Politics

*ಕೇಂದ್ರ ಸಚಿವ HDKಗೆ ಬಹಿರಂಗ ಸವಾಲು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕುಮಾರಸ್ವಾಮಿ ಜೀವನ ಬರೀ ಹಿಟ್ ಅಂಡ್ ರನ್ ಮಾಡುವುದೇ ಆಗಿದೆ. ಅವರು ಬೀದಿಯಲ್ಲಿ ಹಿಟ್ ಅಂಡ್ ರನ್ ಮಾಡುವ ಬದಲು ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ, ಇಲ್ಲವೇ ಅವರ ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಲಿ ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿಗೆ ಸವಾಲೆಸೆದಿದ್ದಾರೆ.

ಕಸ ವಿಲೇವಾರಿ ಟೆಂಡರ್ ನಲ್ಲಿ 15 ಸಾವಿರ ಕೋಟಿ ಲಂಚ ಪಡೆಯಲಾಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಸೋಮವಾರ ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಕುಮಾರಸ್ವಾಮಿ ಹತಾಶೆಯಲ್ಲಿದ್ದಾರೆ. ಅವರು ಬಹಿರಂಗ ಚರ್ಚೆಗೆ ಬರಲಿ. ಡಿ.ಕೆ. ಶಿವಕುಮಾರ್ ಅವರಂತೆ ಹಿಟ್ ಅಂಡ್ ರನ್ ಮಾಡುವುದಿಲ್ಲ. ಕಸದ ಲಾರಿ ಹೊಡೆಯುತ್ತಿದ್ದವರು ಅವರು. ಅವರ ಸಹೋದರ ಹಾಗೂ ಅವರ ಪಕ್ಷದ ಸದಸ್ಯರಿಗೆ ದಾಖಲೆ ಕೊಟ್ಟು ಸದನದಲ್ಲಿ ಚರ್ಚೆ ಮಾಡಲಿ. ಕಿಂಗ್ ಆಫ್ ಕರಪ್ಶನ್ ಎಂದು ಜನ ನನ್ನನ್ನಾಗಲಿ, ನನ್ನ ಕುಟುಂಬದವರನ್ನು ಕರೆದಿಲ್ಲ. ಆ ರೀತಿ ಯಾರನ್ನು ಕರೆದಿದ್ದಾರೆ ಎಂದು ಚರ್ಚೆಗೆ ಬರಲಿ ತಿಳಿಸುತ್ತೇನೆ. ಇವರು ಚರ್ಚೆಗೆ ಬರಲಿ. ನಾನು ಅವರ ಚರಿತ್ರೆ ತೆಗೆಯುತ್ತೇನೆ. ಎಲ್ಲವೂ ದಾಖಲೆಯಲ್ಲಿ ಉಳಿಯಲಿ” ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಹಗರಣಗಳ ಪಿತಾಮಹ:

ಇಂದಿನಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಹಗರಣಗಳ ಬಗ್ಗೆ ಬಿಜೆಪಿ ಸದನದ ಹೊರಗೆ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರು ಸದನದ ಹೊರಗೆ ಯಾಕೆ ಹೋರಾಟ ಮಾಡುತ್ತಿದ್ದಾರೆ? ಸದನದ ಒಳಗೆ ಹೋರಾಟ ಮಾಡಲಿ. ಅವರು ಏನು ಹೇಳಬೇಕೋ ಸದನದ ಒಳಗೆ ಹೇಳಲಿ. ನಾವು ಏನು ಉತ್ತರ ಕೊಡಬೇಕೋ ಕೊಡುತ್ತೇವೆ. ನಮಗೂ ಅವರ ಬಗ್ಗೆ ಗೊತ್ತಿದೆ. ಎಲ್ಲವನ್ನೂ ಒಂದೊಂದಾಗಿ ಬಿಚ್ಚಿಡುತ್ತೇವೆ” ಎಂದು ಶಿವಕುಮಾರ್ ಅವರು ತಿಳಿಸಿದರು.

ಈ ವಿಚಾರವಾಗಿ ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು “ಮುಡಾ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಬಿಜೆಪಿ ಭ್ರಷ್ಟಾಚಾರದ ತಂದೆ. ಅವರ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರದ ಸರಮಾಲೆಯೇ ನಡೆದಿದೆ. ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಆಡಳಿತ ಶುದ್ಧೀಕರಣ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ” ಎಂದು ತಿಳಿಸಿದರು.

” ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದು ನೋಡಿ ಮೈ ಪರಿಚಿಕೊಳ್ಳುತ್ತಿದ್ದಾರೆ. ಅವರುಗಳು ಹಣ್ಣನ್ನು ತಿಂದು ಸಿಪ್ಪೆಯನ್ನು ನಮ್ಮ ಮೇಲೆ ಹಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನು ಬೇಕಾದರು ಹೇಳಿಕೊಳ್ಳಲಿ. ಪಾರ್ಲಿಮೆಂಟಿನಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಡಾ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವ ಬದಲು ನ್ಯಾಯಾಂಗ ತನಿಖೆ ನಡೆಸುತ್ತಿರುವುದು ಕಣ್ಣೊರೆಸುವ ತಂತ್ರ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಪ್ರತಿಪಕ್ಷಗಳು ಹೇಳಿದಂತೆ ಕೇಳಲಾಗುತ್ತದೆಯೇ? ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ನಾವು ಈ ರಾಜ್ಯಕ್ಕೆ ಏನು ಒಳ್ಳೆಯದನ್ನು ಮಾಡಬೇಕೊ ಅದನ್ನು ಮಾಡುತ್ತೇವೆ” ಎಂದರು.

ಕೆ ಎಸ್ ಆರ್ ಟಿಸಿ ಬಸ್ ಪ್ರಯಾಣದರ ಏರಿಕೆ ವಿಚಾರವಾಗಿ ಕೇಳಿದಾಗ ” ಇದಕ್ಕೆ ಸಾರಿಗೆ ಸಚಿವರು ಉತ್ತರ ನೀಡುತ್ತಾರೆ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button