Karnataka NewsLatest

*ಕೇಕ್ ತಿಂದು ಮಗು ಸಾವು: ತಂದೆ-ತಾಯಿ ಸ್ಥಿತಿ ಚಿಂತಾಜನಕ*

ಪ್ರಗತಿವಾಹಿನಿ ಸುದ್ದಿ: ಕೇಕ್ ತಿಂದು ಅಸ್ವಸ್ಥಗೊಂಡಿದ್ದ ಒಂದೇ ಕುಟುಂಬದ ಮೂವರಲ್ಲಿ ಮಗು ಸಾವನ್ನಪ್ಪಿದ್ದು, ತಂದೆ ಹಾಗೂ ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಈ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಮೃತ ಮಗುವನ್ನು ಧೀರಜ್ (5) ಎಂದು ಗುರುತಿಸಲಾಗಿದೆ. ತಂದೆ ಬಾಲರಾಜ್ ಮತ್ತು ತಾಯಿ ನಾಗಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಲರಾಜ್ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಮಗನಿಗಾಗಿ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜೊತೆ ಸೇರಿ ಮೂವರು ಕೇಕ್ ತಿಂದಿದ್ದರು. ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಧೀರಜ್ ತೀವ್ರ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಲರಾಜ್, ನಾಗಲಕ್ಷ್ಮಿ ದಂಪತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೆ.ಪಿ ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್‌ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಫುಡ್ ಪಾಯಿಸನ್ ನಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.

Home add -Advt

Related Articles

Back to top button