LatestWorld

*ನ್ಯೂಜೆರ್ಸಿಯ ಆದಿ ಚುಂಚನಗಿರಿ ಮಠಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ*

ಪ್ರಗತಿವಾಹಿನಿ ಸುದ್ದಿ: ನ್ಯೂಜೆರ್ಸಿಯ ಫ್ರಾಂಕ್ಲಿನ್ ಟೌನ್ ಶಿಪ್ ನಲ್ಲಿ 20 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆದಿ ಚುಂಚನಗಿರಿ ಮಠಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದರು. ಈ ವೇಳೆ ವಿಡಿಯೋ ಸಂದೇಶದ ಮೂಲಕ ಕನ್ನಡಿಗರು ಮತ್ತು ಆದಿಚುಂಚನಗಿರಿ ಶ್ರೀಮಠದ ಭಕ್ತರಲ್ಲಿ ಭೈರವನಾಥ ಪೀಠ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

“ಬಾಲಗಂಗಾಧರನಾಥ ಸ್ವಾಮೀಜಿಯವರು ನ್ಯೂಜೆರ್ಸಿಯಲ್ಲಿ ಸ್ಥಾಪನೆ ಮಾಡಿರುವ ಗುರುಪೀಠ ನಮ್ಮ ಹಾಗೂ ನಿಮ್ಮ ಗುರುಪೀಠ. ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂದು ಬುದ್ದಿಮಾತು ಹೇಳುತ್ತಾ ಇದ್ದರು. ಮನುಷ್ಯನಿಗೆ ನೆಮ್ಮದಿ ನೀಡುವ ಜಾಗವೇ ದೇವಾಲಯ.

ಭಕ್ತ ಹಾಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳವೇ ದೇವಾಲಯ. ಮನುಷ್ಯನ ಜೀವ ಮತ್ತು ಜೀವನ ಸಂತೋಷದಿಂದ ಕೂಡಿರಬೇಕು. ನಗು, ನಗುತ್ತಾ ಬಾಳಬೇಕು. ನಗುವು ಸಹಜದ ಧರ್ಮ, ನಗಿಸುವುದೇ ಪರಧರ್ಮ, ನಗಿಸಿ, ನಗುತಾ ಬಾಳುವ ವರವ ಬೇಡಿಕೊಳೋ ಮಂಕುತಿಮ್ಮ ಎನ್ನುವ ಮಾತಿನಂತೆ ನಾವುಗಳು ನೆಮ್ಮದಿಯಿಂದ ಇರಲು ಒಂದು ಜಾಗ ಬೇಕಾಗಿದೆ. ಅದುವೇ ನಮ್ಮ, ನಿಮ್ಮ ಮಠ.

ನಾನು ಈ ಹಿಂದೆ ಮಹಾರಾಷ್ಟ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಯವರು ಸ್ಥಾಪನೆ ಮಾಡಿದ್ದ ಭೈರವನಾಥ ದೇವಾಲಯಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಶಕ್ತಿಶಾಲಿಯಾದ ದೇವರ ದೇವಸ್ಥಾನವನ್ನು ನ್ಯೂಜೆರ್ಸಿಯಲ್ಲಿ ಸ್ಥಾಪನೆ ಮಾಡಲು ಅಮೆರಿಕಾ ಸರ್ಕಾರ ಅನುಮತಿ ನೀಡಿರುವುದೇ ಒಂದು ವಿಸ್ಮಯ. ನಾವೆಲ್ಲರೂ ಈ ವಿಸ್ಮಯಕ್ಕೆ ಸಾಕ್ಷಿಗಳಾಗುತ್ತಿದ್ದೇವೆ.

ಹುಟ್ಟು ಸಾವಿನ ಮಧ್ಯೆ ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ. ಸಾಗರ ದಾಟಿ ಇಲ್ಲಿಗೆ ಬಂದು ಅನೇಕರು ಬೆಳೆಯುತ್ತಾ ಇದ್ದಾರೆ. ನಾವೆಲ್ಲ ಸೇರಿ ಇಲ್ಲಿ ಒಂದು ಮೈಲಿಗಲ್ಲನ್ನು ಬಿಟ್ಟುಹೋಗಬೇಕು. ಕೈಲಾದಷ್ಟು ಸಣ್ಣ ಕೊಡುಗೆಯನ್ನು ಕೊಡಬೇಕು. ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವ ಕೆಲಸವನ್ನು ನಾವು ಮಾಡಬೇಕು. ನಾನು ಸಹ ಕೊಡುಗೆಯನ್ನು ಕೊಟ್ಟಿದ್ದೇನೆ.

ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕನಸು ಈಡೇರುತ್ತಿದೆ. ಈ ಹಿಂದೆ ಇದರ ಶಂಕುಸ್ಥಾಪನೆ ಸಮಾರಂಭಕ್ಕೆ ನನ್ನನ್ನು ಆಹ್ವಾನ ಮಾಡಿದ್ದರು. ಆ ವೇಳೆಯಲ್ಲಿ ಸರ್ಕಾರ ಸಂಕಷ್ಟದ ಸಮಯದಲ್ಲಿತ್ತು. ಈ ಪೀಠವನ್ನು ಕಂಡು ನನಗೆ ಸಂತೋಷವಾಗಿದೆ. ಎಲ್ಲರೂ ಸಮಯಕ್ಕೆ ಸರಿಯಾಗಿ ಹಣ ಸಹಾಯ ಮಾಡಿ ಕೈ ಜೋಡಿಸಬೇಕು. ಎರಡು ಕೈ ಜೋಡಿಸಿದರೆ ಮಾತ್ರ ಚಪ್ಪಾಳೆ ಸಾಧ್ಯ. ನಾವೆಲ್ಲರೂ ಸೇರಿ ಯಶಸ್ಸಿನ ಚಪ್ಪಾಳೆಗೆ ಕೈಜೋಡಿಸಲು ಪ್ರಾರ್ಥಿಸುತ್ತೇನೆ” ಎಂದು ಡಿಸಿಎಂ ಅವರು ಮನವಿ ಮಾಡಿದ್ದಾರೆ.

ಯೋಜನೆಯ ಚೀಫ್ ಆರ್ಕಿಟೆಕ್ಟ್ ಡಾ. ಬಾಬು ಕೀಲಾರ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಠದ ನಿರ್ಮಾಣ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ಮಠವು ಕರ್ನಾಟಕದ ಆಧ್ಯಾತ್ಮಿಕ ಸಂಪ್ರದಾಯವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ಸಮುದಾಯವನ್ನು ಬೆಸೆಯುವ ಪ್ರಯತ್ನ ನಡೆಸಲಾಗುತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಿದ್ಧಾಂತಗಳ ಪ್ರತೀಕವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆಧ್ಯಾತ್ಮದ ಪರಂಪರೆಯನ್ನು ರಕ್ಷಿಸಿ, ಉತ್ತೇಜನ ನೀಡಲು ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಪ್ರಗತಿ ಸಾಧಿಸುತ್ತಿದೆ.

ದಕ್ಷಿಣ ಭಾರತದ ದೇವಾಲಯಗಳ ವಾಸ್ತು ಶಿಲ್ಪವಾಗಿರುವ ಆಗಮ ಶಾಸ್ತ್ರದಂತೆ ಈ ಮಠವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಮಠದ ವಿನ್ಯಾಸವನ್ನು ಖ್ಯಾತ ವಾಸ್ತುಶಿಲ್ಪಿ ಡಾ. ಬಾಬು ಕೀಲಾರ ಅವರು ರೂಪಿಸಿದ್ದಾರೆ. ಇವರು ಅಮೆರಿಕದಲ್ಲಿ ಜಿಎಸ್ಎಸ್ ಆಶ್ರಮ, ಜೆಯರ್ ಆಶ್ರಮ, ಚಿನ್ಮಯ್ ಮಿಷನ್ ಹಾಗೂ ಆರ್ಟ್ ಆಫ್ ಲಿವಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದಾರೆ.

ಡಾ. ಕೀಲಾರ ಅವರು ಆದಿ ಚುಂಚನಗಿರಿ ಮಠದ ನಿರ್ಮಾಣದಲ್ಲಿ ಅತ್ಯಂತ ಮುತುವರ್ಜಿ ವಹಿಸಿದ್ದು, ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪದಂತೆ ವಿನ್ಯಾಸ ಮಾಡಲಾಗಿದೆ. ಈ ಮಠದ ನಿರ್ಮಾಣಕ್ಕೆ ಸಮುದಾಯದ ಸ್ಥಳೀಯರು ಕೊಡುಗೆ ನೀಡಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಒಗ್ಗಟ್ಟಾಗಿ ಬದ್ಧತೆ ಪ್ರದರ್ಶಿಸಲಾಗುತ್ತಿದ್ದಾರೆ. ಆದಿ ಚುಂಚನಗಿರಿ ಸ್ಥಳೀಯ ಮಠದ ಶ್ರೀ ಶ್ರೀಶೈಲನಾಥ ಸ್ವಾಮೀಜಿ, ದಯಾಶಂಕರ್ ಆಡಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button