Latest

ದೇವೇಗೌಡ ಹೇಳಿದ್ದು ನಿಜವಾದರೆ ಬಿಜೆಪಿ ಮರ್ಯಾದೆ ಹರಾಜು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಭೀಕರ ಪ್ರವಾಹ ಬಂದು 2 ತಿಂಗಳು ಕಳೆದಿದೆ. ರಾಜ್ಯದ ಬಳಿ ಪರಿಹಾರ ಕಾರ್ಯಕ್ಕೆ ಹಣವಿಲ್ಲ. ಕೇಂದ್ರ ಕೊಡುತ್ತಿಲ್ಲ. ಈ ಸಂಕಷ್ಟದಿಂದಾಗಿ ಕರ್ನಾಟಕದ ಬಿಜೆಪಿ ಸರಕಾರ ಸಾಕಷ್ಟು ಪರದಾಡಬೇಕಾಯಿತು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಪ್ರವಾಹ ಪರಿಸ್ಥಿತಿಯನ್ನು ಖುದ್ದು ಅವಲೋಖಿಸಿ ಹೋಗಿದ್ದಾರೆ. ಕೇಂದ್ರದ ತಂಡವೇ ಬಂದು ಹೋಗಿದೆ. ರಾಜ್ಯ ಸಲ್ಲಿಸಿದ ಪ್ರವಾಹ ಪರಿಸ್ಥಿತಿ ವರದಿಯೇ ಸರಿ ಇಲ್ಲ ಎಂದು ಕೇಂದ್ರ ತಿರಸ್ಕರಿಸಿದ್ದೂ ಆಯಿತು.

ವಿರೋಧ ಪಕ್ಷಗಳಷ್ಟೇ ಅಲ್ಲ ಪಕ್ಷದೊಳಗೂ ತೀವ್ರ ಟೀಕೆಗಳು ಕೇಳಿ ಬಂದವು. ರಾಜ್ಯ ಮತ್ತು ಕೇಂದ್ರದ ಮಂತ್ರಿಗಳು ಜನರನ್ನು ಹಾಗೂ ಮಾಧ್ಯಮಗಳನ್ನು ಎದುರಿಸಲಾಗದಂತಹ ಸ್ಥಿತಿಗೆ ಸಿಲುಕಿ ಒದ್ದಾಡಿದರು. ವಿರೋಧ ಪಕ್ಷಗಳಂತೂ ರಾಜಿನಾಮೆ ಕೊಟ್ಟು ಮನೆಗೆ ಹೋಗಿ ಎಂದೆಲ್ಲ ವಾಗ್ದಾಳಿ ನಡೆಸಿದವು. ಸಾಕಷ್ಟು ವಾಕ್ಸಮರವೇ ನಡೆಯಿತು.

1200 ಕೋಟಿ ಬಿಡುಗಡೆ

ಇಷ್ಟೆಲ್ಲ ಆದ ನಂತರ ಕೇಂದ್ರ ಸರಕಾರ 1,200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವುದಾಗಿ ಪ್ರಕಟಿಸಿತು. 38 ಸಾವಿರ ಕೋಟಿ ರೂ. ನಷ್ಟಕ್ಕೆ 2 ತಿಂಗಳ ನಂತರ 1,200 ಕೋಟಿ ರೂ. ಪರಿಹಾರ ನೀಡಿದ್ದಕ್ಕೆ ಮತ್ತೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಕೇಂದ್ರ ಕೊಡುವುದು ಇಷ್ಟೇ ಹಣವೇ? ಅಥವಾ ಇದು ಮಧ್ಯಂತರ ಪರಿಹಾರವೇ? ಮಧ್ಯಂತರ ಪರಿಹಾರವಾದರೆ ಇಷ್ಟು ವಿಳಂಬವೇಕಾಯಿತು? ಎನ್ನುವ ಪ್ರಶ್ನೆಗಳೆಲ್ಲ ಬಂದಿತು.

1,200 ಕೋಟಿ ಬಿಡುಗಡೆ ಬಿಜೆಪಿಯ ನಾಯಕರಿಗೆ ಸ್ವಲ್ಪ ಉಸಿರಾಡುವಂತಾಯಿತು. ಈ ಹಣದ ಬಗ್ಗೆ ಮನಸ್ಸಿಗೆ ಬಂದಂತೆ ವ್ಯಾಖ್ಯಾನ ಮಾಡತೊಡಗಿದರು. ಮರ್ಯಾದೆ ಮುಚ್ಚಿಕೊಳ್ಳಲು ಕೇಂದ್ರವನ್ನು ಹಾಡಿಹೊಗಳಿದರು.

ದೇವೇಗೌಡ ಬಾಂಬ್

ಇದೀಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಇದನ್ನು ಕೇಳಿದ ಬಿಜೆಪಿಗೆ ಕಾಲಿನ ಬುಡಕ್ಕೇ ಬಾಂಬ್ ಇಟ್ಟಂತಾಗಿದೆ. ದೇವೇಗೌಡ ಹೇಳಿದ ಮಾತು ನಿಜವೇ ಆಗಿದ್ದಲ್ಲಿ ಬಿಜೆಪಿಗೆ ಮರ್ಯಾದೆ ಕಾಪಾಡಲು ಅನ್ಯ ಮಾರ್ಗವೇ ಇಲ್ಲದಂತಾಗಿದೆ.

ಯಾವ ರೀತಿಯಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ಮಂತ್ರಿಗಳು ಮತ್ತು ರಾಜ್ಯದ 25 ಬಿಜೆಪಿ ಸಂಸದರ ಸ್ಥಿತಿಯಂತೂ ತೀರಾ ಅವಮಾನಕರವಾಗಲಿದೆ.

ಇಷ್ಟಕ್ಕೂ ದೇವೇಗೌಡ ಹೇಳಿದ್ದೇನು?

ಕೇಂದ್ರ ಸರಕಾರ ಈಗ ಬಿಡುಗಡೆ ಮಾಡಿರುವ 1200 ಕೋಟಿ ರೂ. ರಾಜ್ಯದಲ್ಲಿ ಸಧ್ಯ ಬಂದಿರುವ ಪ್ರವಾಹದ ಪರಿಹಾರ ಅಲ್ಲವೇ ಅಲ್ಲವಂತೆ. ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಆಳ್ವಿಕೆ ಇದ್ದ ವೇಳೆಯಲ್ಲಿ ಸಹ ಕೆಲವೆಡೆ ಪ್ರವಾಹ ಬಂದಿತ್ತು.

ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 3,800 ಕೋಟಿ ರೂ ಪರಿಹಾರಪ ನೀಡುವಂತೆ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ಈಗ 1200 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಬಿಜೆಪಿ ಸರಕಾರದ ಕಾಲದ ಪ್ರವಾಹ ಪರಿಹಾರವೂ ಅಲ್ಲ, ಬಿಜೆಪಿ ಸರಕಾರದ ಪ್ರಸ್ತಾವನೆಗೆ ನೀಡಿದ ಪರಿಹಾರವೂ ಇಲ್ಲ ಎಂದು ದೇವೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ.

ಸತ್ಯ ಯಾವುದು?

ದೇವೇಗೌಡರ ಈ ಹೇಳಿಕೆ ಈಗ ಬಿಜೆಪಿಗೆ ದೊಡ್ಡ ಶಾಕ್ ನೀಡಿದೆ. ತನ್ನ ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿ ಉಂಟಾಗಿದೆ. ಮಾಜಿ ಪ್ರಧಾನಿಯೊಬ್ಬರು ಸರಿಯಾದ ಮಾಹಿತಿ ಪಡೆಯದೇ ಈ ಮಾತನ್ನು ಹೇಳಲು ಸಾಧ್ಯವಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹಾಗಾಗಿ ಈ ಬಗ್ಗೆ ಕೇಂದ್ರ ಸರಕಾರವೇ ಸ್ಪಷ್ಟನೆ ನೀಡಬೇಕಿದೆ.

ಒಂದೊಮ್ಮೆ ದೇವೇಗೌಡ ಹೇಳಿದ್ದೇ ನಿಜವಾದಲ್ಲಿ ಬಿಜೆಪಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ದೇವೇಗೌಡ ಸರಿಯಾದ ಮಾಹಿತಿ ಪಡೆಯದೇ ಹೇಳಿದ್ದರೆ ಮಾಜಿ ಪ್ರಧಾನಿಯಾಗಿ ಬೇಜವಾಬ್ದಾರಿಯಿಂದ ನಡೆದುಕೊಂಡಂತಾಗುತ್ತದೆ. ಹಾಗಾಗಿ ಸತ್ಯ ಯಾವುದು ಎನ್ನುವುದನ್ನು ಸಂಬಂಧಿಸಿದವರು ಬಹಿರಂಗಪಡಿಸಲೇ ಬೇಕಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button