ಪ್ರಗತಿವಾಹಿನಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ 10 ವರ್ಷಗಳಲ್ಲಿ 77 ಮಹಿಳೆಯರಿಗೆ ವಂಚಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದ ದುಷ್ಕರ್ಮಿಯನ್ನು ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಒರಿಸ್ಸಾದ ಅಂಗುಲ್ ಜಿಲ್ಲೆಯ ಚೆಂಡಿಪಾಡಾ ಮೂಲದ ಬಿರಂಚಿ ನಾರಾಯಣನಾಥ್ ಎಂದು ಗುರುತಿಸಲಾಗಿದೆ. ಆರೋಪಿ ಸುಮಾರು 7 ರಾಜ್ಯಗಳಲ್ಲಿ ಮಹಿಳೆಯನ್ನು ವಂಚಿಸಿದ್ದಾನೆ. ಆತನ ಮೊಬೈಲ್‌ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಯು ಮಹಿಳೆಯರೊಂದಿಗೆ ನಿಕಟವಾಗಿ ತೆಗೆದುಕೊಂಡಿರುವ 300ಕ್ಕೂ ಹೆಚ್ಚು ಫೋಟೋಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಬಿರಂಚಿ 2013ರಿಂದಲೂ ಇಂತಹ ವಂಚನೆಗಳನ್ನು ಮಾಡುತ್ತಿದ್ದಾನೆ. ಒರಿಸ್ಸಾ ಮಾತ್ರವಲ್ಲದೆ ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಹಾಗೂ ದೆಹಲಿಯಲ್ಲಿ ಮಹಿಳೆಯರಿಗೆ ವಂಚಿಸಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಾಲ್ಕು ಭಾಷೆಗಳಲ್ಲಿ ಸ್ಪಷ್ಟ ಮತ್ತು ನಿರರ್ಗಳವಾಗಿ ಮಾತನಾಡುವ ಆರೋಪಿ, ವಿವಾಹ ಸಂಬಂಧಿತ ಸೈಟ್‌ಗಳಲ್ಲಿ ಮಧ್ಯವಯಸ್ಸಿನ ಮಹಿಳೆಯರು, ವಿಚ್ಛೇದನ ಪಡೆದ ಮಹಿಳೆಯರು ಹಾಗೂ ವಿಧವೆಯನ್ನು ಗುರಿಯಾಗಿಸಿಕೊಂಡಿದ್ದ. ಅವರನ್ನು ಪರಿಚಯ ಮಾಡಿಕೊಂಡು, ಸಲುಗೆ ಬೆಳೆಸಿ, ವಿವಾಹವಾಗುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ