ಬಿಜೆಪಿ ಬಂಡಾಯ ಗುಂಪಿನಲ್ಲಿ ಮತ್ತೊಂದು ಅಚ್ಚರಿಯ ಹೆಸರು! ; ಪಕ್ಷಕ್ಕೆ ದೊಡ್ಡ ಶಾಕ್!!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಜನತಾ ಪಾರ್ಟಿಯ ಬಂಡಾಯ ಗುಂಪು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಸೆ.17ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ನಿರ್ಧಾರ ತೆಗೆದುಕೊಂಡಿದೆ.
ಬೆಳಗಾವಿಯ ಹೊರವಲಯದಲ್ಲಿರುವ ರೆಜೆಂಟಾ ರೆಸಾರ್ಟ್ ನಲ್ಲಿ ಕಳೆದ 3 -4 ದಿನದಿಂದ ನಡೆಯುತ್ತಿದ್ದ ಸರಣಿ ಸಭೆ, ಭಾನುವಾರ ಅಂತ್ಯಗೊಂಡಿದೆ. ಭಾನುವಾರದ ಸಭೆಯಲ್ಲಿ 4 -5 ಹೊಸ ಮುಖಗಳು ಕಾಣಿಸಿಕೊಂಡಿದ್ದು, ಸಧ್ಯದಲ್ಲೇ ಇನ್ನೂ ಹಲವು ನಾಯಕರು ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳ ತಿಳಿಸಿವೆ.
ಅಚ್ಛರಿಯ ಸಂಗತಿ ಎಂದರೆ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ ಕುಮಾರ ಕಟೀಲು ಕೂಡ ಭಾನುವಾರದ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಡೆಂಗ್ಯೂ ಆಗಿರುವುದರಿಂದ ಅವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ವಿರೋಧಿ ಬಣ ಬಹಳ ದೊಡ್ಡದಾಗಿ ಬೆಳೆಯುವ ಲಕ್ಷಣ ಕಾಣಿಸಿದೆ.
ನಮ್ಮದು ಬಂಡಾಯದ ಸಭೆಯಲ್ಲ, ಪಕ್ಷವನ್ನು ಬಲಪಡಿಸುವ ಸಭೆ ಎಂದು ಭಾನುವಾರ ಸೇರಿದ್ದ ನಾಯಕರು ಹೇಳಿಕೊಂಡಿದ್ದಾರೆ. ತನ್ಮೂಲಕ, ನಾವು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರೋಧಿಗಳು, ಬಿಜೆಪಿ ವಿರೋಧಿಗಳಲ್ಲ ಎನ್ನುವ ಸಂದೇಶವನ್ನು ಸಾರುವ ಯತ್ನವನ್ನು ಮಾಡಿದ್ದಾರೆ.
ಭಾನುವಾರದ ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಪ್ರತಾಪ ಸಿಂಹ್, ಕುಮಾರ ಬಂಗಾರಪ್ಪ ಜೊತೆಗೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿ.ಎಂ.ಸಿದ್ದೇಶ್ವರ, ಅರಂವಿಂದ ಲಿಂಬಾವಳಿ, ಎನ್.ಆರ್.ಸಂತೋಷ ಮತ್ತಿತರರೂ ಜೊತೆಯಾಗಿದ್ದು, ಕುತೂಹಲ ಮೂಡಿಸಿದೆ. ಇವರಲ್ಲಿ ಹಲವರು ಯಡಿಯೂರಪ್ಪ ವಿರೋಧಿ ಬಣದಲ್ಲಿ ಮೊದಲಿನಿಂದಲೂ ಇದ್ದರಾದರೂ ಎಂದಿಗೂ ಬಂಡಾಯವಾಗಿ ಕಾಣಿಸಿರಲಿಲ್ಲ. ಕೆಲವರು ಇದೇ ಮೊದಲಬಾರಿಗೆ ಬಹಿರಂಗವಾಗಿ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ.
ಮಾಜಿ ಸಂಸದರೂ, ಬಿಜೆಪಿ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ನಳಿನ್ ಕುಮಾರ ಕಟೀಲು ಅನಾರೋಗ್ಯದಿಂದಾಗಿ ಬರಲಿಲ್ಲ. ಅವರೂ ನಮ್ಮ ಜೊತೆಗಿದ್ದಾರೆ ಎಂದು ಭಾನುವಾರದ ಸಭೆಯಲ್ಲಿದ್ದ ಪ್ರಮುಖರು ತಿಳಿಸಿದರು. ಹಂತಹಂತವಾಗಿ ಇನ್ನೂ ಅನೇಕರು ನಮ್ಮ ಜೊತೆ ಸೇರಲಿದ್ದಾರೆ, ಮುಂದಿನ ದಿನಗಳಲ್ಲಿ ಬಹಳ ದೊಡ್ಡದಾಗಿ ನಾವು ಧ್ವನಿ ಎತ್ತಲಿದ್ದೇವೆ ಎಂದು ತಿಳಿಸಿದರು.
ಈ ಬೆಳವಣಿಗೆ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದು, ಒಳಗಿದ್ದೂ ಅಸಮಾಧಾನದಿಂದ ಕುದಿಯುತ್ತಿರುವ ಅನೇಕರು ಒಳಗಿಂದೊಳಗೆ ಈ ಗುಂಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ