Belagavi NewsBelgaum NewsKannada NewsKarnataka News

*ಸಚಿವರ ಬಳಿ ನಿಯೋಗ: ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ನಿರ್ಣಯ*

ಭೀಮಗಡ ವನ್ಯಧಾಮ ವ್ಯಾಪ್ತಿಯ ನಾಗರಿಕರ ಸ್ಥಳಾಂತರದ ಬಗ್ಗೆ ಚರ್ಚಿಸಲು ಅರಣ್ಯ ಸಚಿವರ ಬಳಿ ನಿಯೋಗ
ಖಾನಾಪುರದಲ್ಲಿ ನಡೆದ ಬಳಿ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಒಮ್ಮತದ ನಿರ್ಣಯ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಭೀಮಗಡ ವನ್ಯಧಾಮದಡಿ ಬರುವ ವಿವಿಧ ಗ್ರಾಮಗಳ ಸ್ಥಳಾಂತರದ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಅರಣ್ಯ ಸಚಿವರ ಬಳಿ ತಾಲ್ಲೂಕಿನ ಮುಖಂಡರ ನಿಯೋಗವನ್ನು ಕರೆದೊಯ್ಯುವ ನಿರ್ಣಯದೊಂದಿಗೆ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳ ಮುಖಂಡರ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಮುಕ್ತಾಯಗೊಂಡಿತು.

ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, “ಈಗಾಗಲೇ ನೂರಾರು ವರ್ಷಗಳಿಂದ ಅರಣ್ಯದ ನಡುವೆ ಇರುವವರಿಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಹಳಿಯಾಳ, ದಾಂಡೇಲಿ ತಾಲ್ಲೂಕಿನ ಅರಣ್ಯದೊಳಗಿನ ಗ್ರಾಮಗಳಿಗೆ ನೀಡಲಾದ ಮಾದರಿಯಲ್ಲಿ ಸವಲತ್ತುಗಳು ದೊರೆಯುವಂತೆ ಮಾಡಬೇಕು. ಉತ್ತರ ಕನ್ನಡದ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಆದರೆ ಭೀಮಗಡ ವನ್ಯಧಾಮದಲ್ಲೇಕೆ ನಡೆಯಲು ಅನುಮತಿ ನೀಡುವುದಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಬೇಕು. 1974ರಲ್ಲಿ ಹುಕ್ಕೇರಿ ತಾಲ್ಲೂಕಿನಿಂದ ನಮ್ಮ ತಾಲ್ಲೂಕಿಗೆ ಸ್ಥಳಾಂತರಗೊಂಡವರಿಗೆ ಇದುವರೆಗೂ ಅಗತ್ಯ ಸೌಲಭ್ಯಗಳು ಸಿಕ್ಕಿಲ್ಲ. ಮುಂದೆ ಭೀಮಗಡ ವನ್ಯಧಾಮದಿಂದ ಹೊರಬರುವವರ ಪರಿಸ್ಥಿತಿಯೂ ಹೀಗಾಗಬಾರದು ಎಂಬುದನ್ನು ಎಲ್ಲರೂ ಅರಿಯಬೇಕು” ಎಂದರು.

ಮಾಜಿ ಶಾಸಕ ದಿಗಂಬರ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ, ಎಂಇಎಸ್ ಮುಖಂಡ ಮುರಳಿಧರ ಪಾಟೀಲ ಮತ್ತಿತರರು ಮಾತನಾಡಿ, “ವನ್ಯಧಾಮದಲ್ಲಿ ಅಜ್ಜ ಮುತ್ತಜ್ಜರ ಕಾಲದಿಂದಲೂ ಇರುವ ತಮ್ಮ ಹೊಲ-ಮನೆಗಳನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿ ಹೊರಬರುವವರಿಗೆ ಸರ್ಕಾರದಿಂದ ಯಾವೆಲ್ಲ ಸವಲತ್ತುಗಳು ದೊರೆಯಲಿವೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ಬಳಿಕವೇ ಸ್ಥಳಾಂತರದ ನಿರ್ಧಾರದ ಬಗ್ಗೆ ಯೋಚನೆ ಮಾಡಬೇಕು, ಸ್ಥಳಾಂತರಗೊಳ್ಳುವವರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳು ದೊರೆಯಬೇಕು. ಈ ಕುರಿತು ನಮ್ಮ ಶಾಸಕರು ಮತ್ತು ಸಂಸದರು ಸ್ಥಳಾಂತರಕ್ಕೆ ಗುರುಸಿರುವ ಗ್ರಾಮಗಳ ಪ್ರಮುಖರು ಮತ್ತು ತಾಲ್ಲೂಕಿನ ಮುಖಂಡರ ನಿಯೋಗ ಕೊಂಡೊಯ್ದು ಸಚಿವರ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಬೇಕು” ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ಅಭಯಾರಣ್ಯದಿಂದ ಮುಖ್ಯವಾಹಿನಿಗೆ ಬರಲು ಇಚ್ಛಿಸುವ ಕಾನನವಾಸಿಗಳಿಗೆ ಸರ್ಕಾರದಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಭೀಮಗಡ ವನ್ಯಧಾಮದ ಜನತೆಯ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಮಾಹಿತಿ ಕ್ರೋಢೀಕರಿಸಲು ಈ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಭಾಗವಹಿಸಿದ್ದ ವನ್ಯಧಾಮ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು, ತಾಲ್ಲೂಕಿನ ವಿವಿಧ ಪಕ್ಷಗಳು ಮತ್ತು ಕ್ಷೇತ್ರಗಳ ಗಣ್ಯರು ಸ್ಥಳಾಂತರಕ್ಕೆ ಒಪ್ಪುವ ಗ್ರಾಮಸ್ಥರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು, ಸ್ಥಳಾಂತರಕ್ಕೆ ಒಪ್ಪದವರ ಗ್ರಾಮಗಳಿಗೆ ರಸ್ತೆ, ಸೇತುವೆ ಒದಗಿಸುವ ಬಗ್ಗೆ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದ್ದಾರೆ. ಭೀಮಗಡ ವನ್ಯಧಾಮದ ಜನತೆಯ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಆಯೋಜಿಸಿದ ಚೊಚ್ಚಲ ಸಭೆ ಫಲಪ್ರದವಾಗಿದೆ. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ” ಎಂದು ವಿವರಿಸಿದರು.

ಸಭೆಯಲ್ಲಿ ತಾಲ್ಲೂಕಿನ ಹಾಲಿ, ಮಾಜಿ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಭೀಮಗಡ ವನ್ಯಧಾಮ ವ್ಯಾಪ್ತಿಯ ವಿವಿಧ ಗ್ರಾಮಗಳ ಪ್ರಮುಖರು, ಹಿರಿಯರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ವಾಸುದೇವ ಚೌಗುಲೆ ಸಭೆಯ ಕಾರ್ಯಕಲಾಪ ನಿರ್ವಹಿಸಿದರು. ಬಾಳಾಸಾಹೇಬ ಶೇಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಮಾರಿಹಾಳ ವಂದಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button