ಮಾರಿಹಾಳ ಸಿಕ್ಕಿಕೊಂಡಿದ್ದ ಕಾಡು ಹೇಗಿದೆ ಗೊತ್ತಾ?

ಯಲ್ಲಾಪುರದ ಇಡಗುಂದಿ ಮಾರ್ಗದಿಂದ ಹೊರ ಬರಲಿದ್ದಾರೆ ಮಾರಿಹಾಳ

ಎಂ.ಕೆ.ಹೆಗಡೆ, ಬೆಳಗಾವಿ- ನಿನ್ನೆಯಿಂದ ಕೈಗಾ ಕಾಡಿನಲ್ಲಿ ನಾಪತ್ತೆಯಾಗಿದ್ದ ಕಾರವಾರದ ಡಿವೈಎಸ್ಪಿ ಶಂಕರ ಮಾರಿಹಾಳ ಪತ್ತೆಯಾಗಿ ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಅವರು ಇರುವ ಜಾಗ ಪತ್ತೆಯಾಗಿದ್ದು ಅವರನ್ನು ಕರೆತರುವ ಪ್ರಯತ್ನ ನಡೆದಿದೆ. ಅವರನ್ನು ಯಲ್ಲಾಪುರದ ಇಡಗುಂದಿ ಮಾರ್ಗದಿಂದ ಹೊರಗೆ ಕರೆದುಕೊಂಡು ಬರಲಾಗುತ್ತಿದೆ.

ಯಲ್ಲಾಪುರದಿಂದ ಕೈಗಾಕ್ಕೆ ಹೊರಟ ರಸ್ತೆಯಲ್ಲಿ ಸಿಗುವ ಕಟ್ಟಕಡೆಯ ಗ್ರಾಮ ಹರೂರು. ಅಲ್ಲಿಂದ ಮುಂದೆ ದಟ್ಟ ಕಾನನ. ಸುಮಾರು ಏಳು ಕಿ.ಮಿ ಕಾಡಲ್ಲೇ ನಡೆದರೆ ಎರಡು ಮೂರು ಸಿದ್ದಿಗಳ ಮನೆ ಸಿಗುತ್ತದೆಯಾದರೂ ಅಲ್ಲಿ ಗ್ರಾಮವೆನ್ನುವುದಾಗಲಿ ಅದಕ್ಕೆ ಅಧಿಕೃತ ಹೆಸರಾಗಲಿ ಇಲ್ಲ.

ಅಲ್ಲಿಂದ‌ ಮುಂದೆ ಕಾನನದಲ್ಲಿ ಸಾಗಿದರೆ ಕಾಡಿನ ದಾರಿ ಬಲ್ಲವರು ಮಾತ್ರ ದಾಟಿ ಬರುತ್ತಾರೆ. ಇದೇ ಕಾಡಲ್ಲಿ ಹುಲಿ ಮತ್ತು ಚಿರತೆಗಳ ಸಂಚಾರವಿದೆ. ಕೈಗಾ ಅಣುಸ್ಥಾವರ ಇರುವುದೂ ಇದೇ ಕಾಡಿನ ಅಂಚಿನಲ್ಲಿ. ಈಗ ಮಾರಿಹಾಳ ದಾರಿ ತಪ್ಪಿಸಿಕೊಂಡ ಪ್ರದೇಶದಿಂದ ಏರಿಯಲ್ ಡಿಸ್ಟನ್ಸ್ ಲೆಕ್ಕಹಾಕಿದರೆ ಅಣುಸ್ಥಾವರಕ್ಕೆ 5-6 ಕಿಮೀ. ಕೈಗಾ ಅಣುಸ್ಥಾವರ ಆದ ನಂತರ ಇಲ್ಲಿ ಓಡಾಟ ಹೆಚ್ಚಾಗಿದೆ. ಅಣುಸ್ಥಾವರ ಸಂಪರ್ಕಕ್ಕೆ 3 ರಸ್ತೆಗಳನ್ನು ಮಾಡಿಕೊಳ್ಳಲಾಗಿದೆ.

ಸುಂದರ, ಅಷ್ಟೇ ಅಪಾಯಕಾರಿ – ಈ ಅರಣ್ಯ ಬಹಳ ಸುಂದರವಾಗಿದೆ. ಕಾಡಿನ ಮಧ್ಯೆ ಹಲವಾರು ಜಲಪಾತಗಳೂ ಇವೆ. ದೇವಕಾರು ಜಲಪಾತ ಪ್ರಸಿದ್ಧವಾಗಿದ್ದು. ಅದನ್ನು ಕಾಡಿನ ಒಳಗಿಂದ ಹೋಗಿ ಇನ್ನೊಂದು ದಿಕ್ಕಿನಿಂದ ನೋಡುವುದು ಬಹಳ ಸುಂದರ.

ಬಾರೆ ಅರಣ್ಯದಿಂದ ಸಾಗಿದ ಪೊಲೀಸ್ ಅಧಿಕಾರಿಗಳು ದಾರಿ ತಪ್ಪಿ ಇದೀಗ ಅಂಕೋಲಾ ಹಿಲ್ಲೂರು ಕಾಡಿನ ಬಳಿ ಬಂದಿದ್ದಾರೆ. ಒಂದು ರಾತ್ರಿ ಕಾಡಲ್ಲೇ ಕಳೆದಿದ್ದಾರೆ.

ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ಭಟ್ಕಳದ ನಿಶ್ಚಲ‌ಕುಮಾರ ವಾಪಸ್ಸಾಗಿದ್ದು, ಬೆಂಗಳೂರಿನ ಹರಿಶ್ಚಂದ್ರ ಎನ್ನುವವರು ಡಿವೈಎಸ್ಪಿ ಜೊತೆಗಿದ್ದು ಅವರು ಹುಡುಕಾಟಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಡಿಜಿಪಿ, ಜಿಲ್ಲಾಧಿಕಾರಿ ಜೊತೆಗೂ ಶಂಕರ ಮಾರಿಹಾಳ್ ಮಾತನಾಡಿದ್ದಾರೆ.

ಮುನ್ನೆಚ್ಚರಿಕೆ ಅಗತ್ಯ

ಇಂತಹ ಕಾಡು ಪ್ರವೇಶಿಸಬೇಕಾದರೆ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ. ದಟ್ಟವಾದ ಕಾಡಾಗಿರುವುದರಿಂದ ಸ್ಥಳೀಯರ ನೆರವಿಲ್ಲದೆ ಹೋಗುವುದು ಅಪಾಯಕಾರಿ. ಕಾಡುಪ್ರಾಣಿಗಳ ಹಿಂಡೆ ಇಲ್ಲಿ ತಿರುಗುತ್ತಿರುತ್ತವೆ. ಅವುಗಳು ಸಂತಾನೋತ್ಪತ್ತಿ ಸಮಯದಲ್ಲಂತೂ ಹೋಗುವುದು ಡೇಂಜರ್. ಸ್ಥಳೀಯರಿಗೆ ಕಾಡಿನ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಕೊನೆಯ ಪಕ್ಷ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಯ ನೆರವನ್ನಾದರೂ ಪಡೆಯಬೇಕಾಗುತ್ತದೆ.

ಆದರೆ ಮಾರಿಹಾಳ ಗುಪ್ತ ತನಿಖೆಗೆ ಹೋಗಿದ್ದರಿಂದ ಯಾರಿಗೂ ಮಾಹಿತಿ ನೀಡಿರಲಿಕ್ಕಿಲ್ಲ. ಆದರೆ ಹಾಗೆ ಹೋಗುವುದು ಸುರಕ್ಷಿತವಲ್ಲ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಿಕೊಂಡು ಹೋದೆ ಅಪಾಯ ಎದುರಾಗುವುದನ್ನು ತಪ್ಪಿಸಬಹುದು.

ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಮಿಸ್ಸಿಂಗ್?

ದೂರವಾಣಿ ಸಂಪರ್ಕಕ್ಕೆ ಸಿಕ್ಕಿದ ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ

ಈ ಅರಣ್ಯ ಅತ್ಯಂತ ಸುಂದರ, ಅಷ್ಟೇ ಅಪಾಯಕಾರಿ. ಅರಣ್ಯ ಇಲಾಖೆಯ ಸಹಾಯವಿಲ್ಲದೆ ಯಾವುದೇ ಕಾರಣದಿಂದ ಕಾಡು ಪ್ರವೇಶಿಸುವುದು ಸರಿಯಲ್ಲ. ತನಿಖೆ ತಪ್ಪಲ್ಲ, ಆದರೆ ಅದಕ್ಕೆ ಸೂಕ್ತ ಮುನ್ನೆಚ್ಚರಿಕೆಯೂ ಅಗತ್ಯ.

-ಶಿವಾನಂದ ಕಳವೆ, ಅರಣ್ಯ-ಪರಿಸರ ಹಾಗೂ ಕೃಷಿ ತಜ್ಞ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button