ಪ್ರಗತಿವಾಹಿನಿ ಸುದ್ದಿ: ಬಿಪಿಎಲ್ ಕಾರ್ಡ್ ಹೊಂದಿದವರು ಒಂದು ವೇಳೆ ಸ್ವಂತ ಕಾರು ಹೊಂದಿದ್ದರೆ ಅಂತಹವರ ಪಡಿತರ ಚೀಟಿ ರದ್ದಾಗಲಿದೆ. ಆಹಾರ ಇಲಾಖೆ ಇಂತಹ 14 ಮಾನದಂಡಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಪಟ್ಟಿಯಲ್ಲಿರುವವರು ಬಿಪಿಎಲ್ ಮೂಲಕ ಸೌಲಭ್ಯಗಳನ್ನು ಹೊಂದುವಂತಿಲ್ಲ ಎಂದಿದೆ.
ದೇಶಾದ್ಯಂತ ಲಕ್ಷಾಂತರ ಮಂದಿ ಅರ್ಹರಲ್ಲದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದು, ಅದರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಅಕ್ರಮವನ್ನು ತಡೆಯಲು ಕೇಂದ್ರ ಮಹತ್ವದ ಕ್ರಮವನ್ನು ಕೈಗೊಳ್ಳುತ್ತಿದೆ. ಆಹಾರ ಇಲಾಖೆ ಪಡಿತರ ಚೀಟಿಯಲ್ಲಿ ಆಗಿರುವ ಅಕ್ರಮವನ್ನು ಪತ್ತೆ ಹಚ್ಚುತ್ತಿದೆ.
ಇದೀಗ ರಾಜ್ಯದಲ್ಲಿಯೇ ಸುಮಾರು 22 ಲಕ್ಷ ಪಡಿತರ ಚೀಟಿಗಳು ಅನರ್ಹವಾಗಿವೆ ಎಂಬ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಕಾರು ಹೊಂದಿದವರು, 100 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನ, ತೆರಿಗೆ ಪಾವತಿದಾರರು, 7.5 ಎಕರೆ ಭೂಮಿಗಿಂತ ಹೆಚ್ಚಿನ ಜಮೀನು ಹೊಂದಿದವರು, ಕಾಲೇಜು ನೌಕರರು, ಗುತ್ತಿಗೆದಾರರು, ಕೈಗಾರಿಕೋದ್ಯಮಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿರುವವರ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು ಮಾಡಲಾಗುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ನೀಡಲಾಗುತ್ತದೆ. ಆದರೆ ಬಡತನ ರೇಖೆಗಿಂತ ಮೇಲಿರುವ ಲಕ್ಷಾಂತರ ಮಂದಿ ಈ ಕಾರ್ಡ್ ಪಡೆದಿದ್ದಾರೆ. ಇ- ಆಡಳಿತ ಕೇಂದ್ರದ ಮೂಲಕ ಡೇಟಾ ಸಂಗ್ರಹಿಸಿರುವ ಆಹಾರ ಇಲಾಖೆ ಬರೋಬ್ಬರಿ 22,62,413 ರೇಷನ್ ಕಾರ್ಡ್ ಅನರ್ಹ ಎಂದು ಪಟ್ಟಿ ಮಾಡಿದೆ. ಮುಂದಿನ 10 ದಿನಗಳಲ್ಲಿ 22 ಲಕ್ಷ ಪಡಿತರ ಚೀಟಿಗಳು ರದ್ದಾಗಲಿವೆ. ಇದರ ಜೊತೆಗೆ ಅಕ್ರಮವಾಗಿ ಪಡೆದಿರುವ ಕಾರ್ಡ್‌ಗಳು ಪತ್ತೆಯಾದರೆ ಆ ಕಾರ್ಡ್ ಕೂಡ ರದ್ದಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ