ಪ್ರಗತಿವಾಹಿನಿ ಸುದ್ದಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಧಾರವಾಡ ನಗರದ ಕೆಲಗೇರಿ ರಸ್ತೆಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಬರುವ ಅಕ್ಟೋಬರ್ ೩ ರಿಂದ ೧೨ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಹಲವಾರು ಪವಾಡಗಳ ಮೂಲಕ ಭಕ್ತರ ಇಷ್ಟಾರ್ಥ ಸಿದ್ದಿಸುವ ತಾಯಿ ಶ್ರೀ ಕರಿಯಮ್ಮ ದೇವಿ ನಗರದ ಕೆಲಗೇರಿ ರಸ್ತೆಯ ಶಾಂತಿ ನಿಕೇತನ ನಗರದಲ್ಲಿ ನೆಲೆಗೊಂಡಿದ್ದು, ನಂಬಿದ ಅನೇಕ ಭಕ್ತರ ಆದಿಶಕ್ತಿಯಾಗಿ ಆಶೀರ್ವದಿಸುತ್ತಿದ್ದಾಳೆ.
ಶ್ರೀ ಕರಿಯಮ್ಮ ದೇವಿಗೆ ಛತ್ರಪತಿ ಶಿವಾಜಿ ಮಹಾರಾಜರು ಸಹ ಭಕ್ತರಾಗಿದ್ದರು. ಇದು ಭಾವ್ಯೆಕ್ಯತೆಯ ಕೇಂದ್ರವು ಸಹ ಆಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಅಭಿವೃದ್ದಿಗೆ ಈಗಾಗಲೇ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗಿದೆ. ಕಳೆದ ವರ್ಷ ದೇವಿಗೆ ೪೦ ತೊಲಿ ಬಂಗಾರದ ಕೀರಿಟ ದೇವಿಗೆ ಧರಿಸಿ ಭಕ್ತರು ಕೃತಾರ್ಥರಾಗಿದ್ದಾರೆ.
ಈ ಬಾರಿಯ ನವರಾತ್ರಿ ಉತ್ಸವವು ಅಕ್ಟೋಬರ್ ೩ ರಿಂದ ೧೨ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದ್ದು, ಪ್ರತಿದಿನ ಬೆಳ್ಳಿಗ್ಗೆ ಉಪಹಾರ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ದೇವಿಗೆ ಅಕ್ಟೋಬರ್ ೩ ರಂದು ಶ್ರೀ ರೇಣುಕಾ ಯಲ್ಲಮ್ಮ, ಅ.೪ ರಂದು ಶ್ರೀ ಗಾಯತ್ರಿ ದೇವಿ, ಅ. ೫ ರಂದು ಶ್ರೀ ಪದ್ಮಾವತಿ , ಅ. ೬ ರಂದು ಶ್ರೀ ಅಂಭಾಭವಾನಿ, ಅ.೭ ರಂದು ಶ್ರೀ ಮಹಾಗೌರಿ, ಅ.೮ ರಂದು ಶ್ರೀ ಅನ್ನಪೂರ್ಣೇಶ್ವರಿ, ಅ.೯ ರಂದು ಶ್ರೀ ಮಹಾಸರಸ್ವತಿ, ಅ.೧೦ ರಂದು ಶ್ರೀ ಶಾಖಾಂಬರಿ, ಅ.೧೧ ರಂದು ಶ್ರೀ ಮಹಾಲಕ್ಷ್ಮಿ, ಅ.೧೨ ರಂದು ಶ್ರೀ ಬಗಳಾಮುಖಿ ದೇವಿ ಅಲಂಕಾರ ಮಾಡಲಾಗುತ್ತದೆ. ಅಂದೆ ಸಾಯಂಕಾಲ ೪.೩೦ ಕ್ಕೆ ದೇವಿಯ ಅಲಂಕೃತ ಪಲ್ಲಕ್ಕಿ ಉತ್ಸವವು ನಡೆಯಲಿದೆ.
ಅ.೯ ರಂದು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅ.೧೦ ರಂದು ಸಾಯಂಕಾಲ ೪.೩೦ ಕ್ಕೆ ಸುಮಂಗಲೆಯರಿಂದ ಕುಂಕುಮಾರ್ಚನೆ ನಡೆಯಲಿದೆ. ಒಂಬತ್ತು ದಿನಗಳ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ದೇವಸ್ಥಾನದ ಟ್ರಸ್ಟ್ ಛೇರಮನರು ಹಾಗೂ ಶಾಸಕರಾದ ಎನ್. ಎಚ್ ಕೋನರಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ