ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿತವುಂಟಾಗುತ್ತಿದೆ.
ಹೊನ್ನಾವರದ ಬಳಿ ಗುಡ್ಡ ಕುಸಿತವುಂಟಾಗಿ ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಘಟನೆ ನಡೆದಿರುವ ಬೆನ್ನಲ್ಲೇ ಕುಮಟಾ ಬಳಿ ರಸ್ತೆ ಮಾರ್ಗವೂ ಸಂಪೂರ್ಣ ಬಂದ್ ಆಗಿದೆ.
ಭಾರಿ ಮಳೆಯಿಂದಾಗಿ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಕುಮಟಾದ ಕತಗಾಲ ಬಳಿ ಅಘನಾಶಿನಿ ನದಿ ಪ್ರವಾಹಕ್ಕೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆಯ ಮೇಲೆ ನದಿ ನೀರು ಹರಿಯುತ್ತಿದೆ.
ರಸ್ತೆಗಳು ನದಿಯಂತಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ನದಿ ನೀರಿನ ಮಟ್ಟ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ರಸ್ತೆ ಮಾರ್ಗ ಬಂದ್ ಆಗಿರುವುದರಿಂದ ಊರುಗಳಿಗೆ ತೆರಳಲು ವಾಹನ ಸವಾರರು ಪರದಾಡುತ್ತಿದ್ದಾರೆ. ಘಟ್ಟದ ಮೇಲೆ ಮತ್ತು ಕಳೆಗಿನ ಊರುಗಳಿಗೆ ಕೊಂಡಿಯಾಗಿರುವ ಕತಗಾಲ ರಸ್ತೆ ಜಲಾವೃತವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ