ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪೈಪ್ ಲೈನ್ ಗ್ಯಾಸ್ ಬಂದ್ ಆಗಿದ್ದರಿಂದ ಬೆಳಗಾವಿಯ ಕೆಲವು ಪ್ರದೇಶಗಳಲ್ಲಿ ಶುಕ್ರವಾರ 3 ಗಂಟೆಗಳ ಕಾಲ ಅಡುಗೆ ಮನೆಗಳು ಬಂದ್ ಆಗಿದ್ದವು.
ಮನೆ ಮನೆಗೆ ಗ್ಯಾಸ್ ಪೂರೈಕೆ ಮಾಡುವ ಪೈಪ್ ಲೈನ್ ಲೀಕೇಜ್ ಆಗಿದ್ದರಿಂದ ಅದರೂ ಮೂಲಕ ಗ್ಯಾಸ್ ಪೂರೈಕೆಯಾಗುವ ಪ್ರದೇಶಗಳಿಗೆ ಮಧ್ಯಾಹ್ನ 2.30ರಿಂದ ಗ್ಯಾಸ್ ಪೂರೈಕೆ ಸ್ಥಗಿತವಾಗಿತ್ತು.
ಮೆಗಾ ಗ್ಯಾಸ್ ಕಚೇರಿ ಮೂಲಗಳ ಪ್ರಕಾರ, ಮಧ್ಯಾಹ್ನ 2.30ಕ್ಕೆ ರಾಣಿ ಚನ್ನಮ್ಮ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಗ್ಯಾಸ್ ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಲೀಕೇಜ್ ಆಗಿತ್ತು. ಹಾಗಾಗಿ ಆ ಪ್ರದೇಶದಲ್ಲಿ ಗ್ಯಾಸ್ ಸರಬರಾಜು ಸ್ಥಗಿತವಾಗಿತ್ತು. ನಂತರ ಕೆಲ ಗಂಟೆಗಳಲ್ಲಿ ದುರಸ್ತಿ ಮಾಡಿದ್ದು, ಸಂಜೆ 5.30ರ ಹೊತ್ತಿಗೆ ಸರಬರಾಜು ಪುನಾರಂಭಗೊಂಡಿದೆ.
ಗ್ಯಾಸ್ ಸರಬರಾಜು ಬಂದ್ ಆಗಿದ್ದರಿಂದ ಆ ಪ್ರದೇಶಗಳಲ್ಲಿ ಸುಮಾರು 3 ಗಂಟೆಗಳ ಕಾಲ ಅಡುಗೆ ಮನೆಗಳು ಸ್ಥಗಿತವಾಗಿದ್ದವು. ಶ್ರಾವಣ ಶುಕ್ರವಾರದ ಪೂಜೆ ತಯಾರಿಯಲ್ಲಿ ತೊಡಗಿದ್ದವರು, ಮಧ್ಯಾಹ್ನದ ಚಹಾ ಕುಡಿಯುವ ರೂಢಿ ಹೊಂದಿರುವವರು, ಅಲ್ಲದೆ ಕೆಲವು ವಾಣಿಜ್ಯ ಬಳಕೆದಾರರು ಪರದಾಟ ಅನುಭವಿಸಿದವರು. ಬೆಳಗಿನ ವೇಳೆಯಲ್ಲಿ ಇಂತಹ ಸಂದರ್ಭ ಎದುರಾದರೆ ಜನರು ತೀವ್ರ ಪರದಾಟ ಅನುಭವಿಸಬೇಕಾಗುತ್ತಿತ್ತು.
ಬಿಲ್ ಕಡಿಮೆ ಮಾಡದ ಮೆಗಾ ಗ್ಯಾಸ್:
ಗ್ಯಾಸ್ ದರ ಹೆಚ್ಚಳವಾದಾಗ ಏರಿಕೆ ಮಾಡುವ ಮೇಗಾ ಗ್ಯಾಸ್ ನವರು ಗ್ಯಾಸ್ ದರ ಇಳಿಕೆಯಾದಾಗ ಕಡಿಮೆ ಮಾಡುವುದಿಲ್ಲ ಎನ್ನುವ ಗಂಭೀರ ಆರೋಪವಿದೆ.
ಗ್ಯಾಸ್ ದರ 1200 ರೂ. ಗೆ ಏರಿದಾಗ ಏರಿಕೆ ಮಾಡಿದ್ದವರು ಈಗ 800 ರೂ. ಗೆ ಇಳಿಕೆಯಾದರೂ ದರ ಇಳಿಕೆ ಮಾಡಿಲ್ಲ ಎನ್ನುವ ಆರೋಪವಿದೆ. ಬೆಳಗಾವಿಯ ಸ್ಥಳೀಯ ಆಡಳಿತ ಅವರ ಮೇಲೆ ನಿಯಂತ್ರಣ ಸಾಧಿಸಿ, ದರ ಕಡಿಮೆಯಾದಾಗ ಇಳಿಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಇಲ್ಲವಾದಲ್ಲಿ ಗ್ರಾಹಕರ ಸುಲಿಗೆಯಾಗಲಿದೆ ಎನ್ನುವುದು ಮೆಗಾ ಗ್ಯಾಸ್ ಬಳಕೆದಾರರ ಅಳಲಾಗಿದೆ.
ಆರಂಭದಲ್ಲಿ ಕೈಗೆಟಕುವ ದರದಲ್ಲಿ ಅಡುಗೆ ಅನಿಲ ಪೂರೈಸಿ ಆಕರ್ಷಿಸಿದ್ದ ಮೆಗಾ ಗ್ಯಾಸ್, ಈಗ ಸದ್ದಿಲ್ಲದೇ ಗ್ರಾಹಕರ ಸುಲಿಗೆಗೆ ಇಳಿದಿದೆ. ಮನಸೋ ಇಚ್ಛೆ ದರ ಏರಿಕೆ ಮಾಡಿದೆ.
ಕರ್ನಾಟಕ ಸೇರಿದಂತೆ ದೇಶದಲ್ಲಿ 10 ರಾಜ್ಯಗಳ 62 ನಗರಗಳಲ್ಲಿ ಮೆಗಾ ಗ್ಯಾಸ್ ಸಂಪರ್ಕವಿದೆ. ರಾಜ್ಯದಲ್ಲಿ ತುಮಕೂರು, ಬೆಳಗಾವಿ, ಯಾದಗಿರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮನೆಮನೆಗೆ ಪೈಪ್ ಲೈನ್ ಮೂಲಕ ನೈಸರ್ಗಿಕ ಅಡುಗೆ ಅನಿಲ ಪೂರೈಕೆ ಆಗುತ್ತಿದೆ. ಮೆಗಾ ಗ್ಯಾಸ್ ಎಂಬ ಈ ಖಾಸಗಿ ಕಂಪನಿಯು 2015ರಲ್ಲಿ ಆಂಧ್ರ ಪ್ರದೇಶದ ಕೃಷ್ಣ ಮತ್ತು ಕರ್ನಾಟಕದ ತುಮಕೂರು ಮತ್ತು ಬೆಳಗಾವಿಯಲ್ಲಿ ಮನೆಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಿತು. ಆ ವೇಳೆ ಯೂನಿಟ್‌ಗೆ 25 ರೂ. ಇತ್ತು. ಆರೇಳು ವರ್ಷದ ಅವಧಿಯಲ್ಲಿ ಎರಡರಷ್ಟು ದರ ಏರಿಕೆಯಾಗಿದೆ.
ಮೆಗಾ ಗ್ಯಾಸ್ ಸೇವೆ ಕಡಿಮೆ ದರದಲ್ಲಿ ಗ್ರಾಹಕರಿಗೆ ಅಡುಗೆ ಅನಿಲ ಪೂರೈಸುವ ಭರವಸೆಯೊಂದಿಗೆ ಆರಂಭವಾಯಿತು. ಜತೆಗೆ ಸುರಕ್ಷತೆ ಇರುವುದರಿಂದ ಸೇವೆ ಲಭ್ಯವಿರುವ ನಗರದಲ್ಲಿ ಗ್ರಾಹಕರು ಸೇವೆ ಕಲ್ಪಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿದರು. ಬಹುತೇಕ ಸಂಪರ್ಕ ಸಾಧ್ಯವಾದ ಬಳಿಕ ಕಂಪನಿ ತನ್ನ ವರಸೆ ಬದಲಿಸಿದೆ ಎನ್ನುವ ದೂರುಗಳಿವೆ.
ಈ ಬಗ್ಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ದರ ಇಳಿಸಲು ಕ್ರಮ ತೆಗೆದುಕೊಳ್ಳಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ