*ಅಂಗನವಾಡಿ ಮಕ್ಕಳ ತಟ್ಟೆಗೆ ಹಾಕಿದ್ದ ಮೊಟ್ಟೆ ಕಸಿಯುತ್ತಿದ್ದ ಕಾರ್ಯಕರ್ತೆ, ಸಹಾಯಕಿ ಸಸ್ಪೆಂಡ್ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಕಾರ್ಯಕರ್ತೆ, ಸಹಾಯಕಿ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಪ್ರಗತಿವಾಹಿನಿ ಸುದ್ದಿ: ಅಂಗನವಾಡಿ ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೂ ಬಿಡದೇ ಎತ್ತಿಕೊಂಡು ವಂಚಿಸಿದ್ದ ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ.
ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಜ್ ಬೇಗಂ ಅವರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಿನ್ನೆ ರಾತ್ರಿ ತಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದ್ದಾರೆ. ಇಡೀ ಪ್ರಕರಣದ ವರದಿ ನೀಡುವಂತ ಆದೇಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಮಾತಿದೆ. ಹಾಗೇ ಸರ್ಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲೆಂದು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ನಾನು ಕೂಡ ಅಂಗನವಾಡಿಗಳಲ್ಲಿ ಶಿಸ್ತನ್ನು ತರಲು, ಬದಲಾವಣೆ ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಗುಂಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೇ ಮಕ್ಕಳ ಪ್ಲೇಟ್ ನಲ್ಲಿದ್ದ ಮೊಟ್ಟೆ ಎತ್ತಿಕೊಂಡಿದ್ದಾರೆ. ಮಕ್ಕಳು ತಿನ್ನಲು ಮುಂದಾದ ಮೊಟ್ಟೆ ಕಸಿದುಕೊಂಡಿದ್ದಾರೆ. ಇದನ್ನು ನೋಡಿದರೆ ಕರುಳು ಚುರ್ ಎನ್ನುತ್ತದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅವರನ್ನು ಅಮಾನತು ಮಾಡಲಾಗಿದೆ. ಇಬ್ಬರನ್ನೂ ಶಾಶ್ವತವಾಗಿ ಡಿಸ್ ಮಿಸ್ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಸಂಬಂಧಿಸಿದ ಸಿಡಿಪಿಒ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ಏನಿದು ಪ್ರಕರಣ:
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಎಂದು ಮೊಟ್ಟೆ ಕೊಟ್ಟರೆ ಅದನ್ನು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರೇ ಗುಳುಂ ಮಾಡಿ ವಂಚಿಸಿದರೆ ಹೇಗೆ? ಇಂತದ್ದೊಂದು ಘಟನೆ ಕೊಪ್ಪಳದಲ್ಲಿ ನಡೆದಿದೆ.
ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ ಮೊಟ್ಟೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಕಾರ್ಯಕರ್ತೆ ಲಕ್ಷ್ಮೀ ಹಾಗೂ ಶೈನಾಜಬೇಗಂ ಅಮಾನತುಗೊಂಡವರು. ಅಂಗನವಾಡಿ ಮಕ್ಕಳಿಗೆ ತಟ್ಟೆಗೆ ಹಾಕಿದ್ದ ಮೊಟ್ಟೆಯನ್ನು ಇಬ್ಬರೂ ಎತ್ತಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಇಬ್ಬರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು.
ಮೊದಲು ಅಂಗನವಾಡಿ ಮಕ್ಕಳ ತಟ್ಟೆಗೆ ಮೊಟ್ಟೆಯನ್ನು ಹಾಕಿ ಅಂಗನವಾಡಿ ಸಹಾಯಕಿ ವಿಡಿಯೋ ಮಾಡುತ್ತಿದ್ದರು. ಬಳಿಕ ಮಕ್ಕಳಿಂದ ತಟ್ಟೆಮುಂದೆ ಪ್ರಾರ್ಥನೆ ಮಾಡಿಸುತ್ತಿದ್ದರು. ಪ್ರಾರ್ಥನೆ ಮುಗಿದ ಬಳಿಕ ಇನ್ನೇನು ಮಕ್ಕಳು ಮೊಟ್ಟೆ ತಿನ್ನಬೇಕು ಎನ್ನುವಷ್ಟರಲ್ಲಿ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆ ಎತ್ತಿಕೊಳ್ಳುತ್ತಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಂಗನಾಡಿ ಕಾರ್ಯಕರ್ತೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಗಮನಕ್ಕೆ ಬರುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮನಾತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ