Belagavi NewsBelgaum NewsEducationLatest

*ಪ್ರೇಮಾತಾಯಿ ಪಿಕಳೆಯವರ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಡಾ.ಪ್ರಭಾಕರ ಕೋರೆ*

BEd ಕಾಲೇಜಿಗೆ ಶೇಷಗಿರಿ ಪಿಕಳೆ ಹೆಸರು, ನರ್ಸಿಂಗ್ ಕಾಲೇಜಿಗೆ ಪ್ರೇಮಾ ಪಿಕಳೆ ಹೆಸರು

ಪ್ರಗತಿವಾಹಿನಿ ಸುದ್ದಿ; ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾದ ಶೇಷಗಿರಿ ಪಿಕಳೆ ಹಾಗೂ ಅವರ ಧರ್ಮಪತ್ನಿ ಪ್ರೇಮಾ ಪಿಕಳೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸಂಸ್ಥೆ ಸದಾ ಸ್ಮರಿಸುತ್ತದೆ. ತಮ್ಮ ಬದುಕನ್ನು ಸವಿಸಿ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಸಂಸ್ಥೆಯನ್ನು ಬೆಳೆಸಲು ಅಹರ್ನಿಶ ಶ್ರಮಿಸಿದ್ದು ಸ್ಮರಿಸಿ ಕೆ.ಎಲ್. ಇ ಸಂಸ್ಥೆ, ಶೇಷಗಿರಿ ಪಿಕಳೆ ಅವರ ಪುತ್ಥಳಿಯನ್ನು ಸಹ ನಿರ್ಮಿಸುತ್ತದೆ ಹಾಗೆ ಅವರ ಹೆಸರನ್ನು ಅಜರಾಮರ ಗೊಳಿಸುವ ಸಲುವಾಗಿ ಬಿ.ಇಡಿ ಕಾಲೇಜಿಗೆ ಶೇಷಗಿರಿ ಪಿಕಳೆ ಅವರ ಹೆಸರನ್ನು ಹಾಗೂ ನರ್ಸಿಂಗ್ ಕಾಲೇಜಿಗೆ ಪ್ರೇಮಾ ಪಿಕಳೆ ಅವರ ಹೆಸರನ್ನು ಇಟ್ಟು ಗೌರವ ಸಲ್ಲಿಸುತ್ತದೆ ಎಂದು ಕೆ.ಎಲ್. ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹೇಳಿದರು.

ಅವರು ಸ್ಥಳೀಯ ಕೆ.ಎಲ್. ಇ ಸಂಸ್ಥೆಯಲ್ಲಿ ಪ್ರೇಮಾ ತಾಯಿ ಪಿಕಳೆ ಶಿಷ್ಯವೃಂದ ನಿರ್ಮಿಸಿದ ಪ್ರೇಮಾತಾಯಿ ಪಿಕಳೆಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡುತ್ತಾ ಉತ್ತರ ಕನ್ನಡ ಬುದ್ಧಿವಂತರ ಜಿಲ್ಲೆ ಆಗಿದ್ದು ನಮ್ಮ ಸಂಸ್ಥೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಿದೆ. ಹಾಗೆ ಪಿಕಳೆ ದಂಪತಿಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರ್ಯ ಸದಾ ಮಾಡುತ್ತೇವೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಶಿಕ್ಷಣದಿಂದ ವಂಚಿತರಾಗಿದ್ದ ಸಮಯದಲ್ಲಿ ಸಂಸ್ಥೆ ಕಟ್ಟಿ ಅಪಾರ ಜನರಿಗೆ ಶಿಕ್ಷಣ ಒದಗಿಸಿದ ಕೀರ್ತಿ ಪ್ರೇಮಾ ತಾಯಿ ಪಿಕಳೆ ಅವರಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಕಾರ್ಯದರ್ಶಿಗಳಾದ ಡಾ. ಡಿ. ಎಲ್. ಭಟ್ಕಳ ಅವರು ಕೆ.ಎಲ್. ಇ ಸಂಸ್ಥೆಯೊಂದಿಗೆ ಎನ್.ಎಸ್.ಎಸ್. ಟ್ರಸ್ಟ್ ಅನ್ನು ಪ್ರೇಮಾ ಪಿಕಳೆ ದಂಪತಿಗಳು ವಿಲೀನಗೊಳಿಸಿದ ನಂತರ ಸಂಸ್ಥೆ ಅಪಾರ ಹಣವನ್ನು ವ್ಯಯಿಸಿ,ಸುಧಾರಿಸಿ, ಸಂಸ್ಥೆಯ ಅಜರಾಮರವಾಗಿ ಉಳಿಯುವಂತೆ ಡಾ. ಪ್ರಭಾಕರ ಕೋರೆಯವರ ಸಾರಥ್ಯದಲ್ಲಿ ನಡೆಸಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಇಡಿ ಕಾಲೇಜ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಿಕಳೆ ಶಿಷ್ಯ ವೃಂದದ ಅಧ್ಯಕ್ಷರಾದ ನಾರಾಯಣ ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಸ್ಥಳೀಯ ಸಂಯೋಜಕರಾದ ಆರ್. ನಟರಾಜ ಉಪಸ್ಥಿತರಿದ್ದರು. ಶಿಕ್ಷಕರಾದ ದೇವರಾಯ ನಾಯಕ ವಂದಿಸಿದರು. ಶಿಕ್ಷಕ ರಾಜೇಶ ನಾಯಕ ನಿರೂಪಿಸಿದರು. ಕಂಚಿನ ಪುತ್ಥಳಿ ಅನಾವರಣದ ಸಂದರ್ಭದಲ್ಲಿ ಶಾಸಕರಾದ ಸತೀಶ ಶೈಲ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button