ಜಯಶ್ರೀ ಜೆ. ಅಬ್ಬಿಗೇರಿ ಬೆಳಗಾವಿ
ಅನುಭವ ಇಲ್ಲ ಎಂದರೆ ಕೆಲಸ ಇಲ್ಲ. ಎನ್ನುವ ಮಾತು ನಮ್ಮಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತದೆ. ಎಲ್ಲ ಉದ್ಯೋಗಗಳಿಗೂ ಅನುಭವ ಕೇಳಲಾಗುತ್ತದೆ. ಹೊಸಬರಿಗೆ ಮಣೆ ಹಾಕುವುದು ಕಮ್ಮಿ. ಉದ್ಯೋಗ ನೀಡುವವರು ಕೆಲಸ ಕೊಡದೆ ಅನುಭವ ಕೇಳುತ್ತ ಹೋದರೆ ನಮಗೆ ಅನುಭವವಾಗುವುದಾದರೂ ಯಾವಾಗ? ಕೆಲಸ ಸಿಗುವುದಾದರೂ ಯಾವಾಗ? ಎಂಬುದು ನಿರುದ್ಯೋಗಿಗಳ ಗೋಳು.
ಅನುಭವವಿಲ್ಲದೇ ಕೆಲಸ ಇಲ್ಲ. ಕೆಲಸವಿಲ್ಲದೇ ಅನುಭವವಿಲ್ಲ ಎಂಬುದು ಹುಚ್ಚು ಬಿಡದೆ ಮದುವೆಯಾಗಲ್ಲ. ಮದುವೆಯಾಗದೆ ಹುಚ್ಚು ಬಿಡಲ್ಲ ಅನ್ನೋ ಕತೆ ತರ ಅಲ್ಲವೇ? ಅರಿಯುವ ಮುನ್ನ ಯಾವುದೇ ಸಣ್ಣ ಕೆಲಸವೂ ದೊಡ್ಡದೆನಿಸುವುದು. ಅನುಭವ ಪಡೆದ ಮೇಲೆ ದೊಡ್ಡ ಪ್ರಮಾಣದ ಕೆಲಸವೂ ಚಿಕ್ಕದಾಗಿ ಕಾಣುವುದು. ಅಂದರೆ ಅನುಭವ ನಮಗೆ ಗೊತ್ತಿಲ್ಲದಂತೆ ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ ಅಂದ್ಹಂಗಾಯ್ತು. ಸುಭಾಷಿತದ ಪ್ರಕಾರ ಅನುಭವವು ಮನುಷ್ಯನ ಮುಂದಿನ ಮಾರ್ಗಕ್ಕೆ ಬೆಳಕಿದ್ದಂತೆ.
ಅನುಭವ ಶ್ರೇಷ್ಠ ಶಿಕ್ಷಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಕತ್ತಲೆಯ ದಾರಿಗೆ ಬೆಳಕಾಗಿ ಬರುವುದೇ ಅನುಭವ. ಕಂಗಾಲಾಗಿ ನಿಂತಿರುವಾಗ ಕೈ ಹಿಡಿಯುತ್ತದೆ. ನಮ್ಮೊಂದಿಗೆ ತಾನೂ ಹೆಜ್ಜೆ ಹಾಕಿ ನಮ್ಮ ವಿಶ್ವಾಸ ಹೆಚ್ಚಿಸುತ್ತದೆ. ಕಾಯಿಗೆ ರುಚಿಯನ್ನು ಬೆರೆಸುತ್ತದೆ. ಪಕ್ವತೆಯನ್ನು ತುಂಬುತ್ತದೆ. ಸಿಹಿ ಹಣ್ಣಾಗಿ ಬದಲಾಗುವುದಕ್ಕೆ ಕೈ ಜೋಡಿಸುತ್ತದೆ.
ಅಧೀರರನ್ನಾಗಿಸುತ್ತದೆ
ಅನನುಭವವು ಎಂಥವರನ್ನೂ ಅಧೀರರನ್ನಾಗಿಸುತ್ತದೆ ಎಂಬುದು ನಮಗೆಲ್ಲ ಚೆನ್ನಾಗಿ ಗೊತ್ತು. ಜೀವನದ ಹೋರಾಟಗಳು ಯಾವಾಗಲೂ ಬುದ್ಧಿವಂತರಿಗೆ ಶಕ್ತಿವಂತರಿಗೆ ಮಾತ್ರವೇ ಅಲ್ಲ ಅನುಭವಿಕರಿಗೂ ಬರುತ್ತವೆ. ಮನಸ್ಸಿನ ಅನುಭವಸ್ಥ ಸ್ಥಿತಿ ಅಸಾಧ್ಯವೆನಿಸುವ ಕನಸುಗಳನ್ನೂ ನನಸಾಗಿಸುವ ತಾಕತ್ತು ತುಂಬುತ್ತದೆ. ಕುಂಟರಾದವರೊಡನೆ ವಾಸಿಸುತ್ತಿದ್ದರೆ ನಾವೂ ಕುಂಟುತ್ತೇವೆ.
ಅಂತೆಯೇ ಅನುಭವಸ್ಥರೊಂದಿಗಿನ ಸಹವಾಸ, ಬುದ್ಧಿವಾದದ ಮಾತುಗಳು ಮಾನಸಿಕ ಬಲವನ್ನು ಅಧಿಕಗೊಳಿಸುತ್ತವೆ. ಜೊತೆಗೆ ನಮ್ಮ ವರ್ತನೆಯಲ್ಲಿ ಅಗಾಧವೆನಿಸುವಷ್ಟು ಪರಿವರ್ತನೆ ತರುತ್ತವೆ. ಅನುಭವವು ನಮ್ಮ ಮೇಲೆ ನಮಗೆ ಪ್ರಭುತ್ವವನ್ನು ಹೊಂದುವ ಹಾಗೆ ಮಾಡುತ್ತದೆ. ಸ್ವತಂತ್ರನಾಗುವ ಕಲೆಯನ್ನೂ ಕಲಿಸುತ್ತದೆ. ಇದನ್ನೇ ಎಪಿಕ್ವೆಟಿಸ್ ಹೀಗೆ ಹೇಳಿದ್ದಾನೆ -’ಯಾರು ತನ್ನ ಮೇಲೆ ಪ್ರಭುತ್ವ ಹೊಂದಿಲ್ಲವೋ ಅವನು ಸ್ವತಂತ್ರನಾಗಲಾರ.
ಸಾವನ್ನು ಗೆಲ್ಲಲಾಗಲಿಲ್ಲ
ವಾಸ್ತವಿಕ ಜೀವನದಲ್ಲಿ ಅನುಭವವೊಂದೇ ಎಲ್ಲವನ್ನೂ ಗೆಲ್ಲಿಸಿಕೊಡುತ್ತದೆ ಎನ್ನುವುದೂ ವಾಸ್ತವಿಕ ಅಂಶವಲ್ಲ. ಅಲೆಗ್ಝಾಂಡರನಿಗೆ ಎಷ್ಟೆಲ್ಲ ಗೆದ್ದ ಅನುಭವವಿದ್ದರೂ ಸಾವನ್ನು ಗೆಲ್ಲಲಾಗಲಿಲ್ಲ. ಬದುಕು ಎಂದ ಮೇಲೆ ಜಮಾ ಖರ್ಚು ಎರಡೂ ಇದ್ದದ್ದೇ. ಜೀವನ ಹೆಚ್ಚು ಕಡಿಮೆಯಾಗಿ ಹೊಯ್ದಾಡುವಾಗ ತಕ್ಕಡಿಯ ಮುಳ್ಳಿನಂತೆ ಸರಿದೂಗಿಸುವ ಕೆಲಸ ನಿರ್ವಹಿಸುವುದೇ ಅನುಭವ.
ಅನುಭವಗಳೆಲ್ಲ ಬರೀ ಸವಿಯಾಗಿರಬೇಕು ಸುಖದಾಯಕವಾಗಿರಬೇಕು ಎಂದು ಅಪೇಕ್ಷಿಸುವುದು ತಪ್ಪು. ಸಿಹಿಯಾಗಿ ನಗುವ ಅನುಭವ ಪಡೆಯುತ್ತಿರುವಾಗಲೇ ಹಟಾತ್ತನೇ ದುಃಖದ ಬರಸಿಡಿಲಿನ ಅನುಭವ ನುಸುಳುತ್ತದೆ. ಕೆಲವೊಮ್ಮೆ ಸಂತಸದ ಅನುಭವಗಳು ಕೈತಪ್ಪಿ ಕಲಹದ ಎಳೆಗಳಿರುವ ಅನುಭವ ಗೋಚರಿಸುವುದೂ ಉಂಟು.
ಇಂಥ ಸಂದರ್ಭದಲ್ಲಿ ಸರಕ್ಕನೆ ಸಕ್ಕರೆಯಂಥ ಅನುಭವಗಳನ್ನು ಸಾಲಾಗಿ ತಂದು ನಿಲ್ಲಿಸಿ ಮತ್ತೊಮ್ಮೆ ಅನುಭವಿಸುವುದು ಸೂಕ್ತ. ಅನುಭವವೆನ್ನುವುದು ಬಾವಿಯಲ್ಲಿ ತೇಲಿ ಬಿಟ್ಟ ಕೊಡದಂತೆ. ಪ್ರಯತ್ನವೆಂಬ ಹಗ್ಗದಿಂದ ಹಿತಮಿತವಾಗಿ ಎಳೆದಾಡಿದಷ್ಟು ತುಂಬಿಕೊಳ್ಳುತ್ತದೆ. ಪ್ರಯತ್ನ ಕಡಿಮೆಯಾದರೆ ಅನುಭವದ ಕೊಡ ತುಂಬದೇ ಬರೀ ಸದ್ದು ಮಾಡುತ್ತದೆ.
ಉದ್ಯೋಗಕ್ಕಷ್ಟೇ ಅಲ್ಲ
ಅನುಭವ ಹಲವಾರು ಸಂಗತಿಗಳನ್ನು ನಮ್ಮ ಮುಂದೆ ತಂದು ಹರವುತ್ತದೆ. ವ್ಯಕ್ತಿತ್ವ ವಿಕಾಸದ ಕುರಿತು ಗಂಭಿರವಾಗಿ ಯೋಚಿಸುವಂತೆ ಮಾಡುತ್ತದೆ. ಉದ್ಯೋಗಕ್ಕಷ್ಟೇ ಅಲ್ಲ ವ್ಯಕ್ತಿತ್ವದ ಸಬಲೀಕರಣಕ್ಕೂ ಬೇಕು ಎನ್ನುವ ಸತ್ಯ ಕಾಲ ಕಳೆದಂತೆ ಮನದಟ್ಟಾಗುತ್ತದೆ. ಅನುಭವವೆಂಬ ಬಂಗಾರದ ಜಿಂಕೆ ಹಿಡಿಯಲು ಅಹಂಕಾರವನ್ನು ಹತ್ತಿಕ್ಕಿ ಮೆತ್ತಗಾಗಿಸಬೇಕು.
ಶ್ರದ್ಧೆ ಶ್ರಮಗಳೆಂಬ ಅಸ್ತ್ರಗಳೂ ಬೇಕು. ಅತ್ಯಧಿಕ ಪ್ರಭಾವ ಬೀರಿದ ಅನುಭವವೇ ಪರಮ ಸತ್ಯ. ಅದೇ ಶಾಶ್ವತ ಎಂದು ನಂಬುವುದೂ ತಪ್ಪು. ಕುಸ್ತಿಪಟುವೊಬ್ಬ ಎದುರಾಳಿಗಳನ್ನೆಲ್ಲ ಮಣ್ಣು ಮುಕ್ಕಿಸಿದ್ದ. ಇನ್ನು ತನ್ನನ್ನು ಯಾರೂ ಸೋಲಿಸಲಾರರು. ತಾನೊಬ್ಬನೇ ಅನುಭವಿ ನುರಿತ ಕುಸ್ತಿಪಟು ಎಂದು ಎಲ್ಲರ ಮುಂದೆ ದುರಹಂಕಾರದಿಂದ ಮೆರೆಯತೊಡಗಿದ್ದ. ಕೆಲವು ವರ್ಷಗಳಲ್ಲಿ ಮುಪ್ಪು ಆವರಿಸಿತು. ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂತು. ಆಗ ಕುಸ್ತಿಪಟು ಹೇಳಿದ- ’ನಾನು ಪಡೆದ ಅನುಭವವೇ ಪರಮ ಸತ್ಯವಾದದು ಶಾಶ್ವತವಾದುದು ಎಂದು ತಿಳಿದಿದ್ದು ತಪ್ಪಾಯಿತು.’
ಬದುಕು ಮತ್ತು ಅನುಭವಗಳ ನಡುವೆ ಅನನ್ಯ ಮೈತ್ರಿಯಿದೆ. ನೆಮ್ಮದಿಯ ಅನುಭವಗಳಿಗೆ ಉತ್ತಮ ಸಾಧನವೆಂದರೆ ನಮ್ಮೊಳಗೇ ಇರುವ ಮನಸ್ಸು. ಯೋಗ್ಯ ಅನುಭವವಿಲ್ಲದ ಬದುಕು ಒಮ್ಮಿಂದೊಮ್ಮೆಲೆ ದಾಳಿಯಿಟ್ಟು ಹುಯಿಲೆಬ್ಬಿಸುತ್ತದೆ ಎಂಬ ಆರೋಪ ಹೊರಿಸದೇ, ಮನಸ್ಸನ್ನು ನಿರ್ಮಲವಾಗಿಸಿಕೊಂಡು ಅನುಭವಗಳ ಅಲೆಯಲ್ಲಿ ಬದುಕನ್ನು ನೆಮ್ಮದಿಯ ದಡಕ್ಕೆ ತಲುಪಿಸೋಣ.
ಬದುಕಿನ ಚೆಂದದ ತೋಟದಲಿ ಸಂಬಂಧಗಳೆಂಬ ಸುಂದರ ಹೂವುಗಳು ಅರಳಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ