Karnataka News

ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಾಳ

ಗೀತಾ ಕುಲಹಳ್ಳಿ
ಅವರ ಮನ್ಯಾಗೇನು ಕಮ್ಮಿ… ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಾಳ ಅಂತ ಒಂದೇ ನುಡಿಗಟ್ಟಿನಲ್ಲಿ ಎಷ್ಟು  ಛಂದಾಗಿ ಆ ಮನೆಯವರ ಆರ್ಥಿಕ ಸುಭದ್ರತೆಯನ್ನು
ಕಣ್ಣಿಗೆ ಕಟ್ಟುವಂತೆ ಹೇಳಿಬಿಡುತ್ತಿದ್ದರು ನಮ್ಮ ಹಿರಿಯರು… ದೊಡ್ಡಬಂಗ್ಲೆ, ಆಳು-ಕಾಳು, ಕಾರು ಗಾಡಿ, ಬಂಗಾರದ ಹೊಗಿ ಆಡ್ತದ…!!!! ಅಂದ್ರ ಸಾಕು, ಆವರ ಶ್ರೀಮಂತಿಕೆಯ ಮಟ್ಟ ಸ್ಪಷ್ಟವಾಗಿ ವಾಚ್ಯವಾಗುತ್ತಿತ್ತು.
ನಾವು ಚಿಕ್ಕವರಿದ್ದಾಗ ಈ ನುಡಿಗಟ್ಟನ್ನು ಕೇಳಿದ್ದು ಬಹುಶಃ ನನ್ನ ಅಜ್ಜಿ ಊರಿನ ದೊಡ್ಡಮನೆ ಶ್ರೀನಿವಾಸಾಚಾರ್ಯರ ಮನೆತನದ ಬಗ್ಗೆ ಹೇಳುವಾಗ.
ಅಲ್ಲಿ ಲಕ್ಷ್ಮೀ ಕಾಲು ಮುರಕೊಂಡು ಯಾಕ ಬೀಳಬೇಕು??!! ಏಕೆ ಬಿದ್ದಳು?!! ಪುರಾಣದಲ್ಲಿ ಈ ಕತೆ ಉಪಕತೆ ಕೇಳಿದ್ದು ನೆನೆಪಿಲ್ಲ. ಲಕ್ಷ್ಮೀ ಕಮಲದ ಹೂವಿನ ಕುರ್ಚಿ ಮೇಲೆ ಹಾಯಾಗಿ ಕುಳಿತಾಕೆ. ಶ್ರೀ ಹರಿಯ ವಕ್ಷದಲಿ ನೆಲೆಸಿದಾಕೆ, ಹಾಲ್ಗಡಲಲಿ ಅನಂತಶಯನನೊಡನೆ ರಮಿಸುವಾಕೆ.  ಅವರಿವರ ಮನೆಯಲ್ಲಿ ಕಾಲ್ಮುರಿದುಕೊಂಡು ಬಿದ್ದಳು ಎಂದರೆ…ಛೇ!! ಎಂದುಕೊಂದಿದ್ದೆ ಬಾಲ್ಯದಲ್ಲಿ.
  ಶುಕ್ರವಾರದ  ಸಂಜೆ ಮನೆಯಲ್ಲಿ ಲಕ್ಷೀ ಪೂಜೆ ಮಾಡುತ್ತಿದ್ದ ಅಮ್ಮ ಪ್ರತಿಸಲ  “ಭಾಗ್ಯದ ಲಕ್ಷ್ಮೀ ಬಾರಮ್ಮಾ “…. ಎಂದು ಶುರುಮಾಡಿ” ಬಂದಳೊಡೆ ಮಂದಿರದೊಳು ಭಾಗ್ಯದಾ ಲಕ್ಷ್ಮೀ….” ಎಂದೆಲ್ಲಾ ಹಾಡಿ ಹೊಗಳಿ ಲಕ್ಷ್ಮೀಯನ್ನು ಅಟ್ಟಕ್ಕೇರಿಸಿ ಮಂಗಳಾರತಿ ಮಾಡುತ್ತಿದ್ದಂತೆ ನಮಗೆ ಪ್ರಸಾದವಾಗಿ ಸಿಗುತ್ತಿದ್ದ ಪುಟಾಣಿ -ಸಕ್ಕರೆ ಅತ್ಯಂತ ಪ್ರಿಯವಾದ ತಿನಿಸಾಗಿತ್ತು.

ಪುರಂದರದಾಸರ  ಕೀರ್ತನೆ

ಪುಟ್ಟ ಬೆಳ್ಳಿಯ  ಬಟ್ಟಲಲ್ಲಿ ಪುಟ್ಟ ಬೆಳ್ಳಿ ಚಮಚದಿಂದ ನಮ್ಮ ಪುಟ್ಟ ಅಂಗೈ ಮೇಲೆ ಹಾಕುತ್ತಿದ್ದ ಆ ಪ್ರಸಾದದ ರುಚಿಗೆ ಇಂದಿನ ಯಾವ ಕ್ಯಾಡಬರಿ ಚಾಕೋಲೇಟುಗಳೂ ಸರಿಸಮವಾಗಲಾರದು.
 ಸ್ವತಃ ನವಕೋಟಿ ನಾರಾಯಣರೆನಿಸಿಕೊಂಡಿದ್ದರೂ ಇಹಲೋಕದ ಎಲ್ಲ ಭೋಗ ಭಾಗ್ಯಗಳನ್ನು ತ್ಯಜಿಸಿ ದಾಸವರೇಣ್ಯರೆನಿಸಿದ ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ಮಾತ್ರ ಲಕ್ಷಿಯನ್ನು ಮನೆಗೆ ಕರೆತರುವ ಸದಾ ಮನೆಯಲ್ಲಿಯೇ ನೆಲೆಸುವಂತೆ  ಬೇಡಿಕೊಳ್ಳುವ ನಾನಾತರಹದ ವರ್ಣನೆಯಿಂದ  ಲಕ್ಷ್ಮೀಯನ್ನು ಸುಪ್ರಸನ್ನಗೊಳಿಸಿಕೊಳ್ಳುವ ವಿಧಿ ವಿಧಾನಗಳನ್ನು ಬಹುಶಃ ಎಲ್ಲ ಗೃಹಿಣಿಯರಿಗಾಗಿ  ಬಲು ಸುಂದರವಾಗಿ ಗೇಯವಾಗಿ ಕಟ್ಟಿ ಕೊಟ್ಟಿದ್ದಾರೆ.
ಲಕ್ಷ್ಮೀಯನ್ನು ಕಾಯಂ ಆಗಿ ತಮ್ಮ ಮನೆಯಲ್ಲಿ ನೆಲೆಸುವಂತೆ ಮಾಡಲು ಇನ್ನೂ ಒಂದು ವಿಶೇಷ  ತಂತ್ರವನ್ನು ಹೇಳಿಕೊಟ್ಟಿದ್ದಾರೆ. ಕಡೆಗೆ ನಮ್ಮ ನಿವಾಸದ ಒಡೆಯ ಅನಂತಾಧೀಶ ಒಡೆಯನಿದ್ದಲ್ಲಿಗೆ ಮಡದಿ ಬರುವುದು ರೂಢಿಗುಚಿತವದು ನಡೆ ನಮ್ಮ ಮನೆಗೆ…. ಎಂದು ಆದೇಶಿಸಿದ್ದಾರೆ.

ಪ್ರಧಾನಮಂತ್ರಿ ಹೊಸ ಯೋಜನೆ

 ಒಟ್ಟಿನಲ್ಲಿ ಭಾರತದ ಬಹುತೇಕ ಮನೆ,  ಮಂದಿರ, ಮಠಗಳಲ್ಲಿ ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಿರುವ  ಸುದ್ದಿ ನಮ್ಮ ಮಾನ್ಯ ಪ್ರಧಾನಮಂತ್ರಿ ಅವರಿಗೆ ಈ ಲಕ್ಷ್ಮೀಯನ್ನು ಚಲನಶೀಲಳನ್ನಾಗಿ ಮಾಡಬೇಕೆಂದು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.
 ಕಾಲು ಮುರಿದುಕೊಂಡು ಬೀಳುವುದು ಮೂಲೆ ಗುಂಪಾಗಿರುವುದು ನಿಷ್ಪ್ರಯೋಜಕರಾಗಿರುವುದು ಯಾರಿಗೂ ಇಷ್ಟವಿಲ್ಲದ ವಿಷಯವೇ ಸರಿ…!! ಕೈಯಲ್ಲಿ ಬಡಿಗೆ  ಗಾಲಿಚಕ್ರದ ಕುರ್ಚಿ …ಹೀಗೆ  ನಾನಾತರಹದ ಕೃತಕ ಉಪಾಯದಿಂದ ಬಿದ್ದವರು ಎದ್ದುನಿಂತು  ಮತ್ತೆ ಚಲನಶೀಲರಾಗಬೇಕೆಂಬುದೇ ಎಲ್ಲರ ಅಭಿಮತ.
ಓಡಬೇಕು, ನಡೆಯಬೇಕು, ಕುಂಟಬೇಕು, ತೆವಳಬೇಕು, ಒಟ್ಟಿನಲ್ಲಿ ಮುಂದೆ ಸಾಗಬೇಕು ನಿಂತಲ್ಲೇ ನಿಲ್ಲಬಾರದು ಎಂದು ಸರ್ವ ಸಾಮಾನ್ಯ ಅಭಿಪ್ರಾಯ.

ಚಲನಶೀಲಳಾಗಿರಲಿ

ಮನೆಗಳಲ್ಲಿ , ದೇವಾಲಯಗಳಲ್ಲಿ ಸುಮ್ಮನೇ ಬಿದ್ದುಕೊಂಡಿರುವ ಬಂಗಾರ ತನ್ನ  ಅನುತ್ಪಾದಕತೆಯ  ವಿಕಲತೆಯನ್ನು ಮೆಟ್ಟಿನಿಂತು ದೇಶದ ಪ್ರಗತಿಗೆ  ಕೈ ಜೋಡಿಸಬೇಕೆಂಬುದೇ ನಮ್ಮ ಹಿರಿಯ ತಜ್ಞರ ದೂರದೃಷ್ಟಿಯ ಯೋಜನೆ.
 ಲಕ್ಷ್ಮೀ ಕಾಲು ಮುರಿದುಕೊಂಡು ಬೀಳದಿರಲಿ,  ಚಂಚಲೆಯೂ ಆಗದಿರಲಿ, ಚಲನಶೀಲಳಾಗಿರಲಿ.  ಲಕ್ಷ್ಮೀಯ ಸ್ನೇಹಲೇಪದಿಂದ ಪ್ರಗತಿಯ ಗಾಲಿಗಳು ಸರಾಗವಾಗಿ  ಸುಲಲಿತವಾಗಿ ತಿರುಗತೊಡಗಿದರೆ ಎಲ್ಲರ ಬಾಳು ಬಂಗಾರವಾಗುತ್ತದೆ ಎಂಬುದೇ ಪ್ರಧಾನಮಂತ್ರಿಗಳ ಸದಾಶಯ.
ಎಲ್ಲೆಡೆ ದ್ವೇಷದ ಅಸಹನೆಯ ಹೊಗೆ ಆಡುವುದು ಬೇಡ. ಎಲ್ಲರ ಮನೆಯಲ್ಲಿ ಬಂಗಾರದ ಹೊಗೆ ಆಡಲಿ. ಮಾತಿನಲಿ ಅಂತಃಕರಣದ ಬಿಸುಪು ಇರಲಿ ಎಂದೇನೋ  ಗಹನವಾದ ಯೋಚನೆಯಲ್ಲಿರುವಾಗ ದೂರವಾಣಿ  ಟ್ರೀಂ..ಗುಟ್ಟಿತು.
ನಮ್ಮ ಮನೆಯ ಲ್ಲಿ ಪಾತ್ರೆ ತೊಳೆಯಲು ಬರುವ ಲಕ್ಷ್ಮೀಬಾಯಿ ತಮ್ಮ ಮನೆಯ ಬಚ್ಚಲಲ್ಲಿ ಜಾರಿಬಿದ್ದು ಕಾಲು ಮುರಿದುಕೊಂಡ ಸುದ್ದಿಯನ್ನು ಅವಳ ಮಗ ವರದಿ ಒಪ್ಪಿಸಿ, ಇನ್ನೂ ಒಂದು ತಿಂಗಳಂತೂ  ಕೆಲಸಕ್ಕೆ ಬರಲಾಗುವುದಿಲ್ಲವೆಂಬ ಕಹಿ ಸತ್ಯವನ್ನು ಅರುಹಿದ. ಆತನಿಗೆ ಸಂತೈಕೆಯ ಒಂದೆರಡು ಮಾತು ಹೇಳಿ ಫೋನನ್ನು ಕೆಳಗಿಟ್ಟೆ. ಇನ್ನೊಂದು ತಿಂಗಳು ಮನೆಯ ಹೆಚ್ಚಿನ ಕೆಲಸಗಳನ್ನೆಲ್ಲ ನಿಭಾಯಿಸುವ ಯೋಜನೆಗೆ ಮನವನ್ನು  ಅಣಿಗೊಳಿಸತೊಡಗಿದೆ.
ರೂಪೇಷು ಲಕ್ಷ್ಮೀ…. ಕಾರ್ಯೇಷು  ದಾಸಿ …. ಹೀಗೆ ಇನ್ನೇನೋ ಹತ್ತು ಹಲವು ಹಳವಂಡಗಳು ನೆನಪಿಗೆ ಬಂದು ಪಾತ್ರೆ ಬಟ್ಟೆತೊಳೆಯುವ ಕೆಲಸಕ್ಕೆ  ಸಿದ್ಧಳಾದೆ.
ಗೀತಾ ಕುಲಹಳ್ಳಿ ಅವರ ಈ ಹಿಂದಿನ ಲೇಖನ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button