Latest

*ತಿರುಪತಿಗೆ ಹೋದ ಮೂವರಲ್ಲಿ ಓರ್ವ ಮಿಸ್ಸಿಂಗ್, ಮತ್ತೋರ್ವ ಆತ್ಮಹತ್ಯೆಗೆ‌ ಶರಣು*

ಪ್ರಗತಿವಾಹಿನಿ ಸುದ್ದಿ: ತಿರುಪತಿಗೆ ಹೋಗಿದ್ದ ಒಂದೇ ಏರಿಯಾದ ಮೂವರು ಸ್ನೇಹಿತರ ಪೈಕಿ ಒಬ್ಬ ನಾಪತ್ತೆಯಾಗಿದ್ದು, ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. 

ಘಟನೆಯ ಬಗ್ಗೆ ಪೊಲೀಸರಲ್ಲಿ ಹಲವು ಸಂಶಯಗಳು ಮೂಡಿದ್ದು, ಮೂವರ ಪೈಕಿ ಉಳಿದಿರುವ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಹುಬ್ಬಳ್ಳಿಯ ಬಾಣತಿಕಟ್ಟಿಯ ನಿವಾಸಿಗಳಾದ ಹನುಮಂತ, ಶಿವಾಜಿ ಹಾಗೂ ಗಣೇಶ ಕಳೆದ ವಾರ ತಿರುಪತಿಗೆ ಹೋಗಿದ್ದರು. ಆದರೆ ವಾಪಸ್ ಬರುವಾಗ ಹನುಮಂತ ಇರಲಿಲ್ಲ. ಈ ಬಗ್ಗೆ ಕುಟುಂಬಸ್ಥರು ವಿಚಾರಿಸಿದಾಗ ಹನುಮಂತ ತಿರುಪತಿ ದೇವಾಲಯದ ಬಳಿ ಮೂರ್ಛೆ ಹೋಗಿದ್ದ. ಆತನನ್ನು ಟಿಟಿಡಿ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಾವು ದೇವರ ದರ್ಶನ ಪಡೆದು ಬಳಿಕ ಆಸ್ಪತ್ರೆಗೆ ಹೋದಾಗ ಅಲ್ಲಿ ಹನುಮಂತ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಆತ ಸಿಗಲಿಲ್ಲ. ಹೀಗಾಗಿ ಹುಬ್ಬಳ್ಳಿಗೆ ವಾಪಸಾದೆವು ಎಂದು ಹೇಳಿದ್ದಾರೆ.

ಈ ವೇಳೆ ಆಕ್ರೋಶಗೊಂಡ ಹನುಂತನ ಕುಟುಂಬಸ್ಥರು ಶಿವಾಜಿ ಹಾಗೂ ಗಣೇಶನಿಗೆ ಬೈದು ಬುದ್ದಿ ಹೇಳಿದ್ದಾರೆ. ತಿರುಪತಿಗೆ ಹೋಗಿ ಆತನನ್ನು ಹುಡಿಕಿಕೊಂಡು ಬನ್ನಿ ಎಂದು ಒತ್ತಡ ಹಾಕಿದ್ದಾರೆ. ಇದಾದ ಬೆನ್ನಲ್ಲೇ ಶಿವಾಜಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಆತನ ಆತ್ಮಹತ್ಯೆಗೆ ಕಾರಣ ಏನೆಂಬುದೇ ತಿಳಿದು ಬಂದಿಲ್ಲ.

ಈ ಘಟನೆಗಳ ನಡುವೆ ಹನುಮಂತನ ಕುಟುಂಬಸ್ಥರು ಗಣೇಶನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಿರುಪತಿಯಲ್ಲಿ ನಾಪತ್ತೆಯಾಗಿರುವ ಹನುಮಂತನನ್ನು ಹುಡುಕಿಕೊಡಿ ಎಂದು ಕೇಳಿದ್ದಾರೆ. ಆದರೆ ಈ ಘಟನೆಯ ಸುತ್ತಲೂ ಹಲವು ಅನುಮಾನಗಳನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಮೂವರು ಸ್ನೇಹಿತರು. ಯಾವುದೇ ಮೊಬೈಲ್ ಫೋನ್‌ಗಳನ್ನು ಕೂಡಾ ಬಳಸುತ್ತಿಲ್ಲ. ಈ ಹಿನ್ನೆಲೆ ಈ ಕೇಸ್ ಕಷ್ಟಕರವೂ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button