Belagavi NewsBelgaum NewsKannada NewsKarnataka News

*ಮತ್ತೆ ರಂಗಭೂಮಿಯ ಸೆಳೆತ ಹೆಚ್ಚಾಗಿದೆ, ಯಾವ ಪಾತ್ರ ಸಿಕ್ಕರೂ ಅಭಿನಯಿಸುವೆ : ರವಿ ಭಜಂತ್ರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನ್ನನ್ನು ಇಂದು ಹಾಸ್ಯ ಭಾಷಣಕಾರನೆಂದು ಜನರು ಗುರುತಿಸುತ್ತಿದ್ದರೂ ನಾನು ಮೂಲತಃ ರಂಗಭೂಮಿ ಕಲಾವಿದ. ಆದರೆ ನಾನು ಸಾಂಸ್ಕೃತಿಕ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಒಬ್ಬ ನಟನಾಗಿ. ಮುಂದೆ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶರ ಒಡನಾಟದಿಂದ ಹಾಸ್ಯ ಭಾಷಣದತ್ತ ತಿರುಗಿದೆ. ಇಂದು ರಂಗಸಂಪದದ ಕಲಾವಿದರ ಅನುಭವಗಳನ್ನು ಕೇಳಿದಾಗ ಮತ್ತೆ ರಂಗಭೂಮಿಯ ಸೆಳೆತ ಹೆಚ್ಚಾಗಿದೆ. ನನಗೆ ಯಾವುದೇ ಪಾತ್ರ ಸಿಕ್ಕರೂ ಖಂಡಿತವಾಗಿ ಅಭಿನಯಿಸುವೆ ಎಂದು ಖ್ಯಾತ ನಗೆಮಾತುಗಾರ ರವಿ ಭಜಂತ್ರಿ ಹೇಳಿದರು.

ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕಲಾವಿದರ ಸಂಗಮ ಮತ್ತು ಪರಿಮಳದವರು ನಾಟಕದಲ್ಲಿ ಅಭಿನಯಿಸಿದ ಕಲಾವಿದರಿಗೆ ನೆನಪಿನ ಕಾಣಿಕೆಯನ್ನು  ನೀಡುವ ಕಾರ್ಯಕ್ರಮವನ್ನು ನಗರದ ರಂಗಸಂಪದದವರು  ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವಿ ಭಜಂತ್ರಿಯವರು ಮೇಲಿನಂತೆ  ಅಭಿಪ್ರಾಯ ಪಟ್ಟರು.

ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿಯವರು ಮಾತನಾಡಿ ಪೌರಾಣಿಕ, ಐತಿಹಾಸಿಕ, ಹಾಸ್ಯ, ಗಂಭೀರ ಹೀಗೆ ವೈವಿಧ್ಯಮಯ ನಾಟಕಗಳನ್ನು ರಂಗಸಂಪದ ನೀಡುತ್ತಾ ಬಂದಿದೆ. ಇನ್ನು ಮುಂದೆ ಯಶವಂತ ಸರದೇಶಪಾಂಡೆಯವರು ಅನುವಾದಿಸಿರುವ ಮೂಲ ಮರಾಠಿ ‘ಪ್ರೀತಿಯ ಅಜ್ಜ’ ನಾಟಕ, ಬಿ. ಎ. ಸನದಿಯವರ ‘ನೀಲಾಂಬಿಕಾ’, ಏಕಪಾತ್ರಾಭಿನಯ, ‘ಕಿಲಾಡಿ ಅತ್ತೆ’ ಮರಾಠಿ ಅನುವಾದಿತ ಹಾಸ್ಯ ನಾಟಕ ಹೀಗೆ ಹಲವಾರು ನಾಟಕಗಳನ್ನು ನೀಡುವವರಿದ್ದೇವೆ ಎಂದು ತಮ್ಮ ಮುಂದಿನ ಯೋಜನೆ ಕುರಿತು ಹೇಳಿದರು.

ಪರಿಮಳದವರು ನಾಟಕದ ಕಲಾವಿದರಾದ ಸ್ನೇಹಾ ಜೋಶಿ, ಸೀಮಾ ಕುಲಕರ್ಣಿ, ಡಾ. ನಿರ್ಮಲಾ ಬಟ್ಟಲ, ಪವಿತ್ರಾ  ರೇವಣಕರ, ವಿನೋದ ಸಪ್ಪಣ್ಣವರ, ಯೋಗೇಶ ದೇಶಪಾಂಡೆ, ಪ್ರಸಾದ ಕಾರಜೋಳ, ಆರ್. ವಿ. ಭಟ್ ನಾಟಕದ ಅನುಭವಗಳನ್ನು ಹಂಚಿಕೊಳ್ಳುತ್ತ. ರಂಗಸಂಪದ ನಮ್ಮ ಒಂದು ಪರಿವಾರವಾಗಿಬಿಟ್ಟಿದೆ. ನಮಗೊಂದು ವೇದಿಕೆ ನೀಡಿ ಕಲಾವಿದರನ್ನಾಗಿ ನಿರ್ಮಿಸಿದ ಶ್ರೇಯಸ್ಸು ರಂಗ ಸಂಪದದಕ್ಕೆ ಅದರಲ್ಲಿಯೂ ವಿಶೇಷವಾಗಿ ಡಾ. ಅರವಿಂದ ಕುಲಕರ್ಣಿ ಮತ್ತು ಶ್ರೀಪತಿ ಮಂಜನಬೈಲ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮಾಧ್ವಾ ಆಯಿ, ರಾಮಚಂದ್ರ ಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು. ಪೂರ್ವಿ, ಕು. ಸ್ನೇಹಾ ಪ್ರಾರ್ಥಿಸಿದರು. ಪ್ರಸಾದ ಕಾರಜೋಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಗೇಶ ದೇಶಪಾಂಡೆ ವಂದಿಸಿದರು. ಅಶೋಕ ಕುಲಕರ್ಣಿ, ಚಿದಾನಂದ ವಾಳಕೆ, ಪದ್ಮಾ ಕುಲಕರ್ಣಿ, ವೀಣಾ ಹೆಗಡೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button