Belagavi NewsBelgaum NewsKannada NewsKarnataka NewsPolitics

ಶಾಸಕ ಮಹೇಂದ್ರ ತಮ್ಮಣ್ಣವರ್ ಗೆ ಸತೀಶ್ ಜಾರಕಿಹೊಳಿ ವಾರ್ನಿಂಗ್

ಪ್ರಗತಿವಾಹಿನಿ ಸುದ್ದಿ, ಹಾರೂಗೇರಿ : ನಾನು ಹೆಂಡತಿ, ಮಕ್ಕಳ ಮಾತನ್ನೇ ಕೇಳುವವನಲ್ಲ. ಇನ್ನು ಇವರದ್ದು ಕೇಳುತ್ತೇನಾ? ನೀವಿನ್ನೂ ಎಲ್ಎಲ್ಆರ್ ನಲ್ಲಿ ಗಾಡಿ ಓಡಿಸ್ತಾ ಇದ್ದೀರಿ. ಈಗಲೇ ಬಿದ್ದರೆ ಮುಂದೆ ಲೈಸನ್ಸ್ ಸಿಗೋದು ಕಷ್ಟ. ಹಾಗಾಗಿ ಹುಷಾರಾಗಿರಿ -ಇದು ಲೋಕೋಪಯಾಗಿ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಅವರಿಗೆ ವಾರ್ನಿಂಗ್ ನೀಡಿದ ರೀತಿ ಇದು.

ಹಾರೂಗೇರಿ ಪಟ್ಟಣದಲ್ಲಿ ನೂತನ ಸಂಸದರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹೇಂದ್ರ ತಮ್ಮಣ್ಣವರ್ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎನ್ನುವ ತಮ್ಮ ಈ ಹಿಂದಿನ ಆರೋಪವನ್ನು ಸಮರ್ಥಿಸಿಕೊಂಡು ತಮ್ಮಣ್ಣವರ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಸ್ವ ಪಕ್ಷದರೇ ಕೆಲಸ ಮಾಡಿದ್ದರು, ನಾನು ಮಾಜಿ ಶಾಸಕ ಶಾಮ್ ಘಾಟಗೆ ಮಾತು ಕೇಳುತ್ತೇನೆ ಎಂದು ತಮ್ಮಣ್ಣವರ್ ಆರೋಪ ಮಾಡುತ್ತಾರೆ. ನಾನು ನನ್ನ ಹೆಂಡತಿ, ಮಕ್ಕಳ ಮಾತೂ ಕೇಳಲ್ಲ. ಕಳೆದ ಬಾರಿ ನಿಮಗೆ ಬಿದ್ದ ಮತಗಳು ಕೂಡ ಬಿಜೆಪಿಗೆ ಹೋಗಿವೆ. ಸುಮ್ಮನೆ ಆರೋಪ ಮಾಡಲು ನಾನು ಖಾಲಿ ಇಲ್ಲ. ಯಾರು ಕೆಲಸ ಮಾಡಿಲ್ಲ ಅವರ ವಿರುದ್ಧ ಆರೋಪ ಮಾಡಿದ್ದೇನೆ. ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗುತ್ತಿತ್ತು. ರಾಜಕೀಯದಲ್ಲಿ ಹೊಂದಾಣಿಕೆ ಇರಬೇಕು, ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೇದು ಎಂದರು

ನಮ್ಮನ್ನ ಸೋಲಿಸಲು ಎಲ್ಲಿಂದ ಡೈರೆಕ್ಷನ್ ಬಂದಿದೆ ಎಂದು ನನಗೆ ಗೊತ್ತಿತ್ತು. ಘಾಟಗೆ ಹಾಗೂ ನೀವು ಕುಸ್ತಿ ಹಿಡಿರಿ. ಈಗ ಚುನಾವಣೆಗೆ ನಿಂತಿದ್ದು ನಾವು. ನಮ್ಮ ಚುನಾವಣೆಗೆ ಯಾಕೆ ತೊಂದ್ರೆ ಮಾಡಿದ್ರಿ, ನಿಮಗೆ ಟಿಕೆಟ್ ಕೊಡಿಸಿ ಸಪೋರ್ಟ್ ಮಾಡಿದ್ದೇವು, ಆದರೆ, ನೀವ್ಯಾಕೆ ಹೀಗೆ ಮಾಡಿದ್ರಿ. ಕೇವಲ ಮಹೇಂದ್ರ ತಮ್ಮಣ್ಣವರ ಮಾತ್ರ ಅಲ್ಲ, ನಮ್ಮ ವಿರುದ್ದ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ. ನಾವು ಇದನ್ನ ಗಂಭೀರವಾಗಿ ಪರಿಗಣಿಸಲ್ಲ. ಆದರೆ, ಬೇಟೆ ಸಿಗೋದನ್ನ ಕಾಯುತ್ತಾ ಕೂತಿರುತ್ತೇವೆ. ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ. ಜನ ಯಾರನ್ನ ಬೇಕಾದ್ರೂ ಗೆಲ್ಲಿಸ್ತಾರೆ, ಯಾರನ್ನ ಬೇಕಾದ್ರೂ ಸೋಲಿಸ್ತಾರೆ. ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ರು. ಆದರೆ, ಒಂದೇ ಚುನಾವಣೆಯಲ್ಲಿ ಜನ ಎಲ್ಲಾ ಸಾಧ್ಯ ಇದೆ ಎನ್ನುವುದನ್ನು ತೋರಿಸಿದರು. ಯಾರನ್ನಾದ್ರೂ ಗೆಲ್ಲಿಸ್ತೀವಿ ಸೋಲಿಸ್ತೀವಿ ಎಂದು ತೋರಿಸಿಕೊಟ್ಟಿದ್ದಾರೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button