*ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದನ್ನು ಅವಲೋಕಿಸಿ: ಬ್ರಿಗೇಡಿಯರ ಕೆವಿಕೆ ಪ್ರಕಾಶ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದನ್ನು ಅವಲೋಕನ ಮಾಡಿ. ನಮಗೆ ದೇಶ ಏನು ಕೊಟ್ಟಿದೆ ಎಂಬುದನ್ನು ಯೋಚಿಸಬೇಡಿ. ದೇಶವು ಪ್ರಜೆಗಳಿಗಾಗಿ ಎಲ್ಲವನ್ನು ನೀಡುತ್ತಿದೆ. ಹಲವರ ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಇಂದು ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಇನ್ಫೆಂಟ್ರಿ ಸ್ಕೂಲನ ಜೂನಿಯರ ಲೀಡರ್ಸ ವಿಂಗ ಕಮಾಂಡರ್ ಬ್ರಿಗೇಡಿಯರ ಕೆವಿಕೆ ಪ್ರಕಾಶ್ ಅವರು ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 78ನೇ ಧ್ವಜಾರೋಹನ ನೆರವೇರಿಸಿ ಮಾತನಾಡಿದ ಅವರು, ಅಂಡಮಾನ ನಿಕೋಬಾರನಲ್ಲಿರುವ ಯುದ್ದ ಹಾಗೂ ಸ್ವಾತಂತ್ರ್ಯ ಹೋರಾಟದ ಮೆಮೋರಿಯಲ್ ಮ್ಯೂಸಿಯಂಗೆ ಭೇಟಿ ನೀಡಿದರೆ ತ್ಯಾಗ ಬಲಿದಾನಗಳ ಕುರಿತು ನಮಗೆ ಅರಿವಿಗೆ ಬರುತ್ತದೆ. ಯುವಕರು ಮುಖ್ಯವಾಗಿ ಆ ವಸ್ತುಸಂಗ್ರಾಹಲಯಕ್ಕೆ ಭೇಟಿ ನೀಡಬೇಕು. ಅದರಿಂದ ಸ್ಪೂರ್ತಿ ಬರುತ್ತದೆ. ಆದ್ದರಿಂದ ಇತಿಹಾಸ ಅರಿತು ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾಣೆ ಅವರು ಮಾತನಾಡಿ, ಆಸ್ಪತ್ರೆಯಲ್ಲಿ ಸುರಕ್ಷಿತ ಪರಿಸರ ನಿರ್ಮಾಣಕ್ಕೆ ವಿಶ್ವವಿದ್ಯಾಲಯವು ಆರ್ಥಿಕ ನೆರವು ನೀಡುತ್ತದೆ. ಶೀಘ್ರದಲ್ಲಿಯೇ ಎನ್ಎಬಿಹೆಚ್ ಮಾನ್ಯತೆ ಲಭಿಸಲಿದ್ದು, ಆಸ್ಪತ್ರೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಮತ್ತಷ್ಟು ಸುಧಾರಿಸಲು ಸಹಕರಿಸಿ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಮಾತನಾಡಿ, ನಮ್ಮ ಸೇವೆಯನ್ನು ಇನ್ನೂ ಉತ್ತಮಗೊಳಿಸಲು ಎಲ್ಲ ಸಿಬ್ಬಂದಿಗಳು ಸಾಕಷ್ಟು ಸಹಕರಿಸಬೇಕಾಗುತ್ತದೆ. ಅದರಿಂದ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸುಸ್ಥಿರ ಸಮತೋಲಿತ ಬೆಳವಣಿಗೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಆಶಯದಂತೆ ನಮ್ಮ ಸೇವೆಯನ್ನು ಇನ್ನೂ ಉತ್ತಮಗೊಳಿಸುತ್ತಾ, ನವ ಕರ್ನಾಟಕ, ನವಭಾರತ ಹಾಗೂ ಆಸ್ಪತ್ರೆಯನ್ನು ನವ ಆರೋಗ್ಯ ಧಾಮವನ್ನಾಗಿ ನಿರ್ಮಿಸೋಣ ಎಂದು ತಿಳಿಸಿದರು.
ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‌ಲೈನ್ ಹಾಗೂ ಫೋಕಸ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಡಿ ಪಾಟೀಲ, ಕಾಹೆರ ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ