Kannada NewsKarnataka NewsPolitics

ಕರ್ನಾಟಕದಲ್ಲಿ ಭಾರತ್‌ ಮಾತಾ ಕೀ ಜೈ ಎಂದರೆ ತಪ್ಪು:ಆರ್‌ ಅಶೋಕ

ಬಿಜೆಪಿ ಸದಾ ಕಾರ್ಯಕರ್ತರ ಜೊತೆ ನಿಲ್ಲಲಿದೆ

ಸಿಎಂ ಸಿದ್ದರಾಮಯ್ಯ 80 ಪರ್ಸೆಂಟ್‌ ಹಣ ನುಂಗಿದ್ದಾರೆ

ಪ್ರಗತಿವಾಹಿನಿ ಸುದ್ದಿ:  ಕರ್ನಾಟಕದಲ್ಲಿ ಭಾರತ್‌ ಮಾತಾ ಕೀ ಜೈ, ಜೈ ಶ್ರೀರಾಮ್‌ ಎಂದರೆ ತಪ್ಪು. ಕಾಂಗ್ರೆಸ್‌ ಸರ್ಕಾರ ಗೂಂಡಾಗಳ ಕೈಗೆ ರಾಜ್ಯವನ್ನು ಕೊಟ್ಟಿದ್ದು, ಇಂತಹ ಘೋಷಣೆ ಕೂಗಿದರೆ ಚೂರಿ ಹಾಕುತ್ತಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೊಳಿಯಾರಿನಲ್ಲಿ ಭಾರತ ಮಾತೆಗೆ ಜೈಕಾರ ಕೂಗಿದ್ದಕ್ಕಾಗಿ ಮತಾಂಧರಿಂದ ಹಲ್ಲೆಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿಯ ಗಾಯಾಳು ಕಾರ್ಯಕರ್ತರನ್ನು ಆರ್‌.ಅಶೋಕ ಭೇಟಿ ಮಾಡಿ ಧೈರ್ಯ ಹೇಳಿದರು. 

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳು ನಡೆಯದಂತೆ ಬಿಜೆಪಿ ಎಚ್ಚರ ವಹಿಸಲಿದೆ. ಕಾರ್ಯಕರ್ತರ ಜೊತೆಗೆ ನಾವೆಲ್ಲರೂ ಸದಾ ನಿಲ್ಲುತ್ತೇವೆ. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ಮಾಡಬೇಕು. ಹಾಗೆಯೇ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. 

ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರಾದ ಹರೀಶ್‌ ಮತ್ತು ನಂದಕುಮಾರ್‌ ಅವರಿಗೆ ಚೂರಿ ಇರಿಯಲಾಗಿದೆ. ಈ ತಾಲಿಬಾನ್‌ ಸರ್ಕಾರದಿಂದ ಪಾಕಿಸ್ತಾನಕ್ಕೆ ಜೈಕಾರದ ಘೋಷಣೆ ಕೇಳಿಬರುತ್ತಿದೆ. ಈ ಘಟನೆಯನ್ನು ಸದನದಲ್ಲೂ ಪ್ರಶ್ನಿಸಿ ಹೋರಾಟ ಮಾಡುತ್ತೇವೆ. ಸ್ಪೀಕರ್‌ ಮತ್ತು ಆರೋಗ್ಯ ಸಚಿವರು ಆಸ್ಪತ್ರೆ ಕಾರ್ಯಕ್ರಮಕ್ಕೆ ಬಂದಿದ್ದರೂ, ಗಾಯಾಳುಗಳನ್ನು ನೋಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ದೂರಿದರು. 

ಈ ಘಟನೆ ನಡೆದ ನಂತರ ಪಾಕಿಸ್ತಾನದ ಕುರಿತು ಹೇಳಿದ್ದಾರೆಂದು ಆರೋಪಿಸಿ ಅಮಾಯಕ ಹಿಂದೂ ಕಾರ್ಯಕರ್ತರ ವಿರುದ್ಧ ಮತ್ತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಾಗೆ ಇದ್ದಲ್ಲಿ ಅದರ ಕುರಿತಾದ ವೀಡಿಯೋ ಅಥವಾ ಪುರಾವೆ ಬಿಡುಗಡೆ ಮಾಡಲಿ. ಭಾರತ್‌ ಮಾತಾ ಜೈ ಎನ್ನುವುದು ಬಿಟ್ಟರೆ ಬೇರಾವುದೇ ಘೋಷಣೆ ಕೂಗಿಲ್ಲ. ಇನ್ನೊಂದು ಪ್ರಕರಣ ದಾಖಲಿಸಿ ಮುಖ್ಯವಾದ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಹಿಂದೂ ಕಾರ್ಯಕರ್ತರ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.  

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 20 ಪರ್ಸೆಂಟ್‌ ಹಣ ನುಂಗಿದ ಸಚಿವರ ರಾಜೀನಾಮೆ ಪಡೆಯಲಾಗಿದೆ. ಆದರೆ 80 ಪರ್ಸೆಂಟ್‌ ಹಣ ನುಂಗಿದ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು. ಇದಕ್ಕಾಗಿ ಸದನದಲ್ಲಿ ಆಗ್ರಹ ಮಾಡುತ್ತೇವೆ. ತೆಲಂಗಾಣದಲ್ಲೂ ಕಾಂಗ್ರೆಸ್‌ ಸರ್ಕಾರವಿದ್ದು, ಅಲ್ಲಿಗೂ ನಿಗಮದ ಹಣ ಸಂದಾಯವಾಗಿದೆ. ಆದ್ದರಿಂದ ಇದು ದೊಡ್ಡ ಭ್ರಷ್ಟಾಚಾರದ ಪ್ರಕರಣ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button