ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಕಂದಮ್ಮನ ಕತ್ತು ಸೀಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿಯಲ್ಲಿ ನಡೆದಿದೆ.
ಚಿಂತಾಮಣಿಯ ನಿಮ್ಮಕಾಯಲಹಳ್ಳಿಯ ಗ್ರಾಮದ ಸಿರೀಶ್ ಮಂಜುನಾಥ ಎಂಬುವವರ ಪುತ್ರ ಗೌತಮ್ (3) ಕೊಲೆಯಾದ ಕಂದಮ್ಮ. ಮಗುವಿನ ಸ್ವಂತ ಚಿಕ್ಕಪ್ಪ ರಂಜಿತ್ (30) ಕೊಲೆ ಆರೋಪಿ.
ಬುಧವಾರ ರಾತ್ರಿ (ಜೂನ್ 19) ಮಂಜುನಾಥ ಅವರ ಮನೆಗೆ ಬಂದ ಆರೋಪಿ ರಂಜಿತ್ ಊಟ ಮಾಡಿದ್ದಾನೆ. ಇದಾದ ಬಳಿಕ ಗೌತಮ್ ನನ್ನು ಕರೆದೊಯ್ದ ಚಿಕ್ಕಪ್ಪ ರಂಜಿತ್, ಮನೆಯ ಬಳಿ ಇರುವ ಪಾಳುಬಿದ್ದ ಹಳೆಯ ಮನೆಯೊಂದರಲ್ಲಿ ಮಗುವಿನ ಕತ್ತು ಸೀಳಿ ಅಮಾನವೀಯವಾಗಿ ಕೊಲೆಗೈದು ಪರಾರಿಯಾಗಿದ್ದಾನೆ.
ರಂಜಿತ್‌ನ ಈ ಹೀನ ಕೃತ್ಯದ ಹಿಂದಿನ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ವಿಚಾರ ತಿಳಿದ ಬಟ್ಲಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ