*ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ. ರೈತರ ಜಮೀನುಗಳಿಗೆ ಖಾತೆ ಮಾಡಿಕೊಡಲು ಒಂದು ರೂಪಾಯಿ ಲಂಚ ಮುಟ್ಟುವಂತಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಜೆ. ಬ್ಯಾಡರಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಖಾತೆ ಮಾಡಿಕೊಡಲು 15- 20 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ಅವರು ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು “ಲಂಚ ಪಡೆಯುವ ಪಿಡಿಓ, ಗ್ರಾಮ ಲೆಕ್ಕಿಗರು ಬೇರೆ ಜಾಗ ಹುಡುಕಿಕೊಳ್ಳಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗಬಾರದು” ಎಂದರು.
“ಮುಂದಿನ 15 ದಿನಗಳಲ್ಲಿ ಲಂಚ ಪಡೆಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬರಬಾರದು” ಎಂದು ಜಿಲ್ಲಾ ಪಂಚಾಯತಿ ಸಿಇಓ ದಿಗ್ವಿಜಯ ಬೋಡಕೆ ಅವರಿಗೆ ಖಡಕ್ ಸೂಚನೆ ನೀಡಿದರು.
ಶ್ರವಣಯ್ಯನ ತೋಪಿನ ಸುಶೀಲ, ರತ್ನಮ್ಮ, ರಾಜಮ್ಮ, ಚಿಕ್ಕತಾಯಮ್ಮ ಸೇರಿದಂತೆ 21 ಕ್ಕೂ ಹೆಚ್ಚು ಜನ ಕಳೆದ 10 ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ದೂರಿದಾಗ, “ಮುಂದಿನವಾರದೊಳಗೆ ಇವರಿಗೆ ಹಕ್ಕುಪತ್ರಗಳನ್ನು ನೀಡಬೇಕು” ಎಂದು ಹೇಳಿದರು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಮುಂದಿನವಾರ ಖುದ್ದಾಗಿ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.
ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ
“ಅರ್ಜಿ ಎಲ್ಲಿ, ಏನು ಸಮಸ್ಯೆ” ಎಂದು ಡಿಸಿಎಂ ಅವರ ಪ್ರಶ್ನೆಗೆ ಉತ್ತರಿಸಿದ ಚನ್ನಪಟ್ಟಣದ ನಿವಾಸಿ ಶಿವಗಂಗಮ್ಮ, “ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯಿಂದ ನನಗೆ ತುಂಬಾ ಒಳ್ಳೆಯದಾಗಿದೆ, ನನ್ನದು ಏನೂ ಸಮಸ್ಯೆ ಇಲ್ಲ. ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ” ಎಂದಾಗ ಡಿಸಿಎಂ ನಕ್ಕು ಹಿರಿಯ ಜೀವದ ಆಶೀರ್ವಾದ ಪಡೆದು “ನಿನ್ನಂತೆ ಎಲ್ಲರ ಸಮಸ್ಯೆಯು ಇಲ್ಲದಂತೆ ಆಗಲಿ ಕಣವ್ವ” ಎಂದರು.
ಹುಣಸನಹಳ್ಳಿಯ ಬಿಸಿಲಮ್ಮ ದೇವಿ ದೇವಸ್ಥಾನದ ಮಾಳಿಗೆ ಸೋರುತ್ತಿದೆ, ಸೇವಾ ಸಮಿತಿಯನ್ನು ಅಭಿವೃದ್ಧಿ ಸಮಿತಿಯನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಗೆ, ” ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ಕಟ್ಟಿರುವ ತೆಂಗಿನ ನಾರಿನ ಕಾರ್ಖಾನೆಗೆ ಪರ್ಯಾಯ ಜಾಗ ಕಲ್ಪಿಸಿ ಅಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಹಾಗೂ ನಿಮ್ಮ ಎಲ್ಲಾ ಮನವಿಗಳಿಗೆ ಪರಿಹಾರ ನೀಡಲಾಗುವುದು” ಎಂದು ಭರವಸೆ ನೀಡಿದರು.
ಕಾಲಿನ ಸ್ವಾಧೀನ ಕಳೆದುಕೊಂಡಿರುವ ಕರಲಹಳ್ಳಿಯ ವಿಕಲಚೇತನ ಪುಟ್ಟರಾಜು ಅವರಿಗೆ “ಸ್ವಂತ ಉದ್ಯೋಗ ಮಾಡಲು 1 ಲಕ್ಷ ಹಣ ಬರುವಂತೆ ಮಾಡುತ್ತೇನೆ. ಜಿಲ್ಲಾ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿಯಾಗು, ಅವರು ನನ್ನ ಪರವಾಗಿ ನಿನಗೆ ಸಹಾಯ ಮಾಡುತ್ತಾರೆ” ಎಂದರು. ಪುಟ್ಟರಾಜುವಿಗೆ ಸಹಾಯ ಮಾಡಬೇಕು ಎಂದು ಜಿಲ್ಲಾ ನಾಯಕರಿಗೆ ಸೂಚನೆ ನೀಡಿದರು.
ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ
ಸರ್ಕಾರಿ ಕೆಲಸ ಕೊಡಿಸಿ ಎಂಬ ವೈ.ಟಿ. ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ಮನವಿಗೆ, “ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ. ಏನಾದರೂ ಸ್ವಯಂ ಉದ್ಯೋಗ ಮಾಡು” ಎಂದು ಹೇಳಿದರು.
ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಕರೆ ಮಾಡಿ ಪರಿಹಾರ ಸೂಚನೆ
ಕೊಂಡಾಪುರ ಕೃಷ್ಣ, ಜಮೀನು ನನ್ನ ಹೆಸರಿಗೆ ಆಗಿ 5 ವರ್ಷಗಳು ಕಳೆದರೂ ಖಾತೆ ನೀಡುತ್ತಿಲ್ಲ ಎಂದು ಹೇಳಿದಾಗ, ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಡಿಸಿಎಂ ಸೂಚನೆ ಮೇರೆಗೆ ತಕ್ಷಣ ಕಂದಾಯ ಅಧಿಕಾರಿಗೆ ಕರೆ ಮಾಡಿ ಕೂಡಲೇ ದಾಖಲೆ ನೀಡುವಂತೆ ತಿಳಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಅಂಗನವಾಡಿ ಕಾರ್ಯಕಾರ್ಯಕರ್ತೆಯರು ಎಲ್ ಕೆಜಿ, ಯುಕೆಜಿ ಶಿಕ್ಷಕರಾಗಿ ನಮ್ಮನ್ನೇ ಮುಂದುವರೆಸಿ ಎಂದು ಮನವಿ ಮಾಡಿದಾಗ, “ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು” ಎಂದರು.
ಅಂಬಾಡಳ್ಳಿಯ ರೇಣುಕಮ್ಮ, ಮಾದಾಪುರ ಗ್ರಾಮದ ಚಿಕ್ಕಮ್ಮ ಒಂದು ವರ್ಷ ಕಳೆದರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾಗ “ಮುಂದಿನ ತಿಂಗಳು ಬರುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಪೋಡಿ, ಪಹಣಿ, ಬಗರ್ ಹುಕುಂ, ವಸತಿ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮನವಿಗಳು ಸಲ್ಲಿಕೆಯಾದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ