ಹಿಂಡಲಗಾ ಜೈಲಿನಲ್ಲಿ ಕೈದಿಯಿಂದ ಮಾರಣಾಂತಿಕ ಹಲ್ಲೆ: ಜೈಲು ಸಿಬ್ಬಂದಿ ಆಸ್ಪತ್ರೆಗೆ ದಾಖಲು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ದೊಡ್ಡ ಕಾರಾಗೃಹಗಳಲ್ಲಿ ಒಂದಾಗಿರುವ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಯಮ ಪಾಲನೆ ಮಾಡು ಎಂದಿದ್ದಕ್ಕೆ ಕೈದಿಗಳಿಂದ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆದಿದ್ದು, ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಹಿಂಡಲಗಾ ಜೈಲಿನ ವಾರ್ಡನ್ ವಿನೋದ್ ಲೋಕಾಪುರ್ ಎಂಬವರ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ವಿನೋದ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಾಗೃದಲ್ಲಿ ಎಲ್ಲರೂ ಒಂದೆ ಕಾನೂನು ಪಾಲನೆ ಮಾಡಬೇಕು ಎಂದು ಹೇಳಿದ್ದಕ್ಕೆ ಹಾಸನದಿಂದ ಗಡಿಪಾರಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರುವ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಜೈಲಿನ ಭದ್ರತೆ ವಿಭಾಗದಲ್ಲಿದ್ದ ಕೈದಿ ರೋಹನ್ ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿ ಅನುಮತಿ ಬೇಕಾಗುತ್ತದೆ. ತಡವಾಗಿ ಅನುಮತಿ ನೀಡಿದರು ಎನ್ನುವ ಕಾರಣಕ್ಕೆ ಹೊರ ಬಂದು ವಿನೋದ್ ಮೇಲೆ ಹಲ್ಲೆ ಮಾಡಿ, ಕಾಲಿನಿಂದ ಒದ್ದು ಕೈಯಿಂದ ಹಿಗ್ಗಾಮಗ್ಗಾ ಹಲ್ಲೆ ಮಾಡಿದ್ದಾನೆ.
ತೀವ್ರವಾಗಿ ಗಾಯಗೊಂಡ ವಿನೋದ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೈದಿ ಹಲ್ಲೆ ಮಾಡಿದ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಂದ್ರೂ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಜೈಲಿನಲ್ಲಿ ಕೈದಿಗಳ ಗೂಂಡಾಗಿರಿಗೆ ಬೇಸತ್ತಿರುವ ಜೈಲಿನ ಸಿಬ್ಬಂದಿ ಕೆಲಸಕ್ಕೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆಯೂ ಸಿಬ್ಬಂದಿ ಮೇಲೆ ಅನೇಕ ಬಾರಿ ಹಲ್ಲೆಯಾದರೂ ಕ್ರಮ ಆಗಿಲ್ಲ. ಮೇಲಾಧಿಕಾರಿಗಳು ಈಗಲಾದರೂ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಸಿಬ್ಬಂದಿ ವಿನೋದ್ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ