*ಹಿರಿಯ ವಿಮರ್ಶಕ ಡಾ. ಜಿ. ಎಂ. ಹೆಗಡೆ ಅವರಿಗೆ ಲಷ್ಕರಿ ಕೇಶವ ಭಟ್ ಪ್ರಶಸ್ತಿ ಪ್ರಶಸ್ತಿ ಪ್ರಧಾನ*
ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಲೋಕವಿಕಾಸ ಟ್ರಸ್ಟ್ ಮೂಲಕ ನಿವೃತ್ತ ಶಿಕ್ಷಣಾಧಿಕಾರಿ ಮತ್ತು ಸಾಹಿತಿ ಶ್ರೀ ಎಸ್. ಜಿ. ಕೃಷ್ಣ ಅವರಿಂದ ಪ್ರಾಯೋಜಿತವಾದ ಲಷ್ಕರಿ ಕೇಶವ ಭಟ್ಟ ಪ್ರಶಸ್ತಿಯನ್ನು ಈ ವರ್ಷ ನಾಡಿನ ಹಿರಿಯ ವಿಮರ್ಶಕ, ವಿದ್ವಾಂಸ ಡಾ. ಜಿ. ಎಂ. ಹೆಗಡೆ ಅವರಿಗೆ ನೀಡಲಾಗುತ್ತಿದೆ. ಇದೇ ರವಿವಾರ ದಿ. ೪ ರಂದು ಪುತ್ತೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಆಲ್ಮನೆಯಲ್ಲಿ ೧೯೫೨ ಡಿಸೆಂಬರ್ ೧೨ ರಂದು ಜನಿಸಿದ ಜಿ. ಎಂ. ಹೆಗಡೆಯವರು ೧೯೮೩ ರಲ್ಲಿ ” ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ ” ಎಂಬ ವಿಷಯವಾಗಿ ಪಿ.ಎಚ್. ಡಿ ಪದವಿ ಪಡೆದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ೩೮ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.
ಕನ್ನಡದ ವಿಮರ್ಶಾ ಲೋಕಕ್ಕೆ ಹೆಗಡೆಯವರ ಕೊಡುಗೆ ಬಹಳ ದೊಡ್ಡದು. ಸುಮಾರು ೭೫ ಕೃತಿಗಳನ್ನು ರಚಿಸಿರುವ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಗೆ ಹತ್ತು ವರ್ಷ ಅಂಕಣ ಬರೆದಿದ್ದಾರೆ. ಸುಮಾರು ಆರುನೂರಕ್ಕೂ ಹೆಚ್ಚು ಪುಸ್ತಕಗಳ ವಿಮರ್ಶೆ ಬರೆದಿರುವ ಅವರಿಗೆ ಗೋಕಾಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಗೌರವಗಳು ದೊರಕಿವೆ.
ಕವಿವಿ ಕನ್ನಡ ಅಧ್ಯಾಪಕರ ಪರಿಷತ್ತು ಸ್ಥಾಪಿಸಿ ೧೪ ವರ್ಷಗಳ ಕಾಲ ಅದರ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ಹಲವು ಉಪಯುಕ್ತ ಕಾರ್ಯ ನಿರ್ವಹಿಸಿದ್ದಾರೆ. ಹತ್ತು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಉತ್ತರ ಕನ್ನಡದ ಯಕ್ಷಗಾನ ರಂಗಭೂಮಿ, ಕರ್ನಾಟಕದ ಕವಿ, ಲೇಖಕರು, ನಮ್ಮಕನ್ನಡಿಗರು, ಸಂಗೀತ ಕಲಾರತ್ನರು, ಜನಪ್ರಿಯ ಕನ್ನಡ ಛಂದಸ್ಸು, ವಿಮರ್ಶಾ ವಿವೇಕ , ಕಿಟೆಲ್, ಕಣವಿ, ಪಾಪು, ಬಸವಣ್ಣ- ಪರಮಹಂಸ ಮೊದಲಾದವು ಅವರ ಕೃತಿಗಳು.
೭೩ ವರ್ಷ ವಯಸ್ಸಿನ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಜಿ. ಎಂ. ಹೆಗಡೆಯವರಿಗೆ ಸಂದ ಅರ್ಹ ಪ್ರಶಸ್ತಿಗಾಗಿ ಅವರಿಗೆ ಅಭಿನಂದನೆಗಳು. ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದ ಪ್ರತಿಷ್ಠಾನದ ಬಳಗಕ್ಕೆ ಧನ್ಯವಾದಗಳು ಎಂದು ಎಲ್. ಎಸ್. ಶಾಸ್ತ್ರಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ