Latest

*ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಶೀಘ್ರ ಪ್ರವಾಸೋದ್ಯಮ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕರ್ನಾಟಕ ಸರ್ಕಾರ ಪ್ರವಾಸೋದ್ಯಮದ ಅಭಿವೃದ್ದಿಗೆ ಬದ್ದವಾಗಿದ್ದು, ಹೆಚ್ಚು ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಹಾಸಂಸ್ಥೆ (ಎಫ್ ಕೆಸಿಸಿಐ) ಮತ್ತು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ದಕ್ಷಿಣ ಭಾರತ ಉತ್ಸವ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು:

“ಪ್ರವಾಸೋದ್ಯಮ ನೀತಿಯಿಂದ ಹೆಚ್ಚು ಬಂಡವಾಳ ಹೂಡಿಕೆದಾರರನ್ನು ಸೆಳೆಯಬಹುದು. ಕೈಗಾರಿಕೋದ್ಯಮಿಗಳು ಬಲಗೊಂಡಷ್ಟು ಸರ್ಕಾರವು ಬಲಗೊಳ್ಳುತ್ತದೆ. ಏಕೆಂದರೆ ನಿಮ್ಮಿಂದ ಉದ್ಯೋಗ ಸೃಷ್ಟಿಯಾಗುತ್ತದೆ.”

Home add -Advt

“ಆಂಧ್ರ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣದಿಂದ ಬಂದಿರುವ ಪ್ರತಿನಿಧಿಗಳು ನಿಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಬೇಕು. ಕರ್ನಾಟಕ ರಾಜ್ಯ 300 ಕಿ.ಮೀ ಹೆಚ್ಚು ಕರಾವಳಿ ಪ್ರದೇಶ ಹೊಂದಿದೆ. ಈ ಮೂಲಕ ಸಾಗರೋತ್ತರ ಉದ್ದಿಮೆಯ ಅಭಿವೃದ್ಧಿಗೆ ನಿಮ್ಮ ಸಲಹೆ ನೀಡಿ”.

“ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವನಾಗಿ ನನ್ನ ಕಾರ್ಯಕ್ಷೇತ್ರಗಳ ಅಭಿವೃದ್ದಿಗೆ ಸಲಹೆ ಸೂಚನೆಗಳನ್ನು ನಾನು ನಿರೀಕ್ಷೆ ಮಾಡುತ್ತೇನೆ. ಬೆಂಗಳೂರು ಐಟಿ, ಬಿಟಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸದೃಢವಾಗಿದೆ. ಇದರ ಜೊತೆಗೆ ಬೆಂಗಳೂರು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾರ್ಯಸೂಚಿ ಸಿದ್ಧಪಡಿಸಬೇಕು”.

ಸ್ಕೈ ಡೆಕ್ ನಿರ್ಮಾಣಕ್ಕೆ ಶೀರ್ಘದಲ್ಲೇ ಟೆಂಡರ್

ಈ ಹಿಂದೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ಪ್ರವಾಸಿಗರನ್ನು ಸೆಳೆಯುತ್ತಿದ್ದವು. ಈಗ ಹೊಸ ಪೀಳಿಗೆಗೆ ಹೊಸತನ್ನು ನೀಡಬೇಕಿದೆ. ಈ ಕಾರಣಕ್ಕೆ ಸ್ಕೈ ಡೆಕ್ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದೇವೆ. ಪ್ರಸಿದ್ಧವಾದ ಅನೇಕ ನಗರಗಳಲ್ಲಿ ಎತ್ತರವಾದ ಗೋಪುರಗಳು ಆಕರ್ಷಣೀಯ ಕೇಂದ್ರಗಳಿವೆ. ಅದರಂತೆ ಬೆಂಗಳೂರಿನಲ್ಲೂ ಇರಲಿ ಎಂದು ಈ ಯೋಜನೆ ಮಾಡಲಾಗಿದೆ. ಮುಂದಿನ 8- 10 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು.
ಬೃಂದಾವನ ಉದ್ಯಾನವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುವುದು. ಇದಕ್ಕೆ ಕಳೆದ ಬಜೆಟ್ ಅಲ್ಲೂ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತದೆ ಎಂದು ಊರು ಕಟ್ಟಿದ ಕೆಂಪೇಗೌಡರಿಗೆ ಗೊತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬ್ರಾಂಡ್ ಬೆಂಗಳೂರು ಯೋಜನೆಯ ಅಡಿ ಕಸ, ನೀರು, ರಸ್ತೆ, ಮೂಲ ಸೌಕರ್ಯ, ಟ್ರಾಫಿಕ್ ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ.

ಜಿಎಸ್‌ ಟಿ ಪ್ರವಾಸೋದ್ಯಮವನ್ನು ಕೊಲ್ಲುತ್ತಿದೆ

ಶೇ.18 ಕ್ಕೂ ಹೆಚ್ಚಿನ ಜಿಎಸ್ ಟಿ ಪ್ರವಾಸೋದ್ಯಮವನ್ನು ಕೊಲ್ಲುತ್ತಿದೆ. ದಕ್ಷಿಣ ಭಾರತೀಯರಾದ ನಾವು ಇದರ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಬೇಕು. ಬ್ಯಾಂಕ್ ಬಡ್ಡಿ ದರ, ಇತರೇ ತೆರಿಗೆಗಳು ಸೇರಿ ಅರ್ಧಕ್ಕೂ ಹೆಚ್ಚು ಹಣ ಕಳೆದುಕೊಂಡರೆ ಹೂಡಿಕೆದಾರರು ಪ್ರವಾಸೋದ್ಯಮದ ಕಡೆ ಗಮನ ಹರಿಸುವುದಿಲ್ಲ. ಆದ ಕಾರಣ ಹೂಡಿಕದಾರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು.

ಪ್ರವಾಸೋಧ್ಯಮ ಕ್ಷೇತ್ರಕ್ಕೆ ಹೂಡಿಕೆ ಮಾಡುವವರು ತಮ್ಮ ಬೇಡಿಕೆಗಳನ್ನುಲಿಖಿತ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಿ. ನಿಮ್ಮ ಜೊತೆ ಸರ್ಕಾರ ಇರುತ್ತದೆ. ಹೂಡಿಕೆದಾರರಿಗೆ ಕೇವಲ ಸಹಾಯಧನ ನೀಡಿದರೆ ಸಾಲುವುದಿಲ್ಲ. ಉದಾಹರಣೆಗೆ ಕರಾವಳಿ ಪ್ರದೇಶದ ಹೋಟೆಲ್ ಗಳಿಗೆ 10 ವರ್ಷಗಳ ಕಾಲ ಆಸ್ತಿ ತೆರಿಗೆ ವಿನಾಯಿತಿ ನೀಡಿದರೆ ಒಂದಷ್ಟು ಬೆಂಬಲ ನೀಡಿದಂತೆ ಆಗುತ್ತದೆ. ಒಟ್ಟಿಗೆ ಸೇರಿ ಹೆಜ್ಜೆ ಗುರುತು ನಿರ್ಮಾಣ ಮಾಡೋಣ ಎಂದರು.

Related Articles

Back to top button