾರರು ಪ್ರಕೃತಿಯನ್ನು ಪ್ರೀತಿಸಿದ ಹಾಗೂ ಆರಾಧಿಸಿದರು.

ಅಕ್ಕಮಹಾದೇವಿ ’ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದಡೆಯಂತಯ್ಯಾ, ಸಮುದ್ರದಾ ತಡೆಯಲೊಂದು ಮನೆಯ ಮಾಡಿ ನೆರೆತೊರೆಗೆ ಅಂಜಿದಡೆಯಂತಯ್ಯಾ’ ಎನ್ನುವ ಮೂಲಕ ಬದುಕಿಗೆ ಧೈರ್ಯದ ನಿಲುವುಗಳನ್ನು ಅಂದೇ ಹೇಳಿದ್ದಳು.

ಒಲೆಹತ್ತಿ ಉರಿದಡೆ ನಿಲ್ಲುವದಲ್ಲದೆ ಧರೆ ಹತ್ತಿಉರಿದಡೆ ನಿಲಲುಬಾರದು ಎಂದು ಅಣ್ಣ ಬಸವಣ್ಣ ಹೇಳುವಂತೆ ಪ್ರಕೃತಿ ಸಹಜವಾದ ಬದುಕು ನಮ್ಮದಾಗಬೇಕು. ಪರಿಸರ ಸಮತೋಲನ ಮಾತ್ರ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರಾಕೃತಿಕ ತೊಂದರೆಗಳಿಗೆ ದಾರಿ

ಸಂವಾದಕರಾಗಿ ಪಾಲ್ಗೊಂಡಿದ್ದ ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ ಮಾತನಾಡುತ್ತ, ಪ್ರಕೃತಿಯಲ್ಲಿ ಮನುಷ್ಯನು ಒಬ್ಬಜೀವಿ, ಆದರೆ ಇತರ ಜೀವಿಗಳಿಂದ ವಿಭಿನ್ನವಾಗಿ ನಡೆಯುತ್ತಿದ್ದಾನೆ. ವಿಜ್ಞಾನ ತಂತ್ರಜ್ಞಾನ ಬೆಳೆದಿದೆ. ಆದರೆ ಸದ್ಬಳಕೆ ಕೊರತೆ ಪ್ರಾಕೃತಿಕ ತೊಂದರೆಗಳಿಗೆ ದಾರಿಯಾಗುತ್ತಿದೆ. ಪ್ರಕೃತಿಗೆ ಯಾವುದು ಕಾಯುವುದು ಹಾಗೂ ಯಾವುದು ಕೊಲ್ಲುವುದು ಎಂಬ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ಶರಣರು ಪ್ರಕೃತಿ ಆರಾಧಾಕರಾಗಿ ಅದನ್ನು ಹತ್ತಿರದಿಂದ ಪ್ರೀತಿಸಿದರು ಎಂದು ಹೇಳುತ್ತಾ ಶರಣರ ದಸರಯ್ಯನವರ ವಚನವನ್ನು ವಿಶ್ಲೇಷಿಸಿದರು.
ಡಾ.ಮಹೇಶ ಗುರನಗೌಡರ ಮಾತನಾಡುತ್ತ, ಪ್ರಕೃತಿಯದು ಸಹಜವಾದ ಪ್ರಕ್ರಿಯೆ. ಮಳೆ, ಭೂಕಂಪಗಳು, ಸುನಾಮಿಗಳು ಪ್ರಕೃತಿಯಲ್ಲಿ ಜರುಗುವ ಸಹಜ ಪ್ರಕ್ರಿಯೆಗಳು. ಅವುಗಳ ವಿರುದ್ಧ ಅನಾದಿಕಾಲದಿಂದಲೂ ಮನುಷ್ಯ ಸಂಘರ್ಷವನ್ನು ಮಾಡುತ್ತಲೇ ಬಂದಿದ್ದಾನೆ. ಹನ್ನೊಂದನೆಯ ಶತಮಾನದ ಕವಿ ನಾಗಚಂದ್ರ ರಾಮಚಂದ್ರಚರಿತ ಪುರಾಣದಲ್ಲಿ ಹೇಳುವಂತೆ ’ಅಬ್ದಿಯಂ  ಓರ್ವ ಕಾಲವಶದಿಂದ ದಾಂಟದೇ’ ಎನ್ನುತ್ತಾನೆ.

ಸಮುದ್ರವು ಒಮ್ಮೊಮ್ಮೆ ತನ್ನ ಸೀಮೆಯನ್ನು ಮೀರಿ ಉಕ್ಕಿ ಬೋರ್ಗರೆಯುವುದುಂಟು. ಬಸವಣ್ಣನವರ ಕಾಲಜ್ಞಾನ ವಚನಗಳಲ್ಲಿಯೂ ’ಮಂಜಿನ ಮಳೆ ಆದೀತು’ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಪ್ರಕೃತಿಯ ಸಂಪೂರ್ಣ ಪರಿಜ್ಞಾನವನ್ನು ಹೊಂದಿದ್ದ ಶರಣರು ಚರಾಚರದಲ್ಲಿಯೂ ಭಗವಂತನ ಅಸ್ತಿತ್ವವನ್ನು ಕಂಡರು.

’ಜಗದಗಲ ಮುಗಿಲಗಲ ಮಿಗೆಯಗಲ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ, ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ’ ಎನ್ನುವ ಮೂಲಕ ಭಗವಂತನ ಇರುವನ್ನು ತೋರಿಸುತ್ತಾರೆ. ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ನಮ್ಮದಾದರೆ ಬರುವ ತೊಂದರೆಗಳನ್ನು ತಡೆಗಟ್ಟಬಹುದು. ಮರಗಳನ್ನು ಪೋಷಿಸಿ ಬೆಳೆಸುವ ಮೂಲಕ ಪ್ರಕೃತಿಯ ಇಂತಹ ನೂರಾರು ವಿಕೃತಿಗಳನ್ನು ತಪ್ಪಿಸಬಹುದೆಂದು ಹೇಳಿದರು.
ಪ್ರೊ. ಮಾರದ, ಪ್ರೊ.ವಿ.ಬಿ.ದೊಡಮನಿ,  ಭಾರತಿ ತೊರಗಲ್ಲ,  ಜ್ಯೋತಿ ಬಾದಾಮಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷರಾದ  ರತ್ನಪ್ರಭಾ ಬೆಲ್ಲದ ಮಾತನಾಡಿ, ಶರಣರ ವಚನಗಳಲ್ಲಿ ಎಲ್ಲಕ್ಕೂ ಪರಿಹಾರವನ್ನು ನೀಡಿದ್ದಾರೆ. ವಚನಗಳನ್ನು ಸೂಕ್ಷ್ಮವಾಗಿ ನೋಡಬೇಕು. ಪ್ರಕೃತಿಯೊಂದಿಗೆ ನಾವು ಮಾಡುತ್ತಿರುವ ತಪ್ಪುಗಳು ಪ್ರಕೃತಿ ನಮಗೆ ಪಾಠವನ್ನೇ ಕಲಿಸುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಡಾ.ಭಾರತಿ ಮಠದ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ವಿಜಯಲಕ್ಷ್ಮೀ ಪುಟ್ಟಿ, ಕಲ್ಯಾಣರಾವ್ ಮುಚಳಂಬಿ, ಪ್ರೊ.ಎ.ಬಿ.ಕೊರಬು, ಯ.ರು.ಪಾಟೀಲ, ಜ್ಯೋತಿ ಭಾವಿಕಟ್ಟಿ ಉಪಸ್ಥಿತರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button