ವಿಶ್ವಕರ್ಮ ಜಯಂತಿ ಸೆ.೧೭ ರಂದು -ವಾಜಪೇಯಿ ನಗರ ವಸತಿ ಯೋಜನೆಯಡಿ ಅರ್ಜಿ ಆಹ್ವಾನ –ಸಹಾಯಕ ಕೃಷಿ ಅಧಿಕಾರಿಗಳಿಂದ ಸಾಂಕೇತಿಕ ಧರಣಿ -ಸಹಾಯ ಧನ: ಫಲಾನುಭವಿಗಳಿಂದ ಅರ್ಜಿ ಆಹ್ವಾನ- ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನ -ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಉದ್ಘಾಟನೆ –ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸಗಳ ಪುನರ್ವಸತಿಗೆ ಅರ್ಜಿ ಅಹ್ವಾನ -ದಸರಾ ಉತ್ಸವ: ಪುಸ್ತಕ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ – ಬಾಲ ಕಲ್ಯಾಣ ಕೇಂದ್ರದಿಂದ ಬಾಲಕರು ನಾಪತ್ತೆ -ಬೆಳಗಾವಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ –ಕಾಂಡಕೊರಕ ಹುಳು ನಿಯಂತ್ರಣಕ್ಕೆ ಕ್ರಮಗಳು – ಅರ್ಜಿ ಹಾಗೂ ನಾಮನಿರ್ದೇಶನಗಳ ಆಹ್ವಾನ –ಉದ್ಯಾನವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ -ಸೆಪ್ಟೆಂಬರ ೧೯ ರಂದು ಒಂದು ದಿನದ ಕಾರ್ಯಾಗಾರ
ವಿಶ್ವಕರ್ಮ ಜಯಂತಿ ಸೆ.೧೭ ರಂದು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭಾಭವನದಲ್ಲಿ ೪ನೇ ವರ್ಷದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬೂದೆಪ್ಪ ಎಚ್.ಬಿ ಅವರು ತಿಳಿಸಿದರು.
ಸಮಾಜದ ಎಲ್ಲ ಮುಖಂಡರು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬೂದೆಪ್ಪ ಎಚ್.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಜಪೇಯಿ ನಗರ ವಸತಿ ಯೋಜನೆಯಡಿ ಅರ್ಜಿ ಆಹ್ವಾನ
ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯಿತಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ಗುರಿ ನೀಡಲಾಗಿದ್ದು, ಚನ್ನಮ್ಮ ಕಿತ್ತೂರು ಪಂಚಾಯತ ವ್ಯಾಪ್ತಿಯಲ್ಲಿ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಫಲಾನುಭವಿಗಳು ಚನ್ನಮ್ಮ ಕಿತ್ತೂರು ಪಟ್ಟಣದಲ್ಲಿ ೫ ವರ್ಷ ಮೇಲ್ಪಟ್ಟು ವಾಸವಾಗಿರಬೇಕು, ರಾಜ್ಯದ ಬೇರೆ ಕಡೆ ಸ್ವಂತ ಮನೆ ಹೊಂದಿರಬಾರದು, ಪಟ್ಟಣ ಪಂಚಾಯತ ವ್ಯಾಪ್ತಿಯವರೇ ಆಗಿರಬೇಕು.
ಈ ಹಿಂದೆ ಸರ್ಕಾರದಿಂದ ಯಾವುದೇ ವಸತಿ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು, ಹಿಂದೆ ಸೌಲಭ್ಯ ಪಡೆದಿದ್ದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
ದಾಖಲಾತಿಗಳು:
ಚಾಲ್ತಿ ವರ್ಷದ ಫಾರಂ ನಂ ೩, ಆಸ್ತಿ ತೆರಿಗೆ ರಸೀದಿ, ನೀರಿನ ತೆರಿಗೆ ರಸೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ ಖಾತೆ, ಪಡಿತರ ಚೀಟಿಗಳ ಝರಾಕ್ಸ್ ಪ್ರತಿಗಳು ಮತ್ತು ೩ ಭಾವಚಿತ್ರಗಳೊಂದಿಗೆ ಸೆಪ್ಟೆಂಬರ ೨೫ ರೊಳಗಾಗಿ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ಕಾರ್ಯಲಯದ ಸೂಚನಾ ಫಲಕ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯತ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ಕೃಷಿ ಅಧಿಕಾರಿಗಳಿಂದ ಸಾಂಕೇತಿಕ ಧರಣಿ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಹಾಯಕ ಕೃಷಿ ಅಧಿಕಾರಿಗಳಿಂದ ಸೆಪ್ಟೆಂಬರ ೧೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫.೩೦ ರವರೆಗೆ ಕೃಷಿ ಸಂಕೀರ್ಣದ ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ (ಶಿವಾಜಿ ನಗರ) ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಸಹಾಯಕ ಕೃಷಿ ಅಧಿಕಾರಿಗಳು ತಿಳಿಸಿದ್ದರೆ.
ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಕೆ.ಜಮಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯ ಧನ: ಫಲಾನುಭವಿಗಳಿಂದ ಅರ್ಜಿ ಆಹ್ವಾನ
೨೦೧೯-೨೦ನೇ ಸಾಲಿನ ಶೇ. ೨೪.೧೦ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ, ಹಾಗೂ ಗೃಹ ಬಳಕೆಗಾಗಿ ಸೋಲಾರ ದೀಪ ವಿತರಿಸುವುದು, ೭.೨೫ ಯೋಜನೆಯಡಿಯಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ನೀಡುವುದು, ಹಾಗೂ ಶೇ ೫ ಯೋಜನೆಯಡಿಯಲ್ಲಿ ವಿಶೇಷಚೇತರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ತ್ರಿ ಚಕ್ರ ವಾಹನಗಳು ಎಸ್ ಎಫ್ ಸಿ ಹಾಗೂ ಪಟ್ಟಣ ಪಂಚಾಯತ ನಿಧಿಯಲ್ಲಿ ವಿತರಿಸಲಾಗುವುದು.
ಆಸಕ್ತ ಫಲಾನುಭವಿಗಳಿಗೆ ಪಟ್ಟಣ ಪಂಚಾಯತಿಯಲ್ಲಿ ನಿಗಧಿ ಪಡಿಸಿದ ನಮೂನೆಯಲ್ಲಿ ತಮ್ಮ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ ೩೦ ರೊಳಗಾಗಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಿಷಯ ನಿರ್ವಾಹಕರು ಅಥವಾ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಚ.ಕಿತ್ತೂರ ಪಟ್ಟಣ ಪಂಚಾಯತ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನ
೨೦೧೯-೨೦ನೇ ಸಾಲಿಗೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (೧ ರಿಂದ ೧೦ ನೇ ತರಗತಿ) ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನ ಯೋಜನೆಯನ್ನು ಪಡೆಯಲು ವೆಬ್‌ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಸೆಪ್ಟೆಂಬರ ೧ ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಬವಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಉದ್ಘಾಟನೆ
ನಾಯಕತ್ವ ಗುಣ ಮತ್ತು ರಾಷ್ಟ್ರೀಯ ಸೇವಾ ಮನೋಭಾವ ಬೆಳಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಾಯಕಾರಿಯಾಗಿದೆ ಎಂದು ಬೆಳಗಾವಿಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್ ಎನ್ ಪಟ್ಟಣಶೆಟ್ಟಿ ಅವರು ಹೇಳಿದರು.
ಶಹಾಪೂರದ ಸರ್ಕಾರಿ ಚಿಂತಾಮಣರಾವ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೆ.೧೪ ರಿಂದ ಸೆ. ೨೦ ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರಾರ್ಥಿಗಳು ಏಳು ದಿನ ಶಿಬಿರದ ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಸರ್ಕಾರಿ ಸರಸ್ವತಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ.ವೈ. ಹನ್ನೂರ ಮಾತನಾಡಿ, ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಕಾಕತಿ ಗ್ರಾಮ ಪಂಚಾಯತ ಸದಸ್ಯರಾದ ರಾಮಾ. ಕೆ. ಕಡೋಲಕರ, ಶಹಾಪೂರ ಸರ್ಕಾರಿ ಚಿಂತಾಮಣರಾವ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಭಾರತಿ.ವ್ಹಿ.ವಾಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ಜ್ಯೋತಿ.ಸಿ.ಎಂ ಹಾಗೂ ಸಹಾಯಕ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಎಸ್.ಎಸ್.ಹಿರೇಮಠ ಉಪಸ್ಥಿತರಿದ್ದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸಗಳ ಪುನರ್ವಸತಿಗೆ ಅರ್ಜಿ ಅಹ್ವಾನ
ಚ.ಕಿತ್ತೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸಗಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಸಮೀಕ್ಷೆಯನ್ನು ನಡೆಸಲಾಗಿದ್ದು, ಅಂಥವರು ಯಾರಾದರೂ ಇದ್ದಲ್ಲಿ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಆರೋಗ್ಯ ಮತ್ತು ಕೌಶಲ ಸ್ಥಿತಿಗತಿಗಳನ್ನು ಗುರುತಿಸಿ ಬದಲಿ ಉದ್ಯೋಗ ಹಾಗೂ ಪುನರ್ವಸತಿ ಕಲ್ಪಿಸಲು ವರದಿ ಸಲ್ಲಿಸಲಾಗುವುದು.
ಸದರಿ ಸಮೀಕ್ಷೆಯ ಡೆಸಿಗ್ನೇಟೆಡ್ ಆಫೀಸ ಪಟ್ಟಣ ಪಂಚಾಯತ ಆಗಿದ್ದು, ಸೆಪ್ಟೆಂಬರ ೨೩ ರಂದು ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆ ಒಳಗಾಗಿ ಪಟ್ಟಣ ಪಂಚಾಯತ ಕಿರಿಯ ಆರೋಗ್ಯ ನಿರೀಕ್ಷಕರಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬಿ.ಬಿ.ಗೋರೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಉತ್ಸವ: ಪುಸ್ತಕ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ
ಜಗತ್ತಿನ ಪ್ರಸಿದ್ದ ಮೈಸೂರು ದಸರಾ ಉತ್ಸವ-೨೦೧೯ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ ೨೯ ರಿಂದ ಅಕ್ಟೊಂಬರ್ ೭ ರವರಿಗೆ ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-೨೦೧೯ನ್ನು ಮೈಸೂರಿನ ಕಾಡಾ ಮೈದಾನದದಲ್ಲಿ ಏರ್ಪಡಿಸಲಾಗುವುದು.
ಪುಸ್ತಕ ಮಾರಾಟ ಮೇಳದಲ್ಲಿ ಕನ್ನಡ ಪ್ರಕಾಶಕರು, ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ. ೨,೦೦೦ ಗಳ ಭದ್ರತಾ ಠೇವಣಿ ಡಿ.ಡಿ ಯನ್ನು ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರುರವರ ಹೆಸರಿಗೆ ಸಲ್ಲಿಸುವುದು.
ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು, ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರ ಕಚೇರಿ, ಆಯಾ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳಲ್ಲಿ, ವೆಬ್‌ಸೈಟ್‌ನಲ್ಲಿ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಭರ್ತಿಮಾಡಿದ ಅರ್ಜಿಯನ್ನು ರೂ.೨೦೦೦ ಡಿ.ಡಿ ಯೊಂದಿಗೆ ಸೆಪ್ಟಂಬರ್ ೨೧ ರಂದು ಸಂಜೆ ೫ ಗಂಟೆಯೊಳಗೆ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರು ಅವರ ಹೆಸರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ ಮೂಲಕ ಸಲ್ಲಿಬಹುದು.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳೂರು-೫೬೦೦೦೨ ದೂರವಾಣಿ ಸಂಖ್ಯೆ:೦೮೦-೨೨೪೮೪೫೧೬, ೨೨೧೦೭೭೦೪ ನ್ನು ಸಂಪರ್ಕಿಸಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲ ಕಲ್ಯಾಣ ಕೇಂದ್ರದಿಂದ ಬಾಲಕರು ನಾಪತ್ತೆ
ಸುಭಾಷ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರ ಇಬ್ಬರು ಬಾಲಕರು ಪ್ರತೇಕ ದಿನದಂದು ಬಾಲ ಕೇಂದ್ರದಿಂದ ಕಾಣೆಯಾಗಿದ್ದಾರೆ ಎಂದು ಬೆಳಗಾವಿ ನಗರ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಜುನಾಥ ಕುರೇರ ವಯಸ್ಸು ೧೫ ವರ್ಷ, ಸಾದಾಗಪ್ಪು ಮೈಬಣ್ಣ, ೧೫೩ ಸೆ.ಮೀ ಎತ್ತರ ಹಾಗೂ ಕನ್ನಡ ಭಾಷೆ ಮಾತನಾಡುತ್ತಾನೆ.
ರಮೇಶ ಹಡಪದ ವಯಸ್ಸು ೧೫ ವರ್ಷ, ಗೋದಿಗೆಂಪು ಮೈಬಣ್ಣ, ೧೫೨ ಸೆ.ಮೀ ಎತ್ತರ ಹಾಗೂ ಕನ್ನಡ ಭಾಷೆ ಮಾತನಾಡುತ್ತಾನೆ.
ಈ ಪ್ರಕಾರ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬೆಳಗಾವಿ ನಗರ ಮಾರ್ಕೆಟ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೪೨, ಬೆಳಗಾವಿ ಕಂಟ್ರೋಲ್ ರೂಮ್ ಸಂಖ್ಯೆ ೦೮೩೧-೨೪೦೫೨೩೩ ಸಂಪರ್ಕಿಸಬೇಕೆಂದು ಬೆಳಗಾವಿ ನಗರ ಮಾರ್ಕೆಟ್ ಪೊಲೀಸ್ ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
೨೦೧೯-೨೦ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟಂಬರ್ ೧೮ ಮತ್ತು ೧೯ ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದ್ದು, ತಾಲೂಕಾ ಮಟ್ಟದಲ್ಲಿ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಹಾಕಿ, ಬಾಸ್ಕೇಟ್‌ಬಾಲ್, ಟೆಬಲ್ ಟೆನ್ನಿಸ್, ಫುಟ್‌ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಶೆಟಲ್ ಬ್ಯಾಡ್ಮಿಂಟನ್, ಹ್ಯಾಂಡ್‌ಬಾಲ್ ಸ್ಪರ್ಧೆಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದ್ದು ಆ ತಂಡಗಳು ಜಿಲ್ಲಾ ಮಟ್ಟಕ್ಕೆ ನೇರವಾಗಿ ಭಾಗವಹಿಸಬಹುದಾಗಿದೆ. ಅದರಂತೆ ಲಾನ್ ಟೆನ್ನಿಸ್, ನೆಟ್‌ಬಾಲ್ ಹಾಗೂ ಈಜು ಕ್ರೀಡೆಗಳಿಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆಗಳನ್ನು ನಡೆಸಲಾಗುವುದು.
ಭಾಗವಹಿಸಲು ಇಚ್ಚಿಸುವ ಆಸಕ್ತ ಪುರುಷ ಮತ್ತು ಮಹಿಳೆಯರು ನೇರವಾಗಿ ಭಾಗವಹಿಸಬಹುದಾಗಿದೆ. ಅರ್ಹರಿರುವ ಎಲ್ಲ ಕ್ರೀಡಾಪಟುಗಳು ಸೆಪ್ಟೆಂಬರ್ ೧೮ ರಂದು ಬೆಳಿಗ್ಗೆ ೯ ಗಂಟೆಯೊಳಗಾಗಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಡಕೊರಕ ಹುಳು ನಿಯಂತ್ರಣಕ್ಕೆ ಕ್ರಮಗಳು
ತರಕಾರಿ ಬೆಳೆಗಳಲ್ಲಿ ಕಂಡುಬರುವ ಕಾಂಡಕೊರಕ, ಹಣ್ಣುಕೊರಕ, ಬೇರುಕೊರಕ, ಕೂದಲುಳ್ಳ ಕಂಬಳಿ ಹುಳು ಹಾಗೂ ಸೈನಿಕ ಹುಳುಗಳನ್ನು ಸಾವಯುವ ಪದ್ಧತಿಯ ಮೂಲಕ ನಿಯಂತ್ರಿಸಬಹುದು ಎಂದು ಬೆಳಗಾವಿ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರು ತಿಳಿಸಿದ್ದಾರೆ.
ಕ್ರಮಗಳು:
ಬೇವಿನ ತಿರುಳಿನ ದ್ರಾವಣ (ಶೇ.೧.೨೫ ರಿಂದ ೫) ೩-೫ ಕೆ.ಜಿ. ಬೇವಿನ ತಿರುಳು ಒಂದು ಎಕರೆಗೆ ಬೇಕಾಗುತ್ತದೆ, ಬೀಜದ ಮೇಲಿನ ಪದರನ್ನು ತೆಗೆದು ಕೇವಲ ತಿರುಳನ್ನು ಮಾತ್ರ ಬಳಸಬೇಕ, ಒಂದು ವೇಳೆ ಬೀಜಗಳು ತಾಜಾ ಆಗಿದ್ದರೆ ೩ ಕೆ.ಜಿ. ತಿರುಳು ಸಾಕಾಗುತ್ತದೆ, ಒಂದು ವೇಳೆ ೫ ಕೆ.ಜಿ.ಯಷ್ಟು ಬೇಕಾಗುತ್ತದೆ, ಬೇವಿನ ತಿರುಳನ್ನು ಕುಟ್ಟಿ ಹಾಗೂ ಕಾಟನ್ ಬಟ್ಟೆಯಲ್ಲಿ ಸಡಿಲವಾಗಿ ಕಟ್ಟಬೇಕು, ೧೦ ಲೀ.ನೀರಿನ ಪ್ರಮಾಣದ ಪಾತ್ರೆಯಲ್ಲಿ ಇಡೀ ರಾತ್ರಿ ಇದನ್ನು ನೆನೆಸಿಡಬೇಕು, ನಂತರ ಇದನ್ನು ಸೋಸಬೇಕು, ಶೋಧಿಸಿದ ಮೇಲೆ ೬-೭ ಲೀ. ದ್ರಾವಣ ಉಳಿಯುತ್ತದೆ, ೫೦೦-೧೦೦೦ಮಿ.ಲೀ.ನಷ್ಟು ಈ ದ್ರಾವಣವನ್ನು ೯ ಲೀ. ನೀರಿನೊಂದಿಗೆ ಸೇರಿಸಿ ಕಲಕಬೇಕು, ಸಿಂಪರಣೆ ಮಾಡುವ ಮುನ್ನ ೧೦ ಮಿ.ಲೀ. ನಷ್ಟು ಖಾವಿ ಸಾಬೂನು ದ್ರಾವಣವನ್ನು ಸೇರಿಸಿದರೆ ಎಲೆಗಳ ಮೇಲ್ಮೈಗೆ ಈ ದ್ರಾವಣವು ಚೆನ್ನಾಗಿ ಅಂಟಿಕೊಳ್ಳುತ್ತದೆ. ಈ ದ್ರಾವಣದ ಬಳಕೆಯನ್ನು ಕೀಟಗಳ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
ಬೆಳ್ಳುಳ್ಳಿ, ಮೆಣಸಿನಕಾಯಿ, ಶುಂಠಿ ದ್ರಾವಣ (೫೦೦ ರಿಂದ ೧೦೦೦ಮಿ.ಲೀ. ಪ್ರತಿ ತೊಟ್ಟಿಗೆ ೧೦ಲೀ. ಸಾಮರ್ಥ್ಯ) ಇದು ಮೂರು ಸಸ್ಯಗಳ ಸಮಿಶ್ರಣ ಹೊಂದಿರುವ ದ್ರಾವಣ, ೧೮ಗ್ರಾಂ. ಬೆಳ್ಳುಳ್ಳಿಯ ಮೇಲಿನ ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ತೆಗೆದು ಲೇಪವನ್ನು ಮಾಡುವುದು, ೯ ಗ್ರಾಂ. ಮೆಣಸಿನಕಾಯಿ ಹಾಗೂ ೯ ಗ್ರಾಂ. ಶುಂಠಿ ಪೇಸ್ಟ್ ಮಾಡಿಕೊಂಡು ಈ ಮೂರು ಮಿಶ್ರಣಗಳು ೧ ಲೀ. ನೀರಿನಲ್ಲಿ ಸೇರಿಸಿ ಚೆನ್ನಾಗಿ ಕಲಕಬೇಕು, ಸಿಂಪಡಿಸುವ ಮುನ್ನ ಈ ಮಿಶ್ರಣವನ್ನು ಶೋಧಿಸಬೇಕು, ೫೦೦ಮಿ.ಲೀ. ನಷ್ಟು ದ್ರಾವಣಕ್ಕೆ ೧೦೦ಮಿ. ಲೀ. ಸಾಬೂನು ದ್ರಾವಣವನ್ನು ಸೇರಿಸಬೇಕು, ನಂತರ ೯.೫ ಲೀ.ನಷ್ಟು ನೀರಿಗೆ ಈ ಮಿಶ್ರಣ ಸೇರಿಸಿ ಸಸ್ಯಗಳ ಮೇಲೆ ಸಿಂಪಡಿಸಬೇಕು.
ಬೇವಿನ ಎಣ್ಣೆ ಸಿಂಪರಣೆ ಸಸ್ಯ ಸಿಂಪಡಕೆಗಳೊಂದಿಗೆ ಬೇವಿನ ಎಣ್ಣೆಯನ್ನು ೪ ಮಿ.ಲೀ. ನೀರಿನೊಂದಿಗೆ ಸೇರಿಸಿದ ಸಾಬೂನು ದ್ರಾವಣವು ಕಂಬಳಿ ಹುಳುಗಳ ನಿಯಂತ್ರಣಕ್ಕೆ ಒಳ್ಳೆಯದು ಎಂದು ಬೆಳಗಾವಿ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಹಾಗೂ ನಾಮನಿರ್ದೇಶನಗಳ ಆಹ್ವಾನ
ಮಹಾತ್ಮ ಗಾಂಧಿ ಆಶಯಗಳನ್ನು ಎಲ್ಲೆಡೆ ಪಸರಿಸುತ್ತಿರುವ ಹಾಗೂ ಪಾಲಿಸುತ್ತಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕೊಡಮಾಡುವ ಐದು ಲಕ್ಷ ನಗದು ಒಳಗೊಂಡ ರಾಜ್ಯ ಸರ್ಕಾರದ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಅರ್ಹರು ಮತ್ತು ಆಸಕ್ತರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಜಿಗಳು ಹಾಗೂ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿಯ ಮೊದಲ ಸಭೆಯಲ್ಲಿ ಅಸ್ಪೃಷ್ಯತಾ ನಿವಾರಣೆ, ಅಹಿಂಸೆ, ಮಕ್ಕಳ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಪಾನ ನಿರೋಧ, ಖಾದಿ ಹಾಗೂ ಸ್ವದೇಶಿ ವಸ್ತುಗಳ ಬಳಕೆ ಮತ್ತು ಪ್ರೋತ್ಸಾಹ, ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳಿಗೆ ಸೇರಿದ ಜನರ ಶ್ರೇಯೋಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಸ್ವ-ಪ್ರೇರಣೆಯಿಂದ ತೊಡಗಿರುವ ೬೦ ವರ್ಷ ವಯೋಮಾನ ಪೂರ್ಣಗೊಳಿಸಿರುವ ವ್ಯಕ್ತಿಗಳನ್ನು ಹಾಗೂ ಸೇವೆಯಲ್ಲಿ ೨೫ ವರ್ಷ ಪೂರ್ಣಗೊಳಿಸಿರುವ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯ ಚಟುವಟಕೆಗಳಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಸ್ಥೆಗಳು ಅರ್ಜಿಗಳನ್ನು ಹಾಗೂ ಇಂತಹ ವ್ಯಕ್ತಿ ಅಥವಾ ಸಂಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವವರು ನಾಮ ನಿರ್ದೇಶನಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಕಚೇರಿಯ ಇ-ಮೇಲ್ ವಿಳಾಸಕ್ಕೆ ಸೆಪ್ಟೆಂಬರ್ ೧೮ ರಂದು ರಾತ್ರಿ ೯ ಗಂಟೆಯೊಳಗೆ ಕಳುಹಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಉದ್ಯಾನವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಹಾಗೂ ಬೆಳಗಾವಿ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ೨೦೧೯-೨೦ ನೇ ಸಾಲಿನ ೬೨ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರತಿ ವರ್ಷದಂತೆ ಸಾರ್ವಜನಿಕ ಉದ್ಯಾನವನಗಳು, ಶಾಲೆ ಕಾಲೇಜಗಳಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನವಗಳು, ಸಂಘ ಸಂಸ್ಥೆಗಳಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನವಗಳು, ಖಾಸಗಿ, ಸರ್ಕಾರಿ ಕಛೇರಿ, ಮನೆಗಳ ಮುಂದೆ ಅಭಿವೃದ್ಧಿ ಪಡಿಸಿದ ಉದ್ಯಾನವಗಳು, ಕಾರ್ಖಾನೆ, ಉದ್ಯಮಗಳು ಅಭಿವೃದ್ಧಿ ಪಡಿಸಿದ ಉದ್ಯಾನವಗಳು ಹಾಗೂ ವಿಶೇಷವಾಗಿ ತೋಟಗಾರಿಕೆಯಲ್ಲಿ ಅಭಿವೃದ್ಧಿ ಪಡಿಸಿರುವ ಇತರೆ ಉದ್ಯಾನವನಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ.
ಸೆಪ್ಟೆಂಬರ ೩೦ ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಬೆಳಗಾವಿ ಕಛೇರಿಯಲ್ಲಿ ಅರ್ಜಿಗಳನ್ನು ಪಡೆದು ತುಂಬಿ ಸಲ್ಲಿಸಬೇಕು.
ಉದ್ಯಾನವನಗಳನ್ನು ನುರಿತ ತಜ್ಞರಿಂದ ಅಕ್ಟೋಬರ ೯ ರಿಂದ ೧ರ ಒಳಗೆ ಪರಿಶೀಲನೆಗೊಳಪಡಿಸಿ ಅತ್ಯಂತ ಸುಂದರವಾಗಿ ನಿರ್ವಹಣೆ ಮಾಡಿರುವ ಉದ್ಯಾನವನಗಳಿಗೆ ನವೆಂಬರ ತಿಂಗಳಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಕ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಜಿಲ್ಲೆಯ ಎಲ್ಲ ಸಾರ್ವಜನಿಕರು ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೧-೨೪೫೧೪೨೨ ಸಂಪರ್ಕಿಸಬಹುದು ಎಂದು ಇಲಾಖೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ ೧೯ ರಂದು ಒಂದು ದಿನದ ಕಾರ್ಯಾಗಾರ
ವೆಬ್ ಪೊರ್ಟಲ್‌ಗೆ ಹೊಸದಾಗಿ ಸೆರ್ಪಡೆಯಾಗ ಬಯಸುವ ಸಂಸ್ಥೆ, ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಈಗಾಗಲೇ ವೆಬ್ ಐ.ಡಿ ಹೊಂದಿದ ಸಂಸ್ಥೆ, ಬ್ಯಾಂಕುಗಳು ಸೆಪ್ಟೆಂಬರ ೧೯ ರಂದು ಬೆಳಿಗ್ಗೆ ೧೦.೩೦ ಕ್ಕೆ ಬೆಳಗಾವಿ ಇಂಡಸ್ಟ್ರೀಯಲ್ ಕೋ.ಆಫ್.ಬ್ಯಾಂಕ್ ಡಾ. ಎಸ್.ಪಿ.ಎಮ್. ರೋಡ, (ಕೇಂದ್ರ ಕಚೇರಿ) ಬೆಳಗಾವಿ ಸಭಾಂಗಣದಲ್ಲಿ ನೇಕಾರರ ಸಾಲ ಮನ್ನಾ ಯೋಜನೆಯ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಸದರಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯಬೇಕೆಂದು ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿದೋದ್ದೇಶ ಸಹಕಾರಿ ಸಂಘಗಳು, ಕೈಗಾರಿಕಾ ಸಹಕಾರಿ ಬ್ಯಾಂಕುಗಳು, ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ಧ ಸಹಕಾರಿ ಸಂಘ, ಸೌಹಾರ್ದ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಜುಲೈ ೨೬, ೨೦೧೨ ರಿಂದ ಸಾಲ ಪಡೆದು ಮಾರ್ಚ ೩೧, ೨೦೧೯ಕ್ಕೆ ಹೊಂದಿದ ಹೊರಬಾಕಿ ಯಲ್ಲಿ ಅಸಲು ಮತ್ತು ಬಡ್ಡಿ ಸೇರಿ ಗರಿಷ್ಟ ರೂ.ಒಂದು ಲಕ್ಷಗಳ ಮೊತ್ತವನ್ನು ಮನ್ನಾ ಮಾಡಲು ಅವಕಾಶವಿರುತ್ತದೆ.
ಅದರಂತೆ ಈಗಾಗಲೇ ವೆಬ್ ಐ.ಡಿ ಹೊಂದಿದ ಸಂಸ್ಥೆ, ಬ್ಯಾಂಕುಗಳು ವೆಬ್ ಪೊರ್ಟಲ್‌ಗೆ ತಮ್ಮ ಸಂಸ್ಥೆ, ಬ್ಯಾಂಕುಗಳ ಸಾಲಮನ್ನಾ ಬಿಲ್ಲುಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ ಉದ್ಯಮಬಾಗ ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೦೭೨೩೭, ೦೮೩೧-೨೪೪೩೨೪೬ ಕಚೇರಿಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ