Politics

*ಮುಡಾ ಅಕ್ರಮ ಪ್ರಕರಣ; ಪತ್ನಿಗೆ ಸಿಕ್ಕ ಸೈಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧೀಕಾರ-ಮುಡಾದಲ್ಲಿ ನಿವೇಶನ ಹಂಚಿಕೆ ವಿಚಾರವಾಗಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ 50:50 ಅನುಪಾತದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೂ ಸೈಟ್ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ನಮ್ಮ ಕಾಲದಲ್ಲಿ ಆಗಿಲ್ಲ. ಬಿಜೆಪಿಯವರ ಕಾಲದಲ್ಲಿ ನಡೆದಿರುವುದು ಎಂದು ಹೇಳಿದ್ದಾರೆ.

ಇನ್ನು 1 ಎಕರೆ 15 ಗುಂಟೆ ಜಮೀನು ನನ್ನ ಪತ್ನಿ ಹೆಸರಲ್ಲಿದೆ. ಈ ಜಮೀನನ್ನು ಬಾಮೈದ ಅರಿಶಿನ-ಕುಂಕುಮ ರೀತಿಯಲ್ಲಿ ಉಡುಗೊರೆಯಾಗಿ ಕೊಟ್ಟಿದ್ದು. ನಾನು ಅಧಿಕಾರದಲ್ಲಿದ್ದಾಗ ಯಾವುದೇ ಜಮೀನು ಖರೀದಿ ಮಾಡಿಲ್ಲ ಎಂದರು.

ಈ ಹಿಂದೆ ಮುಡಾ ಕಾನೂನು ಪ್ರಕಾರ 50:50 ಅನುಪಾತದಲ್ಲಿ ಜಮೀನು ಕೊಡುವುದಾಗಿ ಹೇಳಿತ್ತು. ಬಳಿಕ ಮುಡಾದವರು ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಇದರಿಂದ ನಮಗೆ ಜಮೀನು ಇಲ್ಲದಂತಾಯ್ತು. ಆಗ ನಿಮಗೆ 50:50 ಅನುಪಾತದಲ್ಲಿ ಜಮೀನು ನೀಡುತ್ತೇವೆ ಎಂದು ಮೂಡಾದವರು ಹೇಳಿದರು. ಅದರಂತೆ ಬೇರೆ ಕಡೆ ಜಮೀನು ಕೊಟ್ಟರು. ಇದರಲ್ಲಿ ತಪ್ಪಿಲ್ಲವಲ್ಲ? ಕಾನೂನು ಪ್ರಕಾರವೇ ಜಮೀನು ಹಂಚಿದ್ದಾರೆ ಎಂದು ಸ್ಪಷ್ಟಪಡಿಸಿದರು.

50: 50 ಅನುಪಾತದಲ್ಲಿ ಕೊಡಬೇಕು ಎಂದು ಕಾನೂನು ಮಾಡಿದ್ದು ಬಿಜೆಪಿಯವರು. ನಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳದೇ ಮೂಡಾದವರು ನಿವೇಶನಗಳನ್ನು ಮಾಡಿ ಹಂಚಿದ್ದರು. ಹಂಚಿದ ಮೇಲೆ ನಮಗೆ ಕಾನೂನುಬದ್ಧವಾಗಿ ನಿವೇಶನ ಕೊಡಬೇಕು. ಅದರಂತೆ 50:50 ಕೊಡಲು ಒಪ್ಪಿದರು ಎಂದರು.

ಸರ್ಕಾರದ ನಿಯಮಾವಳಿ, ಆದೇಶದ ಪ್ರಕಾರ ಕೊಡಿ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಿಕೊಂಡಿದ್ದೆವು. ಆಗ ಅವರು ಬೇರೆ ಬೇರೆ ಸ್ಥಳಗಳಲ್ಲಿ ಸಮಾನಾಂತರ ನಿವೇಶನಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button